ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪರ ಹೋರಾಟ, ಚಳವಳಿಗಳು ವಿಚಾರ ಸಂಕಿರಣ ನಾಳೆ

Last Updated 7 ನವೆಂಬರ್ 2021, 3:24 IST
ಅಕ್ಷರ ಗಾತ್ರ

ದಾವಣಗೆರೆ: ಬೆಂಗಳೂರಿನ ಸಮಾಜವಾದಿ ಅಧ್ಯಯನ ಕೇಂದ್ರ, ಅಪ್ನ ಭಾರತ್ ಮೋರ್ಚಾ ಕರ್ನಾಟಕ ಮತ್ತು ಪ್ರಗತಿಪರ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನ. 8ರಂದು ‘ಜನಪರ ಹೋರಾಟ, ಚಳವಳಿ ಮತ್ತು ಚುನಾವಣಾ ರಾಜಕಾರಣ’ ವಿಷಯ ಕುರಿತು ಚಿಂತನ-ಮಂಥನ ಗೋಷ್ಠಿಯನ್ನು ಇಲ್ಲಿನ ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿದೆ.

ಚುನಾವಣೆ ಹಾಗೂ ರಾಜಕಾರಣದ ಮೇಲೆ ಚಳವಳಿಗಳು ಯಾವ ರೀತಿ ಪರಿಣಾಮ ಬೀರುತ್ತವೆ ಎಂಬ ಬಗ್ಗೆ ಆಂತರಿಕ ಚಿಂತನ-ಮಂಥನ ಸಭೆ ಹಮ್ಮಿಕೊಳ್ಳಲಾಗಿದ್ದು, ಚುನಾವಣೆ ಸುಧಾರಣೆಗಾಗಿ ನಾವು ಇಟ್ಟಿರುವ ಮೊದಲ ಹೆಜ್ಜೆ ಇದು. ಈ ಹಿಂದೆ ನಡೆಯುತ್ತಿದ್ದ ಹೋರಾಟ, ಚಳವಳಿಗಳು ಸರ್ಕಾರವನ್ನೇ ಬದಲಿಸುವಷ್ಟು ಪರಿಣಾಮಕಾರಿಯಾಗಿದ್ದವು. ಆದರೆ, ಈಗಿನ ಹೋರಾಟಗಳು ಎಡವಿರುವುದಾದರೂ ಎಲ್ಲಿ ಎಂಬ ಬಗ್ಗೆ ಚರ್ಚಿಸಲು ಈ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ನೋಟು ಅಮಾನ್ಯೀಕರಣಗೊಳಿಸಲು ತೋರಿಸಿದ್ದ ಧೈರ್ಯವನ್ನು ಚುನಾವಣೆ ಸುಧಾರಣೆ ಮಾಡಲು ತೋರಿಸಲಿಲ್ಲ. ಏಕೆಂದರೆ ಸುಧಾರಣೆ ಮಾಡಿದರೆ ಅದರಿಂದ ಅವರ ಪಕ್ಷಕ್ಕೆ ನಷ್ಟವಾಗುತ್ತದೆ ಎಂಬ ಯೋಚನೆಯಿಂದಾಗಿ ಅವರು ಈ ದುಸ್ಸಾಹಸಕ್ಕೆ ಕೈಹಾಕಲಿಲ್ಲ’ ಎಂದು ಟೀಕಿಸಿದರು.

‘ನವೆಂಬರ್ 8ರಂದು ಬೆಳಿಗ್ಗೆ 11ರಿಂದ ಸಂಜೆ 4ಗಂಟೆಯವರೆಗೆ ಗೋಷ್ಠಿಗಳು ನಡೆಯಲಿದ್ದು, ಹರ್ಯಾಣದ ಅಪ್ನ ಭಾರತ್ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಅಶೋಕ್ ತನ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಗತಿಪರ ಲೇಖಕಿ ಬಿ.ಟಿ. ಲಲಿತಾ ನಾಯ್ಕ್ ಮತ್ತು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು.

ನವದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಿ.ಕೆ. ಗಿರಿ, ಸಮಾಜ ಪರಿವರ್ತನ ವೇದಿಕೆಯ ಬಿ. ಗೋಪಾಲ್, ನಿವೃತ್ತ ಪ್ರಾಧ್ಯಾಪಕ ರಾಮಚಂದ್ರಪ್ಪ ವಿಚಾರ ಮಂಡಿಸಲಿದ್ದಾರೆ. ದಾದಾಪೀರ್ ನವಿಲೇಹಾಳ್, ಹುಚ್ಚವ್ವನಹಳ್ಳಿ ಮಂಜುನಾಥ್, ಬಲ್ಲೂರು ರವಿಕುಮಾರ್, ನುಲೇನೂರು ಎಂ. ಶಂಕ್ರಪ್ಪ, ಕೊಟ್ರಪ್ಪ ಬಿ. ಮುಗದುಮ್, ನರಸಿಂಹಮೂರ್ತಿ ಈಚಲಘಟ್ಟ, ಸಿದ್ದವೀರಪ್ಪ, ಮಲ್ಲಿಕಾರ್ಜುನ್ ಬಳ್ಳಾರಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಪೂಜಾರ್ ಆಂಜನಪ್ಪ, ಶ್ರೀನಿವಾಸ್, ಮೌಲನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT