ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಡಾ ಅಧ್ಯಕ್ಷರ ರಾಜೀನಾಮೆಗೆ ಪ್ರಮೋದ್‌ ಮುತಾಲಿಕ್ ಆಗ್ರಹ

2017ರಲ್ಲಿ ಸಂಬಂಧಿಗಳ ಹೆಸರಿನಲ್ಲಿ ಅಕ್ರಮವಾಗಿ ನಿವೇಶನ ಪಡೆದ ಆರೋಪ
Last Updated 5 ಅಕ್ಟೋಬರ್ 2021, 6:27 IST
ಅಕ್ಷರ ಗಾತ್ರ

ದಾವಣಗೆರೆ: ‘ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್‌ ಸೇರಿ ಹಲವರು ಸಂಬಂಧಿಗಳ ಹೆಸರಿನಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದು, ಶಿವಕುಮಾರ್‌ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ
ಅಧ್ಯಕ್ಷ ಪ್ರಮೋದ್‌ ಮುತಾಲಿಕ್ ಆಗ್ರಹಿಸಿದರು.

‘2017ರಲ್ಲಿ 20 ಸಾವಿರ ನಿವೇಶನಗಳಿಗೆ ಅರ್ಜಿ ಸಲ್ಲಿಸಲಾಗಿತ್ತು. ಅವುಗಳಲ್ಲಿ 200 ಮನೆಗಳು ಹಂಚಿಕೆಯಾಗಿದ್ದು, ಅವುಗಳಲ್ಲಿ 103 ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ. ಬಡವರಿಗೆ ಸಿಗಬೇಕಾದ ಮನೆಗಳನ್ನು ಪ್ರಭಾವಿಗಳು, ಅಧಿಕಾರಿಗಳು ಲೂಟಿ ಹೊಡೆದಿದ್ದಾರೆ. ದೇವರಮನಿ ಶಿವಕುಮಾರ್ ಅವರು 10 ದಿನದೊಳಗೆ ರಾಜೀನಾಮೆ ನೀಡಬೇಕು. ಇಲ್ಲವೇ ಬಿಜೆಪಿ ವರಿಷ್ಠರು ಅವರಿಂದ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಧೂಡಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾಗಿದ್ದಾಗ ಅಂದು ಕಾಂಗ್ರೆಸ್‌ನಲ್ಲಿದ್ದ ದೇವರಮನಿ ಶಿವಕುಮಾರ್, ಕೆಪಿಸಿಸಿ ವೀಕ್ಷಕ ಡಿ. ಬಸವರಾಜ್, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿ ಹಲವರು ಪಡೆದುಕೊಂಡಿದ್ದಾರೆ. ಅರ್ಜಿಗಳಿಂದಲೇ ₹ 4.50 ಕೋಟಿ ಬಂದಿದೆ. ಈ ಹಣ ಏನಾಯಿತು? ನಿವೇಶನ ಸಿಗುವ ಆಸೆಯಿಂದ ಅರ್ಜಿ ಸಲ್ಲಿಸಿದ ಬಡವರ ಶಾಪ ಅವರಿಗೆ ತಟ್ಟುತ್ತದೆ’ ಎಂದು ಆಪಾದಿಸಿದರು.

‘ದೇವರಮನಿ ಶಿವಕುಮಾರ್ ಭ್ರಷ್ಟಾಚಾರ, ಲೂಟಿ ಮಾಡಿದ್ದು ಗೊತ್ತಿದ್ದರೂ ಬಿಜೆಪಿಯವರು ಧೂಡಾ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಿಜೆಪಿಯವರು ಅವರಿಂದ ಎಷ್ಟು ಹಣ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ. ಮನೆ ಇದ್ದವರಿಗೆ, ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದವರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ’ ಎಂದು ಆರೋಪಿಸಿದರು.

‘ಅಕ್ರಮ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅಂದಿನ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು ಸೇರಿ 134 ಜನರ ವಿರುದ್ಧ
10 ದಿನಗಳಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಿಸಲು ಸಿದ್ಧತೆ ನಡೆಸಲಾಗಿದೆ. 2021ರಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ನಿವೇಶನಗಳನ್ನು ಹಂಚಿಕೆಮಾಡದಂತೆ ತಡೆಯಾಜ್ಞೆ ತರಲು ಚಿಂತಿಸಲಾಗಿದೆ’ ಎಂದು ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಣಿಸರ್ಕಾರ್ ಎಚ್ಚರಿಸಿದರು.

‘2014ರಲ್ಲಿ ಜೆ.ಎಚ್. ಪಟೇಲ್ ಬಡಾವಣೆಯಲ್ಲಿ ಬಡವರಿಗೆ ಮನೆಗಳನ್ನು ನೀಡದೇ ಶಾಸಕರು, ಮಂತ್ರಿಗಳು ಅವರ ಹಿಂಬಾಲಕರೇ ಮನೆಗಳನ್ನು ಹಂಚಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದು, 103 ಮಂದಿಯ ವಿರುದ್ಧ ಪ್ರಕರಣ ನಡೆಯಲಿದೆ. ನ್ಯಾಯಾಲಯದಲ್ಲಿ ಇವರಿಗೆ ಶಿಕ್ಷೆಯಾಗಲಿದೆ’ ಎಂದು ಪ್ರಮೋದ್ ಮುತಾಲಿಕ್ ಭವಿಷ್ಯ ನುಡಿದರು.

ಆಯುಕ್ತರ ವಿರುದ್ಧ ಆರೋಪ: ‘ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಅವರೂ ಅಕ್ರಮವಾಗಿ ನಿವೇಶನ ಹಾಗೂ ಮನೆಗಳನ್ನು ಖರೀದಿಸಿದ್ದು, ಈ ಕುರಿತು ಲೋಕಾಯುಕ್ತ ತನಿಖೆಗೆ ಆಗ್ರಹಿಸಲಾಗುವುದು’ ಎಂದು ಎಚ್ಚರಿಸಿದರು.

ಶ್ರೀರಾಮಸೇನೆ ಜಿಲ್ಲಾ ಉಪಾಧ್ಯಕ್ಷ ಆಲೂರು ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಗರ್, ಜಿಲ್ಲಾ ಹೋರಾಟ ಪ್ರಮುಖ್ ಕರಾಟೆ ರಮೇಶ್, ಖಜಾಂಚಿ ಶ್ರೀಧರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

‘ಮತಾಂತರ ನಿಷೇಧ ಕಾಯ್ದೆ ಬಿಗಿಯಾಗಿರಲಿ’

‘ರಾಜ್ಯದಲ್ಲಿ ಮತಾಂತರ ಪಿಡುಗು ಹೆಚ್ಚಾಗುತ್ತಿದ್ದು, ಮತಾಂತರ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

‘ಮತಾಂತರ ನಿಷೇಧ ಕಾನೂನು ಕೇವಲ ಪೇಪರ್ ಮೇಲೆ ಇದ್ದರೆ ಉಪಯೋಗವಾಗದು. ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ, ಮತಾಂತರ ಸಾಬೀತಾದರೆ ಜೈಲು ಶಿಕ್ಷೆ ವಿಧಿಸುವಂಥ ಕಾನೂನು ಜಾರಿಗೆ ಬರಬೇಕು. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಕುರಿತು ಚಿಂತನೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿಯನ್ನೇ ಮತಾಂತರ ಮಾಡಿದ್ದಾರೆ. ವಿಧಾನಸಭೆಯಲ್ಲಿ ಶಾಸಕರು ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇದು ದುರ್ದೈವದ ಸಂಗತಿ. ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ ಇದೆ ಎಂಬ ನೆಪವೊಡ್ಡಿ, ಲಿಂಗಾಯತರು, ಒಕ್ಕಲಿಗರು, ಕುರುಬರು ಹಾಗೂ ಬ್ರಾಹ್ಮಣರನ್ನೂ ಮತಾಂತರ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

--

‘ಅಕ್ರಮವಾಗಿ ನಿವೇಶನ ಪಡೆದಿಲ್ಲ’

‘ನಾನಾಗಲಿ, ನನ್ನ ಕುಟುಂಬದವರಾಗಲೀ ಧೂಡಾದಿಂದ ಅಕ್ರಮವಾಗಿ ಯಾವುದೇ ನಿವೇಶನ ಪಡೆದಿಲ್ಲ. 2008ರಲ್ಲಿ ಧೂಡಾದಿಂದ ಲಾಟರಿ ಮೂಲಕ ನಿವೇಶನ ಮಂಜೂರಾಗಿದೆ. ಪ್ರಮೋದ್ ಮುತಾಲಿಕ್ ಅವರು ಹಿರಿಯರು. ಮಾಹಿತಿಯ ಕೊರತೆಯಿಂದ ಈ ರೀತಿ ಆರೋಪ ಮಾಡಿದ್ದಾರೆ. 2019ರಲ್ಲಿ ಮಹಾನಗರ ಚುನಾವಣೆಗೆ ಸ್ಪರ್ಧಿಸುವ ವೇಳೆ ಹಾಗೂ 2020ರಲ್ಲಿ ಲೋಕಾಯುಕ್ತಕ್ಕೆ ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ಅವರು ಪರಿಶೀಲಿಸಬಹುದು’ ಎಂದು ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT