ಬುಧವಾರ, ಏಪ್ರಿಲ್ 8, 2020
19 °C
ತಂದೆಯ ಸಾಲಕ್ಕೆ ಮಗನ ಖಾತೆಯಲ್ಲಿದ್ದ ₹ 5 ಲಕ್ಷ ತಡೆಹಿಡಿದಿದ್ದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌

ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌: ₹15 ಸಾವಿರ ಪರಿಹಾರ ನೀಡಲು ಆದೇಶ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ದಾವಣಗೆರೆ: ತಂದೆ ಪಡೆದಿದ್ದ ಸಾಲ ತೀರಿಸಿಲ್ಲ ಎಂಬ ನೆಪವೊಡ್ಡಿ ಮಗನ ಖಾತೆಯನ್ನು ತಡೆಹಿಡಿದಿದ್ದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ (ಪಿ.ಕೆ.ಜಿ.ಬಿ) ತುರ್ಚಘಟ್ಟ ಶಾಖೆಯ ಪ್ರಬಂಧಕರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು, ಖಾತೆಯಲ್ಲಿದ್ದ ಹಣವನ್ನು ಮರಳಿ ಪಡೆಯಲು ಹಾಗೂ ವಹಿವಾಟು ನಡೆಸಲು ಗ್ರಾಹಕನ ಅವಕಾಶ ಮಾಡಿಕೊಡುವಂತೆ ನಿರ್ದೇಶನ ನೀಡಿದೆ.

ದಾವಣಗೆರೆ ತಾಲ್ಲೂಕಿನ ಬೆಳವನೂರು ಗ್ರಾಮದ ವ್ಯಾಪಾರಿ ಹಾಗೂ ಕೃಷಿಕರಾಗಿರುವ ರವಿಕುಮಾರ್‌ ಎಸ್‌.ಎನ್‌. ಅವರ ಖಾತೆಯಲ್ಲಿದ್ದ ₹ 5,22,341 ಹಣಕ್ಕೆ ವಹಿವಾಟು ತಡೆಹಿಡಿದ ದಿನದಿಂದ ಶೇ 9ರಷ್ಟು ಬಡ್ಡಿಯನ್ನೂ ಸೇರಿಸಿ ಪಾವತಿಸಬೇಕು. ಮಾನಸಿಕ ಹಿಂಸೆ ನೀಡಿರುವುದಕ್ಕೆ ₹ 10 ಸಾವಿರ ಹಾಗೂ ದಾವೆಗೆ ಮಾಡಿದ ವೆಚ್ಚ ಭರಿಸಲು ₹ 5,000 ಅನ್ನು 30 ದಿನಗಳ ಒಳಗೆ ಬ್ಯಾಂಕ್‌ ಪಾವತಿಸಬೇಕು ಎಂದು ಗ್ರಾಹಕರ ವೇದಿಕೆಯ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ಹಾಗೂ ಸದಸ್ಯೆ ಜ್ಯೋತಿ ರಾದೇಶ ಜಂಬಗಿ ಒಳಗೊಂಡ ಪೀಠವು ಮಂಗಳವಾರ ಆದೇಶಿಸಿದೆ.

ಪ್ರಕರಣದ ವಿವರ: ರವಿಕುಮಾರ್‌ ಅವರ ತುರ್ಚಘಟ್ಟದ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಖಾತೆಯಲ್ಲಿ 2018ರ ನವೆಂಬರ್‌ 9ಕ್ಕೆ ₹ 5,22,341 ಹಣವಿತ್ತು. ನವೆಂಬರ್‌ 17ರಂದು ರವಿಕುಮಾರ್‌ ಅವರು ₹ 2 ಲಕ್ಷದ ಚೆಕ್‌ ಅನ್ನು ಎಂ.ಎಸ್‌. ಸಿದ್ದಪ್ಪ ಅವರಿಗೆ ನೀಡಿದ್ದರು. ಈ ಚೆಕ್‌ ಅನ್ನು ಶಿವಾ ಸಹಕಾರ ಬ್ಯಾಂಕ್‌ಗೆ ಸಿದ್ದಪ್ಪ ಹಾಕಿದ್ದರು. ಆದರೆ, ಹಣ ನಗದೀಕರಿಸದ ಬ್ಯಾಂಕ್‌, ಸಂಬಂಧಪಟ್ಟ ಬ್ಯಾಂಕ್‌ ಸಂಪರ್ಕಿಸುವಂತೆ ಹಿಂಬರಹ ನೀಡಿತ್ತು.

ಈ ಬಗ್ಗೆ ರವಿಕುಮಾರ್‌ ಅವರು ಬ್ಯಾಂಕಿಗೆ ತೆರಳಿ ವಿಚಾರಿಸಿದಾಗ, ‘ತಂದೆ ಪಡೆದ ಸಾಲ ತೀರಿಸದೇ ಇರುವುದರಿಂದ ನಿಮ್ಮ ಖಾತೆಯಲ್ಲಿರುವ ಹಣವನ್ನು ತಡೆಹಿಡಿಯಲಾಗಿದೆ’ ಎಂಬ ಉತ್ತರ ಬಂತು.

ರವಿಕುಮಾರ್‌ ಅವರ ತಂದೆ ನೀಲಕಂಠಪ್ಪ ಅವರು ಕೃಷಿ ಚಟುವಟಿಕೆಗಾಗಿ ಭೂಮಿಯನ್ನು ಒತ್ತೆ ಇಟ್ಟು 2009ರ ಅಕ್ಟೋಬರ್‌ 14ರಂದು ₹ 2.05 ಲಕ್ಷ ಸಾಲ ಪಡೆದಿದ್ದರು. ಸಕಾಲಕ್ಕೆ ಸಾಲ ಮರುಪಾವತಿಸದೇ ಇರುವುದರಿಂದ ಬ್ಯಾಂಕ್‌ ಸಾಲ ವಸೂಲಾತಿಗಾಗಿ ಸಿವಿಲ್‌ ನ್ಯಾಯಾಲಯದ ಮೆಟ್ಟಿಲನ್ನೇರಿತ್ತು. ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ನೀಲಕಂಠಪ್ಪ ಮೃತಪಟ್ಟಿದ್ದರು. ವಾರಸುದಾರ ಸಾಲ ಮರುಪಾವತಿಸಬೇಕು ಎಂಬ ಕಾರಣ ನೀಡಿ ಬ್ಯಾಂಕ್‌ನವರು ರವಿಕುಮಾರ್‌ ಅವರ ಖಾತೆಯ ಹಣವನ್ನು ತಡೆಹಿಡಿದಿದ್ದರು. ಹೀಗಾಗಿ ನ್ಯಾಯ ಕೊಡಿಸುವಂತೆ ರವಿಕುಮಾರ್‌ ಅವರು 2019ರ ಆಗಸ್ಟ್‌ 28ರಂದು ಗ್ರಾಹಕರ ವೇದಿಕೆಯ ಮೇಟ್ಟಿಲನ್ನೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯು, ‘ಸಾಲ ಪಡೆದ ಹಣಕ್ಕಿಂತ ನಾಲ್ಕು ಪಟ್ಟು ಹೆಚ್ಚು ಮೌಲ್ಯದ ಆಸ್ತಿಯನ್ನು ಬ್ಯಾಂಕ್‌ ಒತ್ತೆ ಇಟ್ಟುಕೊಂಡಿದೆ. ಸಾಲ ವಸೂಲಿಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನೂ ಹೂಡಿದೆ. ಆಸ್ತಿ ಮಾರಿದರೆ ಸಾಲದ ಹಣ ಸಿಗುವ ಖಾತ್ರಿ ಇದೆ. ಹೀಗಿರುವಾಗ ನ್ಯಾಯಾಲಯದಿಂದ ಆದೇಶ ಪಡೆದು ಆಸ್ತಿ ಹರಾಜು ಹಾಕಿ ಸಾಲದ ಹಣಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾದುದು ಬ್ಯಾಂಕಿನ ಜವಾಬ್ದಾರಿ. ದೂರುದಾರರ ಖಾತೆಯನ್ನು ತಡೆಹಿಡಿರುವ ಮೂಲಕ ಬ್ಯಾಂಕ್‌ ಸೇವಾಲೋಪ ಎಸಗಿದೆ. ಕೂಡಲೇ ಖಾತೆಯಿಂದ ಹಣ ಪಡೆಯಲು ಹಾಗೂ ವಹಿವಾಟು ನಡೆಸಲು ಅವಕಾಶ ಕಲ್ಪಿಸಿಕೊಡಬೇಕು’ ಎಂದು ಆದೇಶದಲ್ಲಿ ಸೂಚಿಸಿದೆ.

ರವಿಕುಮಾರ್‌ ಪರ ಎಂ.ಎಸ್‌. ಮಲ್ಲೇಶ್ವರಯ್ಯ ವಾದ ಮಂಡಿಸಿದ್ದರು.

ಅಂಕಿ–ಅಂಶಗಳು

₹ 5.22 ಲಕ್ಷ - ದೂರುದಾರರ ಬ್ಯಾಂಕ್‌ ಖಾತೆಯಲ್ಲಿದ್ದ ಹಣ

₹ 2.05 ಲಕ್ಷ - ದೂರುದಾರರ ತಂದೆ ಪಡೆದಿದ್ದ ಸಾಲದ ಮೊತ್ತ

₹ 10 ಸಾವಿರ -ಮಾನಸಿಕ ಹಿಂಸೆಗಾಗಿ ಬ್ಯಾಂಕ್‌ ನೀಡಬೇಕಾದ ಪರಿಹಾರ

₹ 5 ಸಾವಿರ -ದಾವೆ ವೆಚ್ಚ ಭರಿಸಲು ಬ್ಯಾಂಕ್‌ ನೀಡಬೇಕಾದ ಪರಿಹಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು