ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಅಡಿಕೆಗೆ ಸಾಲು ಸಾಲು ರೋಗಗಳ ಕಾಟ

ಬೆಳೆಗಾರರ ನಲುಗಿಸುತ್ತಿರುವ ಹಿಡಿಮುಂಡಿ, ನುಸಿ, ಅಣಬೆ ರೋಗ
Last Updated 12 ಮಾರ್ಚ್ 2023, 5:55 IST
ಅಕ್ಷರ ಗಾತ್ರ

ಚನ್ನಗಿರಿ: ‘ಅಡಿಕೆ ನಾಡು’ ಎಂಬ ಖ್ಯಾತಿಯ ಪಡೆದಿರುವ ಚನ್ನಗಿರಿಯಲ್ಲಿ ಈಗ ಸಾಲು ಸಾಲು ರೋಗಗಳು ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿವೆ.

ಈಗಾಗಲೇ ಹಿಡುಮುಂಡಿ ರೋಗ ಬಾಧೆಯಿಂದ ಬಳಲಿದ್ದ ಬೆಳೆಗಾರರು ಪ್ರಸ್ತುತ ಸಾಲಿನಲ್ಲಿ ಕೆಂಪು, ಬಿಳಿ ನುಸಿ ಹಾಗೂ ಅಣಬೆ ರೋಗಗಳ ಹಾವಳಿಗೆ ನಲುಗುವಂತಾಗಿದೆ.

ಎರಡು ವರ್ಷಗಳಿಂದ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಹುತೇಕ ಕೆರೆಕಟ್ಟೆಗಳೆಲ್ಲಾ ತುಂಬಿ ತುಳುಕಾಡುತ್ತಿವೆ. ಸಾಮಾನ್ಯವಾಗಿ ಕೆರೆ ಸುತ್ತಲಿನ ಅಡಿಕೆ ತೋಟಗಳಿಗೆ ಶೀತ ಹೆಚ್ಚಾಗಿ ಹಿಡಿಮುಂಡಿಗೆ ರೋಗ ಕಾಣಿಸಿಕೊಳ್ಳುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಗಾಣದಕಟ್ಟೆ, ಹರೋನಹಳ್ಳಿ, ಜೋಳದಹಾಳ್, ಉಬ್ರಾಣಿ ಕೆಲವಡೆ ಹೊಸ ತೋಟದ ಸಣ್ಣ ಗಿಡಗಳಲ್ಲಿ ನುಸಿ ರೋಗ ಹೆಚ್ಚಾಗಿದೆ. ದಿಗ್ಗೇನಹಳ್ಳಿ, ಲಕ್ಷ್ಮೀಸಾಗರ, ಮಲ್ಲಿಗೆರೆ, ರಾಜಗೊಂಡನಹಳ್ಳಿ, ಮಾವಿನಹೊಳೆ ಭಾಗದಲ್ಲಿ ಕೆಲ ತೋಟಗಳಲ್ಲಿ ದೊಡ್ಡ ಗಿಡಗಳು ಹಳದಿ ರೋಗಕ್ಕೆ ತತ್ತರಿಸಿ ಹೋಗಿವೆ. ಹಲವಾರು ಭಾಗಗಳಲ್ಲಿ ಅಡಿಕೆ ಮರಗಳನ್ನೇ ಅಣಬೆ ರೋಗ ನಾಶಪಡಿಸಿವೆ.

ಪ್ರತಿ ವರ್ಷ ಅಡಿಕೆ ಬೆಳೆಯುವ ಪ್ರದೇಶ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ತಾಲ್ಲೂಕಿನಲ್ಲಿ 82 ಸಾವಿರ ಹೆಕ್ಟೇರ್ ಪ್ರದೇಶ ಕೃಷಿ ಭೂಮಿಯಿದ್ದು, 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತಿದೆ. 500 ಹೆಕ್ಟೇರ್‌ನಲ್ಲಿ ತೆಂಗು, 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳಯಲಾಗುತ್ತಿದೆ. ಅಡಿಕೆಗೆ ಉತ್ತಮ ಧಾರಣೆ ಸಿಗುತ್ತಿರುವ ಕಾರಣ ಪ್ರತಿ ವರ್ಷ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ಅಡಿಕೆ ತೋಟಗಳನ್ನು ಮಾಡಲಾಗುತ್ತಿದೆ.

ಅಣಬೆ ಮತ್ತು ಹಳದಿ ರೋಗ ಕೇವಲ ಅಡಿಕೆ ಮರಗಳಲ್ಲಿ ಮಾತ್ರ ಕಾಣಿಸಿಕೊಳ್ಳದೇ ತೆಂಗಿನ ಮರಗಳಿಗೂ ಕಾಣಿಸಿಕೊಂಡಿದೆ. ಗರಿಗಳ ಮೇಲೆ ಚುಕ್ಕೆಗಳು ಮೂಡಿ, ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅಣಬೆ ರೋಗ ಬಾಧಿತ ಮರಗಳು ನೋಡಲು ಆರೋಗ್ಯಕರವಾಗಿ ಹಾಗೂ ಹಸಿರಾಗಿ ಕಂಡರೂ ಇಳುವರಿ ಕಡಿಮೆಯಾಗಲು ಕಾರಣವಾಗುತ್ತದೆ. ಅಣಬೆ ರೋಗ ಬಿದ್ದ ಗಿಡಗಳು ಕ್ರಮೇಣ ಸತ್ತು ಹೋಗುತ್ತವೆ. ಈ ರೋಗ ಬೇರಿನ ಮೂಲಕ ಅಕ್ಕಪಕ್ಕದ ಮರಗಳಿಗೂ ಹರಡುತ್ತಿರುವುದು ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಅಣಬೆ ರೋಗ ಬಾಧಿತ ಮರಗಳನ್ನು ಬುಡ ಸಮೇತ ಕಿತ್ತು ಬೆಂಕಿ ಹಚ್ಚಿ ನಾಶಪಡಿಸುತ್ತಿದ್ದಾರೆ ಎಂದು ದಿಗ್ಗೇನಹಳ್ಳಿ ಗ್ರಾಮದ ಬೆಳೆಗಾರ ಡಿ.ಎಸ್. ಅಜ್ಜಪ್ಪ ಹೇಳಿದರು.

ತಾಲ್ಲೂಕಿನ ಬಹುತೇಕ ಅಡಿಕೆ ತೋಟಗಳಲ್ಲಿ ಕೆಂಪು ಮತ್ತು ಬಿಳಿ ನುಸಿ ರೋಗ ಕಂಡುಬಂದಿದೆ. ರೋಗದಿಂದ ಅಡಿಕೆ ಗಿಡಗಳ ಬೆಳವಣಿಗೆ ಕುಂಠಿತವಾಗಿದೆ ಎಂದು ಅವರು ಹೇಳಿದರು.

ತೋಟಗಾರಿಕೆ ಬೆಳೆಗಳಲ್ಲಿ ರೋಗ ಬಾರದಂತೆ ತಡೆಯಲು ಬೆಳೆಗಾರರು ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಅಡಿಕೆ ಗಿಡಗಳ ಸುತ್ತ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಕೆಂಪು ಹಾಗೂ ಬಿಳಿ ನುಸಿ ರೋಗ ಬಿದ್ದ ಅಡಿಕೆ ಗಿಡಗಳಿಗೆ ಕ್ಲೋರೋ ಮೈಟ್ ಕೀಟನಾಶಕದ ಜತೆಗೆ ಸಿಒಸಿ 2 ಗ್ರಾಂ ಸೇರಿಸಿ ಎಲೆಗಳಿಗೆ ಸಿಂಪಡಿಸಬೇಕು. ಇದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ವಿ. ರೋಹಿತ್ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT