ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಮುಕ್ತ ಕಸಾಪ ನಿರ್ಮಾಣವೇ ಗುರಿ: ರಾಜಶೇಖರ ಮುಲಾಲಿ

ಅಧ್ಯಕ್ಷ ಸ್ಥಾನದ ಆಕಾಂಕ್ಷಿ ರಾಜಶೇಖರ ಮುಲಾಲಿ ಅಭಿಮತ
Last Updated 18 ಫೆಬ್ರುವರಿ 2021, 8:50 IST
ಅಕ್ಷರ ಗಾತ್ರ

ದಾವಣಗೆರೆ: ‘ಮೇ 9ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಭ್ರಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತ ನೀಡಬೇಕು ಎಂಬ ಗುರಿ ಇಟ್ಟುಕೊಂಡು ಸ್ಪರ್ಧಿಸುತ್ತಿದ್ದೇನೆ’ ಎಂದು ಬಳ್ಳಾರಿ ಜಿಲ್ಲೆಯ ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಹೇಳಿದರು.

‘85 ವರ್ಷಗಳಿಂದ ಒಂದೇ ಪ್ರದೇಶದವರು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಾರೆ. ಸಾಹಿತ್ಯ ಪರಿಷತ್ತಿಗೆ ಅಂಟಿಕೊಂಡಿರುವ ನಿವೃತ್ತರ ತಾಣ, ಗಂಜೀಕೇಂದ್ರ ಎಂಬ ಹಣಪಟ್ಟೆಯನ್ನು ತೆಗೆದುಹಾಕಲು ಯುವಕನಾಗಿರುವ ನನಗೆ ಅವಕಾಶ ಮಾಡಿಕೊಡಬೇಕು. 20 ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಮಧ್ಯ ಕರ್ನಾಟಕ ಭಾಗದವನಾಗಿರುವ ನನಗೆ ಸ್ಥಳೀಯ ಸಾಹಿತಿಗಳು, ಸದಸ್ಯರು ಬೆಂಬಲ ನೀಡಿದ್ದಾರೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಧಿಕಾರಕ್ಕೆ ಬಂದರೆ ಕಸಾಪದ ರಾಜ್ಯಮಟ್ಟದ ಮಹಿಳಾ ಘಟಕವನ್ನು ಆರಂಭಿಸಿ ಮಹಿಳೆಯರಿಗೂ ಆದ್ಯತೆ ನೀಡಲಾಗುವುದು. ಪರಿಷತ್ತಿಗೆ ಡಿಜಿಟಲ್‌ ಸ್ಪರ್ಶ ಕೊಟ್ಟು, ಸದಸ್ಯರಿಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗುವುದು. ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಿಸಲಾಗುವುದು. ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಹಿರಿಯ ಸದಸ್ಯರನ್ನು ಗುರುತಿಸಿ ಕೇಂದ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಸಲಹಾ ಸಮಿತಿ ರಚಿಸಲಾಗುವುದು. ಪರಿಷತ್ತಿನ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ವಿದ್ಯಾರ್ಥಿ ವೇತನ ನೀಡಲಾಗುವುದು. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವುದು ಹಾಗೂ ಖಾಸಗಿ ವಲಯದಲ್ಲೂ ಉದ್ಯೋಗ ಮೀಸಲಾತಿಗೆ ಯತ್ನಿಸಲಾಗುವುದು’ ಎಂದು ಚುನಾವಣಾ ಪ್ರಣಾಳಿಕೆಯಲ್ಲಿನ ಅಂಶಗಳನ್ನು ವಿವರಿಸಿದರು.

ಬರಹಗಾರ ಜೆ.ಎಂ. ರಾಜಶೇಖರ, ‘ಕಸಾಪ ಚುನಾವಣೆಯಲ್ಲಿ ಹಣಬಲ, ರಾಜಕೀಯ ಬಲಗಳ ಬಳಕೆಯಾಗುತ್ತಿದೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸಾಮಾಜಿಕ ಹೋರಾಟಗಾರರಿಗೆ ಆದ್ಯತೆ ನೀಡುತ್ತಿಲ್ಲ. ಲಾಬಿ ನಡೆಸುತ್ತಿರುವವರಿಗೇ ಪ್ರಶಸ್ತಿ ನೀಡಲಾಗುತ್ತಿದೆ. ಕಸಾಪ ಸುಧಾರಣೆಗೆ ರಾಜಶೇಖರ ಮುಲಾಲಿ ಅವರಂತಹ ಸಾಮಾಜಿಕ ಹೋರಾಟಗಾರರು ಅಧ್ಯಕ್ಷರಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಕೆ.ಬಿ. ರುದ್ರೇಶ್‌, ಇರ್ಫಾನ್‌ ಮುದುಗಲ್‌, ದುರ್ಗೇಶ್‌ ಉಪ್ಪಾರ್‌ ಅವರೂ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

*

ಸಾಹಿತಿಗಳೇ ಅಧ್ಯಕ್ಷರಾಗಬೇಕಾಗಿಲ್ಲ. 25 ವರ್ಷಗಳಿಂದ ಕಸಾಪವನ್ನು ಸಮೀಪದಿಂದ ನೋಡುತ್ತಿದ್ದೇನೆ. ಕನ್ನಡ ಸಾಹಿತ್ಯದ ಆಸಕ್ತನಾಗಿರುವ ನಾನೂ ಸಮರ್ಥವಾಗಿ ಕಸಾಪವನ್ನು ಸಂಘಟಿಸುವ ಕೆಲಸ ಮಾಡಬಲ್ಲೆ.

- ರಾಜಶೇಖರ ಮುಲಾಲಿ, ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT