ಶನಿವಾರ, ಡಿಸೆಂಬರ್ 5, 2020
25 °C

ಭದ್ರಾ ಜಲಾಶಯದಿಂದ ಕೆರೆ ತುಂಬಿಸುವ ಯೋಜನೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಲೇಬೆನ್ನೂರು: ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಚಿಕ್ಕಮಗಳೂರು ಜಿಲ್ಲೆಯ 192 ಕೆರೆಗೆ ನೀರನ್ನು ತುಂಬಿಸುವ ಸರ್ಕಾರದ ಹೊಸ ಯೋಜನೆಗೆ ಮಲೇಬೆನ್ನೂರು ಹೋಬಳಿ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸಚಿವ ಸಂಪುಟದಲ್ಲಿ ಹೊಸ ಯೋಜನೆ ಮಂಜೂರಾತಿಗೆ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿದ ಹೊಳೆಸಿರಿಗೆರೆ ರೈತ ಮುಖಂಡ ಫಾಲಾಕ್ಷಪ್ಪ, ‘ಮಳೆಗಾಲದ ವೇಳೆ ನದಿಯಲ್ಲಿ ವ್ಯರ್ಥವಾಗಿ ಹರಿದು ಸಮುದ್ರ ಸೇರುವ ನೀರನ್ನು ಪಂಪ್ ಮೂಲಕ ಕೆರೆ ತುಂಬಿಸಲಿ. ಭದ್ರಾ ಜಲಾಶಯದ ಕೊನೆ ಭಾಗ ನಾಲೆ ನೀರಿನಿಂದ ವಂಚಿತವಾಗಿದೆ. ಮಲೆನಾಡಿನ ಕೆರೆಗಳಿಗೆ ಅಣೆಕಟ್ಟೆಯಿಂದ ನೇರವಾಗಿ ನೀರು ಪಂಪ್ ಮಾಡುವುದು ಅವೈಜ್ಞಾನಿಕ. ಈಗ ಜಾರಿಯಲ್ಲಿರುವ ಕೆರೆಗೆ ನೀರು ತುಂಬಿಸುವ ಯೋಜನೆ ಮೊದಲು ಪೂರ್ಣಮಾಡಿ’ ಎಂದು ಒತ್ತಾಯಿಸಿದರು.

‘ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಬೆಸ್ಕಾಂ ನೀರಾವರಿ ನಿಗಮದ ಎಂಜಿನಿಯರ್, ಅಕ್ರಮ ಪಂಪ್ ಸೆಟ್ ತೆರವು ಮಾಡುವ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ’ ಎಂದು ಆಪಾದಿಸಿದರು. 

ಈಗಾಗಲೇ ವಿವಿ ಸಾಗರ, ಚಿತ್ರದುರ್ಗ ತುಮಕೂರು ಜಿಲ್ಲೆಗೆ ಭದ್ರಾ ಜಲಾಶಯದಿಂದ ನೀರು ಹರಿಸುವ ಯೋಜನೆ ಜಾರಿಯಾಗಿದೆ. ಹೊಸ ಯೋಜನೆ ಅನುಷ್ಠಾನವಾದಲ್ಲಿ ದಾವಣಗೆರೆ ಜಿಲ್ಲೆ ಬರದ ನಾಡಾಗಲಿದೆ. ತುಂಗಭದ್ರಾ ನದಿಯಿಂದ ಭೈರನಪಾದ ಏತ ನೀರಾವರಿ ಯೋಜನೆ ಅನುಷ್ಠಾನ ಮಾಡಿ ಕೊನೆ ಭಾಗಕ್ಕೆ ನೀರು ಹರಿಸಿ ಎಂದು ಆಗ್ರಹಿಸಿದರು.

‘ರಾಜಕಾರಣಿಗಳ ಒತ್ತಡದಿಂದ ಕೆರೆ ತುಂಬಿಸುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಮುಂದಾದರೆ ಉಗ್ರ ಹೋರಾಟ, ಪ್ರತಿಭಟನೆ ನಡೆಸಲಾಗುವುದು’ ಎಂದು ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಕಡಾರನಾಯ್ಕನಹಳ್ಳಿ ಪ್ರಭುಗೌಡ ಎಚ್ಚರಿಸಿದ್ದಾರೆ.

‘ಮಲೆನಾಡಿನಲ್ಲಿ ನಿರ್ಮಿಸಿದ ಅಣೆಕಟ್ಟೆಯಿಂದ ನೀರೆತ್ತುವ ಯೋಜನೆ ಅತ್ಯಂತ ಅಪಾಯಕಾರಿ. ಇಂತಹ ಯೋಜನೆ ಜಾರಿಗೊಳಿಸಲು ಬಿಡುವುದಿಲ್ಲ. ಶೀಘ್ರ ಕೊನೆಭಾಗದ ರೈತರೊಟ್ಟಿಗೆ ಸಭೆ ನಡೆಸಿ ತೀರ್ಮಾನಿಸ
ಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.