ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್ ಪ್ರಕರಣ ಮುಚ್ಚಿ ಹಾಕುವ ಯತ್ನ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ

Published 1 ಮೇ 2024, 15:47 IST
Last Updated 1 ಮೇ 2024, 15:47 IST
ಅಕ್ಷರ ಗಾತ್ರ

ದಾವಣಗೆರೆ: ‘ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಪರಾರಿಯಾಗುವವರೆಗೂ ರಾಜ್ಯ ಸರ್ಕಾರ ಮಲಗಿಗೊಂಡಿತ್ತಾ ಎಂದು ಪ್ರಶ್ನಿಸಿದ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ,  ಈ ‘ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಯತ್ನ ನಡೆದಿದೆ’ ಎಂದು ಆರೋಪಿಸಿದರು.

‘2019ರಲ್ಲಿ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದು, ಕಾಂಗ್ರೆಸ್– ಜೆಡಿಎಸ್ ಮೈತ್ರಿ ವೇಳೆ. ಅದಕ್ಕೂ ಬಿಜೆಪಿಗೂ ಏನು ಸಂಬಂಧ?  ಈಗ ತನಿಖೆ ಮಾಡೋರು ಯಾರು? ಕರ್ನಾಟಕದಲ್ಲಿ ಯಾರ ಸರ್ಕಾರವಿದೆ? ವ್ಯವಸ್ಥಿತವಾಗಿ ಈ ಪ್ರಕರಣ ಮುಚ್ಚಿಹಾಕಬೇಕು ಎಂದು ಕೆಲವರು ಹೊಂದಾಣಿಕೆ ರಾಜಕೀಯ ಮಾಡುತ್ತಿರುವ ಉದ್ದೇಶವೇನು? ಎಂದು ಅವರು ಇಲ್ಲಿ ಬುಧವಾರ ಸುದ್ದಿಗಾರರೆದುರು ಪ್ರಶ್ನಿಸಿದರು.

‘ರಾಜ್ಯದಲ್ಲಿ ನಡೆದಿದ್ದ ಪಿಎಸ್‌ಐ ಹಗರಣ ಏನಾಯ್ತು, ಏನಾದರೂ ಹೊರಗೆ ಬಿತ್ತಾ?, ಗಾಂಜಾ, ಅಫೀಮು ಪ್ರಕರಣ ಏನಾದವು? ಸಿನಿಮಾ ನಟಿಯರ ಬಂಧನವಾಯಿತು. ಅವರ ಮೊಬೈಲ್‌ನಲ್ಲಿ ಯಾವ ರಾಜಕಾರಣಿ ಮಗ ಇದ್ದ ಎಂದು ಬಹಿರಂಗವಾಯಿತಾ? ಅದನ್ನು ಮುಚ್ಚಿ ಹಾಕಿದರು. ಪೋಕ್ಸೋ ಪ್ರಕರಣ ದಾಖಲಾದರೂ ಏನು ಆಗಲಿಲ್ಲ. ಸ್ವಾಮೀಜಿಯನ್ನು ಸುಪ್ರಿಂ ಕೋರ್ಟ್ ಮತ್ತೆ ಜೈಲಿಗೆ ಕಳಿಸಿತು. ನಿಮ್ಮ ಕೈಯಲ್ಲಿ ಆಗದಿದ್ದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ. ನಾವು ಸಿಬಿಐ ತನಿಖೆಗೆ ಒತ್ತಾಯಿಸುತ್ತೇವೆ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ಎರಡು ಫ್ಯಾಕ್ಟರಿಗಳು ಇವೆ. ಅದರಲ್ಲಿ ಒಂದನ್ನು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ, ಇನ್ನೊಂದನ್ನು ಮೇ 8ರಂದು ನಾನು ಹೇಳುತ್ತೇನೆ. ಆ ಎರಡು ಫ್ಯಾಕ್ಟರಿಗಳಲ್ಲಿ ಸಿ.ಡಿ ಬಿಸಿನೆಸ್ ಒಂದೇ ಇದೆ. ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿ ಇದ್ದಾರೆ. ಇವರಿಬ್ಬರೂ ಹಲ್ಕಾ ರಾಜಕಾರಣ ಮಾಡುತ್ತಿದ್ದಾರೆ. ಎರಡು ಕುಟುಂಬಗಳು ರಾಜ್ಯದ ರಾಜಕಾರಣ ಹಾಳು ಮಾಡುತ್ತಿವೆ’ ಎಂದು ಹರಿಹಾಯ್ದರು.

‘ಮಹಿಳೆಯರ ಗೌರವ‌ದ ದೃಷ್ಟಿಯಿಂದ ಪೆನ್‌ ಡ್ರೈವ್‌ ಅನ್ನು ಗೋಪ್ಯವಾಗಿ ಇಡಬೇಕಿತ್ತು. ಚುನಾವಣೆ ವೇಳೆ ಬ್ಲ್ಯಾಕ್‌ಮೇಲ್ ಮಾಡಲು ಉದ್ದೇಶಪೂರ್ವಕವಾಗಿ ಬಳಕೆ ಮಾಡಿದ್ದಾರೆ. ಭಯ ಬೀಳಿಸಿ ಆ ಕುಟುಂಬಗಳ ಮರ್ಯಾದೆ ಕಳೆಯಲು ಮಾಡಿದ್ದಾರೆ. ಕಾಂಗ್ರೆಸ್– ಜೆಡಿಎಸ್ ಮೈತ್ರಿ ಇದ್ದಾಗಲೇ ಬಿಡುಗಡೆ ಮಾಡಬೇಕಿತ್ತು. ಚುನಾವಣೆ ಉದ್ದೇಶದಿಂದ ಈಗ ಬಿಡುಗಡೆ ಮಾಡಲಾಗಿದೆ’ ಎಂದರು.

‘ಹಾಲುಮತ ಸಮುದಾಯ ಇರೋವರೆಗೂ 2ಎ ಸಿಗೋಲ್ಲ’ ಹಾಲುಮತ ಸಮುದಾಯ 2 ‘ಎ’ನಲ್ಲಿ ಇರುವವರೆಗೂ ನಮಗೆ 2 ‘ಎ’ ಮೀಸಲಾತಿ ಸಾಧ್ಯವಿಲ್ಲ. ಅವರು ಪರಿಶಿಷ್ಟ ಪಂಗಡಕ್ಕೆ ಹೋದರೆ ನಾವು 2 ‘ಎ’ ಮೀಸಲಾತಿ ಪಡೆಯಬಹುದು. ಪಂಚಮಸಾಲಿ ಸಮುದಾಯ ಗಟ್ಟಿಯಾಗಿ ನಿಲ್ಲುವವರೆಗೂ 2 ‘ಎ’ ಸಾಧ್ಯವಿಲ್ಲ ಎಂದು ಹೇಳಿದರು. ಇಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು ‘ನಮಗೆ ಸಂಸದ ಸ್ಥಾನದ ಟಿಕೆಟ್‌ಗಿಂತ ಮೀಸಲಾತಿ ಮುಖ್ಯ. ನಾನು ಮುಖ್ಯಮಂತ್ರಿ ಆಗುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ ಮೀಸಲಾತಿ ಹೋರಾಟ ಬಿಡಲಾರೆ. ಸಮಾಜಕ್ಕೆ ನ್ಯಾಯ ಸಿಗಬೇಕಾದರೆ ಅದು ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಯಿಂದ ಮಾತ್ರ ಸಾಧ್ಯ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT