ಸೋಮವಾರ, ಜುಲೈ 26, 2021
21 °C
ಜೆಡಿಎಸ್‌ ಮುಖಂಡ ಒತ್ತಾಯ

ಪಾಲಿಕೆಯ ಅಭಿವೃದ್ಧಿ ಕಾಮಗಾರಿ, ಶ್ವೇತಪತ್ರ ಹೊರಡಿಸಿ: ಜೆ. ಅಮಾನುಲ್ಲಾ ಖಾನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ಅನುದಾನ ಹಂಚಿಕೆ ಸಂಬಂಧ ಆರೋಪ– ಪ್ರತ್ಯಾರೋಪ ಮಾಡುತ್ತಿರುವ ಕಾಂಗ್ರೆಸ್‌, ಬಿಜೆಪಿ ಪಾಲಿಕೆಯ ಎರಡೂ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿ, ಅನುದಾನ ಬಳಕೆ ಸಂಬಂಧ ಶ್ವೇತಪತ್ರ ಹೊರಡಿಸಲಿ’ ಎಂದು ಜೆಡಿಎಸ್‌ ಮುಖಂಡ ಜೆ. ಅಮಾನುಲ್ಲಾ ಖಾನ್‌ ಒತ್ತಾಯಿಸಿದರು.

‘ಕೊರೊನಾ ಸಂಕಷ್ಟದಲ್ಲಿ ಜನರು ಸಮಸ್ಯೆ ಎದುರಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್‌, ಬಿಜೆಪಿ ಪಾಲಿಕೆಯ ಅನುದಾನ ಹಂಚಿಕೆ ಸಂಬಂಧ ಇಬ್ಬರೂ ಆರೋಪ ಮಾಡುವ ಮೂಲಕ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಇದನ್ನು ಬಿಟ್ಟು ಅಭಿವೃದ್ಧಿ ಕಡೆಗೆ ಗಮನಹರಿಸಲಿ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಮೇಯರ್‌ ಚುನಾವಣೆ ನಡೆದು ನಾಲ್ಕು ತಿಂಗಳು ಮಾತ್ರ ಕಳೆದಿದೆ. ಕೊರೊನಾ ಸಂಕಷ್ಟ ಕಾರಣ ಮೇಯರ್ ಅವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕರು ಅವರಿಗೆ ಆಡಳಿತ ನಡೆಸಲು ದಾರಿ ಮಾಡಿಕೊಡದೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಆರೋಪ ಮಾಡುವ ಕಾಂಗ್ರೆಸ್‌ ನಾಯಕರು ಮೇಯರ್‌ ಚುನಾವಣೆ ವೇಳೆ ಗೈರಾಗಿದ್ದ ಅವರ ಸದಸ್ಯರ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ. ಪಾಲಿಕೆಯ ಕಾಂಗ್ರೆಸ್‌ ಸದಸ್ಯರೇ ಮೇಯರ್‌ಗೆ ಹೆಚ್ಚು ಸನ್ಮಾನ ಸಮಾರಂಭ, ಭೋಜನ ಕೂಟ ಹಮ್ಮಿಕೊಳ್ಳುತ್ತಿದ್ದಾರೆ. ಇದರ ಮರ್ಮ ಏನು ಎಂಬುದನ್ನು ಮುಖಂಡರು’ ತಿಳಿಸಲಿ ಎಂದು ವಾಗ್ದಾಳಿ ನಡೆಸಿದರು. 

ಕಾಂಗ್ರೆಸ್‌ಗೆ ಜನಪರ ಕಾಳಜಿ ಇದ್ದರೆ ಅವರ ಅವಧಿಯಲ್ಲಿನ ಅಭಿವೃದ್ಧಿ ಕಾಮಗಾರಿ, ಅನುದಾನ ಬಳಕೆ ಸಂಬಂಧ ಜನರಿಗೆ ತಿಳಿಸಲಿ ಎಂದರು.

ಅಭಿವೃದ್ಧಿ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕರು ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಡಕ್ಕಿ ಭಟ್ಟಿ ಅಭಿವೃದ್ಧಿಗೆ ಬಿಡುಗಡೆಯಾದ ₹ 370 ಕೋಟಿಯಲ್ಲಿ ₹ 354 ಕೋಟಿಯನ್ನು ಬೇರೆಡೆ ವರ್ಗಾಯಿಸಿದ್ದು ಏಕೆ ಎಂಬುದನ್ನು ತಿಳಿಸಲಿ. ನೀರಿನ ಸಮಸ್ಯೆ, ಮೋಟರ್‌ ಕೆಟ್ಟಿರುವ ಬಗ್ಗೆ ಮಾತನಾಡುವವರು ಅವರ ಅವಧಿಯಲ್ಲೂ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇತ್ತು. ಅದನ್ನು ಏಕೆ ಪರಿಹರಿಸಲಿಲ್ಲ ಎಂದು  ಪ್ರಶ್ನಿಸಿದರು.

ಕೇಂದ್ರ, ರಾಜ್ಯ, ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇದೆ. ಈಗಲಾದರೂ 40 ವರ್ಷಗಳ ಸಮಸ್ಯೆಯಾದ ಆಶೋಕ ಮೇಲ್ಸೇತುವೆ ಬಗ್ಗೆ ಗಮನಹರಿಸಲಿ. ಕಿಷ್ಕಿಂಧೆಯಂತ ಹಳೆ ಬಸ್‌ ನಿಲ್ದಾಣದಲ್ಲೇ ವಾಣಿಜ್ಯ ಸಂಕೀರ್ಣ ನಿರ್ಮಿಸುವ ಯೋಜನೆ ಕೈಬಿಟ್ಟು ಬೇರೆಡೆ ಮಾಡಲಿ ಎಂದು ಒತ್ತಾಯಿಸಿದರು.

ಮುಖಂಡರಾದ ಖಾದರ್‌ ಬಾಷಾ, ಕೆ.ದಾದಾಪೀರ್‌, ಅಬ್ದುಲ್‌ ಗನಿ, ಸುಲೇಮಾನ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು