ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಲೋಕಸಭಾ ಚುನಾವಣೆಗೆ ಅಧಿಕಾರಿಗಳು ಸನ್ನದ್ಧ

ಚುನಾವಣಾ ಅಧಿಕಾರಿ, ಎಂ.ಸಿ.ಸಿ ತಂಡ, ನೋಡಲ್ ಅಧಿಕಾರಿಗಳಿಗೆ ಚುನಾವಣಾ ತರಬೇತಿ
Published 23 ಫೆಬ್ರುವರಿ 2024, 6:32 IST
Last Updated 23 ಫೆಬ್ರುವರಿ 2024, 6:32 IST
ಅಕ್ಷರ ಗಾತ್ರ

ದಾವಣಗೆರೆ: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸನ್ನದ್ದರನ್ನಾಗಿಸಲು ಚುನಾವಣಾ ತಂಡಗಳಿಗೆ ಗುರುವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು.

ಸಹಾಯಕ ಚುನಾವಣಾಧಿಕಾರಿಗಳು, ಚೆಕ್‍ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸುವ ಸ್ಟ್ಯಾಟಿಕ್ ಸರ್ವೆಲೆನ್ಸ್ ತಂಡ, ಎಸ್‍ಎಸ್‍ಟಿ, ಫ್ಲೈಯಿಂಗ್ ಸ್ಕ್ವಾಡ್, ವಿಡಿಯೊ ಸರ್ವಲೆನ್ಸ್ ತಂಡ, ವಿಡಿಯೊ ವೀವಿಂಗ್ ತಂಡ, ಅಬಕಾರಿ ತಂಡ, ವಾಣಿಜ್ಯ ತೆರಿಗೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ವಿವಿಧ ತಂಡಗಳ ನೋಡಲ್ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯಗಳ ಬಗ್ಗೆ ತಿಳಿಸಲಾಯಿತು.

ಚುನಾವಣಾ ಸಂದರ್ಭ ಚೆಕ್‍ ಪೋಸ್ಟ್‌ಗಳಲ್ಲಿ ಅನುಸರಿಸಬೇಕಾದ ಕ್ರಮಗಳು, ರ‍್ಯಾಲಿಗಳ ಸಂದರ್ಭ ಖರ್ಚುವೆಚ್ಚಗಳ ಮೇಲೆ ನಿಗಾ, ಅನುಮತಿ, ಪಡೆಯುವ ಬಗ್ಗೆ, ಚುನಾವಣಾ ಪ್ರಚಾರಕ್ಕೆ ಅನುಮತಿ ಇಲ್ಲದೆ ಕರಪತ್ರ ಹಂಚಿಕೆ, ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಹಣ, ಮದ್ಯ ಹಂಚಿಕೆ, ಉಡುಗೊರೆಗಳ ಹಂಚಿಕೆ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಕಾಯಿದೆ, ಸೆಕ್ಷನ್‍ಗಳ ಬಗ್ಗೆ ಎಲ್ಲಾ ತಂಡಗಳಿಗೆ ತರಬೇತಿ ನೀಡಲಾಯಿತು.

‘ಆಯೋಗದ ನಿರ್ದೇಶನದಂತೆ ಪಾರದರ್ಶಕ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಎಲ್ಲಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ, ಅನುಷ್ಠಾನ ಮಾಡುವ ಮೂಲಕ ಪಾರದರ್ಶಕ ಚುನಾವಣೆ ನಡೆಸಲು ಸಂಘಟಿತರಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

‘ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಪೂರ್ವಸಿದ್ಧತೆ ಕೈಗೊಳ್ಳಲಾಗಿದ್ದು. ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 6 ಸಮಿತಿಯನ್ನು ರಚಿಸಲಾಗಿದೆ. 10 ಸಾವಿರ ಸಿಬ್ಬಂದಿ ಅಗತ್ಯವಿದ್ದು, ಅವರನ್ನು ಅಂತಿಮಗೊಳಿಸಲಾಗಿದೆ. 1693 ಬೂತ್‌ಗಳನ್ನು ಸ್ಥಾಪಿಸಲಿದ್ದು, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ತರಬೇತಿ ನೀಡಲಾಗಿದೆ. ಸೆಕ್ಟರ್‌ ಅಧಿಕಾರಿಗಳನ್ನು ದಂಡಾಧಿಕಾರಿಗಳ ಅಧಿಕಾರ ನೀಡುವ ಪ್ರಸ್ತಾವವನ್ನು ಕಳುಹಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕುಡಿಯುವ ನೀರು, ಮೇವು, ಬರಪರಿಹಾರ ಹಾಗೂ ಈಗಾಗಲೇ ನಡೆಯುತ್ತಿರುವ ಕಾಮಗಾರಿಗಳಿಗೆ ಚುನಾವಣೆ ನೀತಿ ಸಂಹಿತೆ ಅನ್ವಯಿಸುವುದಿಲ್ಲ’ ಎಂದರು.

ತರಬೇತಿಯಲ್ಲಿ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಸುರೇಶ್ ಇಟ್ನಾಳ್, ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ, ತರಬೇತುದಾರರಾದ ಅರವಿಂದ್ ಐರಾಣಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT