ಸೋಮವಾರ, ಜೂನ್ 1, 2020
27 °C
ವಿದೇಶದಿಂದ ಬಂದಿದ್ದ ಮಹಿಳೆಯಿಂದ ಹರಡಿದ ಸೋಂಕು

ದಾವಣಗೆರೆಯ ಮತ್ತೊಬ್ಬ ಯುವಕನಿಗೆ ಕೋವಿಡ್‌

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿನ 20 ವರ್ಷದ ಯುವಕನಿಗೆ ‘ಕೋವಿಡ್‌–19’ ಇರುವುದು ಶನಿವಾರ ಬಂದ ಪ್ರಾಥಮಿಕ ವರದಿಯಲ್ಲಿ ದೃಢಪಟ್ಟಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳ ಸಂಖ್ಯೆ ಎರಡಕ್ಕೇರಿದೆ.

ಸೋಂಕಿತ ಯುವಕ, ಗಯಾನಾ ದೇಶದಿಂದ ಚಿತ್ರದುರ್ಗದ ಭೀಮಸಮುದ್ರಕ್ಕೆ ಬಂದಿದ್ದ 37 ವರ್ಷದ ಕೊರೊನಾ ಸೋಂಕಿತ ಮಹಿಳೆಯ ಸಹೋದರ. ಮಹಿಳೆಯೊಂದಿಗೆ ನೇರ ಸಂಪರ್ಕ ಹೊಂದಿದ್ದರಿಂದ ಯುವಕನಿಗೂ ಸೋಂಕು ತಗುಲಿದೆ. ಯುವಕನನ್ನು ಆಸ್ಪತ್ರೆಯ ಐಸೋಲೇಟೆಡ್‌ ವಾರ್ಡ್‌ನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.

ನಗರದ ನಿಜಲಿಂಗಪ್ಪ ಬಡಾವಣೆಗೆ ಫ್ರಾನ್ಸ್ನಿಂದ ಬಂದಿದ್ದ 24 ವರ್ಷದ ವೈದ್ಯನಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರವಷ್ಟೇ ದೃಢಪಟ್ಟಿತ್ತು. ಇದೀಗ ಇನ್ನೊಂದು ಪ್ರಕರಣ ವರದಿಯಾಗಿರುವುದು ನಾಗರಿಕರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.

ಚಿತ್ರದುರ್ಗದ ಸೋಂಕಿತ ಮಹಿಳೆಯೊಂದಿಗೆ ನೇರ ಸಂಪರ್ಕ ಹೊಂದಿದ್ದ ಈ ಯುವಕ ನಗರದ ಖಾಸಗಿ ಗೆಸ್ಟ್‌ಹೌಸ್‌ನ ಕೊಠಡಿಯೊಂದರಲ್ಲಿ ಹೋಂ ಕ್ವಾರಂಟೈನ್‌ನಲ್ಲಿದ್ದ. ಯುವಕನಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಿಕೊಂಡು ಗಂಟಲಿನ ದ್ರಾವಣದ ಮಾದರಿಯನ್ನು ಶಿವಮೊಗ್ಗದ ವಿ.ಆರ್‌.ಡಿ.ಎಲ್‌. ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು.

ಪ್ರಯೋಗಾಲಯದಿಂದ ಶನಿವಾರ ಬಂದ ಪ್ರಾಥಮಿಕ ವೈದ್ಯಕೀಯ ವರದಿಯಲ್ಲಿ ಯುವಕನಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ವರದಿಯನ್ನು ಖಚಿತಪಡಿಸಿಕೊಳ್ಳಲು ಶಿವಮೊಗ್ಗದ ಪ್ರಯೋಗಾಲಯವು ಪುಣೆಯ ‘ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಲಾಜಿ’ಗೆ ಸೋಂಕಿತ ವ್ಯಕ್ತಿಯ ಮಾದರಿಯನ್ನು ಕಳುಹಿಸಿಕೊಟ್ಟಿದೆ. ಭಾನುವಾರ ಮಧ್ಯಾಹ್ನದ ವೇಳೆಗೆ ಅಂತಿಮ ವರದಿ ಜಿಲ್ಲಾಡಳಿತದ ಕೈಸೇರಲಿದೆ. ಆ ಬಳಿಕ ಜಿಲ್ಲಾಧಿಕಾರಿ ಈ ಪ್ರಕರಣದ ಅಂತಿಮ ವರದಿಯನ್ನು ಬಹಿರಂಗಪಡಿಸಲಿದ್ದಾರೆ.

ಚಿತ್ರದುರ್ಗದ ಸೋಂಕಿತ ಮಹಿಳೆಯು ನಗರದ ಎಸ್‌.ಎಸ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪ್ರಕರಣವೂ ಸೇರಿದಂತೆ ಜಿಲ್ಲೆಯಲ್ಲಿ ಇದೀಗ ಮೂವರು ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಿದೇಶದಿಂದ ಬಂದ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಯಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಈ ಪ್ರಕರಣದೊಂದಿಗೆ ಸಮುದಾಯದಲ್ಲಿ ಕೊರೊನಾ ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ಸವಾಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಎದುರಾಗಿದೆ.

ಸೋಂಕಿತ ಯುವಕ ಹೋಂ ಕ್ವಾರಂಟೈನ್‌ನಲ್ಲಿದ್ದ ಕೊಠಡಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ ಸೋಂಕು ನಿವಾರಕ ಔಷಧ ಸಿಂಪಡಿಸಿ, ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯ ಚಿಕಿತ್ಸಾ ವಿಧಾನ
‘ಕೋವಿಡ್‌–19 ರೋಗಕ್ಕೆ ಇನ್ನೂ ಪ್ರತ್ಯೇಕ ಔಷಧ ಕಂಡುಹಿಡಿದಿಲ್ಲ. ಜ್ವರಕ್ಕೆ ಪ್ಯಾರಾಸಿಟಮಲ್‌, ಕೆಮ್ಮಿಗೆ ಆ್ಯಂಟಿಬಯೊಟಿಕ್‌ ಸಿರಪ್‌ ಹೀಗೆ ಸೋಂಕಿತ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ರೋಗ ಲಕ್ಷಣಕ್ಕೆ ನಿಗದಿತ ಔಷಧಗಳನ್ನು ವ್ಯವಸ್ಥಿತವಾಗಿ ನೀಡಲಾಗುತ್ತದೆ’ ಎನ್ನುತ್ತಾರೆ ವೈದ್ಯರು. 

‘ರೋಗಿಗೆ ಡ್ರಿಪ್‌ ಹಾಕಿ ಶಕ್ತಿ ಬರುವಂತೆ ಮಾಡಿ ನಾಲ್ಕು ದಿನಗಳ ಕಾಲ ನಿಗಾ ವಹಿಸಲಾಗುತ್ತದೆ. ಚಿಕಿತ್ಸೆಯಿಂದ ವೈರಸ್‌ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ರೋಗ ಲಕ್ಷಣ ಕಡಿಮೆಯಾದ ಬಳಿಕ ಸೋಂಕಿತನ ಗಂಟಲಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುತ್ತದೆ. ಪಾಸಿಟಿವ್‌ ಬಂದರೆ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತದೆ. 24 ಗಂಟೆಗಳ ನಂತರ ನಿರಂತರವಾಗಿ ಸಂಗ್ರಹಿಸಿದ ಎರಡು ಮಾದರಿಗಳ ಪರೀಕ್ಷೆಯೂ ನೆಗೆಟಿವ್‌ ಬಂದರೆ ರೋಗಿಯಲ್ಲಿ ಕೊರೊನಾ ಸೋಂಕು ಇಲ್ಲ ಎಂದರ್ಥ. ಹೀಗಿದ್ದರೂ ಆತನನ್ನು 14 ದಿನಗಳ ಕಾಲ ಆಸ್ಪತ್ರೆಯಲ್ಲೇ ಇಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಮಧ್ಯದಲ್ಲಿ ಮತ್ತೆ ರೋಗ ಲಕ್ಷಣ ಕಂಡು ಬಂದರೆ ಮತ್ತೆ ರಕ್ತ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತದೆ’ ಎಂದು ವೈದ್ಯರು ಚಿಕಿತ್ಸಾ ವಿಧಾನದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಕೊರೊನಾ ಸೋಂಕು ತಗುಲಿದ ಯುವಕರು ಬಹಳ ಬೇಗನೆ ಚೇತರಿಸಿಕೊಳ್ಳುತ್ತಾರೆ. ವಿವಿಧ ಕಾಯಿಲೆಯಿಂದ ಬಳಲುತ್ತಿರುವ ವೃದ್ಧರಿಗೆ ಕೋವಿಡ್‌ ಬಂದಾಗ ಅಪಾಯವಾಗುವ ಸಾಧ್ಯತೆ ಹೆಚ್ಚು ಎಂಬುದು ವೈದ್ಯರ ಅಭಿಪ್ರಾಯ.

**

ಶಿವಮೊಗ್ಗದ ಪ್ರಯೋಗಾಲಯದಿಂದ ಕೊರೊನಾ ಪಾಸಿಟಿವ್‌ ಎಂದು ಬಂದಿತ್ತು. ಅದನ್ನು ಖಚಿತಪಡಿಸಿಕೊಳ್ಳಲು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ.
– ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ ದಾವಣಗೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು