ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.2ರಂದು ಪಂಚಮಸಾಲಿ ರಾಜ್ಯ ಕಾರ್ಯಕಾರಿಣಿ

ಮೀಸಲಾತಿ ಶೀಘ್ರ ಘೋಷಣೆಗಾಗಿ ಒತ್ತಾಯಿಸಲು ಈ ಸಭೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
Last Updated 31 ಜನವರಿ 2022, 11:51 IST
ಅಕ್ಷರ ಗಾತ್ರ

ದಾವಣಗೆರೆ: ಪಂಚಮಸಾಲಿ ಮೀಸಲಾತಿ ವಿಳಂಬ ಆಗುತ್ತಿದೆ. ಹಾಗಾಗಿ ಮುಂದಿನ ಹೋರಾಟದ ಸಿದ್ಧತೆಗಾಗಿ ಬೆಳಗಾವಿಯ ಗಾಂಧಿಭವನದಲ್ಲಿ ಫೆ.2ರಂದು ಬೆಳಿಗ್ಗೆ 11ಕ್ಕೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಮಹತ್ವದ ರಾಜ್ಯ ಕಾರ್ಯಕಾರಿಣಿ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಅಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಹೋರಾಟದ ಮುಂದುವರಿದ ಭಾಗ ಇದು. ನಿಮಗೆ ನ್ಯಾಯ ಕೊಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದೆ ತಿಳಿಸಿದ್ದರು. ಬಳಿಕ ವಿಧಾನಸಭೆ ಉಪ ಚುನಾವಣೆ, ಲೋಕಸಭೆ ಉಪಚುನಾವಣೆ, ಎಂಎಲ್‌ಸಿ ಚುನಾವಣೆ, ಕೊರೊನಾ ಈ ಕಾರಣಗಳಿಂದ ಮೀಸಲಾತಿ ಘೋಷಣೆಯಾಗಿಲ್ಲ. ಅದಕ್ಕಾಗಿ ಮುಂದಿನ ಹೋರಾಟಕ್ಕೆ ಸಜ್ಜಾಗಲು ಈ ಕಾರ್ಯಕಾರಿಣಿ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ನಮ್ಮ ಪಾದಯಾತ್ರೆಯ ಫಲವಾಗಿ ಈಗ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಜಿಲ್ಲೆಗಳಿಗೆ ಸ್ವತಃ ಭೇಟಿ ನೀಡುತ್ತಿದ್ದಾರೆ. ಮೀಸಲಾತಿ ಬಗ್ಗೆ ವರದಿ ತಯಾರಿ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಶೀಘ್ರ ವರದಿ ಸಲ್ಲಿಕೆಯಾಗಬೇಕು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಹೋರಾಟ ಒಂದು ಹಂತಕ್ಕೆ ಬಂದಾಗ ಗೊಂದಲ ಸೃಷ್ಟಿಸಲು 3ನೇ ಪೀಠದ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ಅವರು ಎಷ್ಟಾದರೂ ಪೀಠ ಮಾಡಲಿ. ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸಮಾಜವನ್ನು ಕಟ್ಟುವ ಕೆಲಸ, ಮೀಸಲಾತಿ ಕೊಡಿಸುವ ಕೆಲವಷ್ಟೇ ನಾನು ಮಾಡುತ್ತೇನೆ. ಸಮಾಜ ಒಗ್ಗಟ್ಟಾಗಿದೆ. ಸಮಾಜದ ಪ್ರೀತಿ ನನ್ನ ಮೇಲೆ ಇದ್ದರೆ ಸಾಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ‘ಪಾದಯಾತ್ರೆಗೆ ಬೆಂಬಲ ನೀಡಲು ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಒಕ್ಕೂಟ ರಚಿಸಲಾಯಿತು. ಅದನ್ನು ಕುತಂತ್ರದಿಂದ ಒಡೆದು ಈಗ ಪೀಠ ಮಾಡಲು ಕೆಲವರು ಹೊರಟಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಪೀಠ ಆಗಲಿ ಎಂದು ಕೆಲವರು ಹೇಳಿದ್ದಾರೆ. ಒಂದು ಮನೆಯ ಎಲ್ಲ ಮಕ್ಕಳಿಗೆ ಮನೆ ಕಟ್ಟಲು ಆಗುತ್ತಿಲ್ಲ. ಇನ್ನು ಪ್ರತಿ ಜಿಲ್ಲೆಯಲ್ಲಿ ಪೀಠ ಕಟ್ಟುವುದು ಸುಲಭವೇ’ ಎಂದು ಪ್ರಶ್ನಿಸಿದರು.

ಜಾತ್ರೆ, ಆಡಂಬರ, ಸಂಭ್ರಮ ಮಾಡಿಕೊಂಡು ಬರುವ ಪೀಠಗಳು ಕೆಲವು ಇವೆ. ಕೂಡಲಸಂಗಮದ ಪಂಚಮಸಾಲಿ ಅಂಥ ಪೀಠವಲ್ಲ. ಬುರುಡೆ ಇಟ್ಟು ಶಕ್ತಿ ಪ್ರದರ್ಶನ ಮಾಡುವ ಪೀಠವೂ ಅಲ್ಲ. ಯಾರು ಏನೇ ಮಾಡಲಿ. ಕೂಡಲಸಂಗಮ ಪೀಠವೇ ಯಜಮಾನ ಎಂದು ಹೇಳಿದರು.

ಸಮಾಜದ ಮುಖಂಡರಾದ ಸೋಗಿ ಶಾಂತಕುಮಾರ್‌, ಟಿ. ಶಂಕರಪ್ಪ, ಎ.ಬಿ. ಪಾಟೀಲ, ಬಸವರಾಜ ಹಾಲಪ್ಪ, ಚನ್ನಬಸವನ ಗೌಡ, ಮಲ್ಲಿಕಾರ್ಜುನ, ಸೋಗಿ ಮುರುಗೇಶ್‌, ಧನಂಜಯ ಡಿ.ಆರ್‌., ಕರಿಬಸಪ್ಪ, ದಿಗ್ವಿಜಯ, ಕಲ್ಲೇಶಪ್ಪ, ತೆಲಗಿ ಮುದ್ದಣ್ಣ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT