ಭಾನುವಾರ, ಫೆಬ್ರವರಿ 23, 2020
19 °C

ಪ್ರಸನ್ನಾನಂದ ಶ್ರೀಗಳಿಂದ ಸರ್ಕಾರವನ್ನು ಎಚ್ಚರಿಸುವ ಕೆಲಸ: ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ, ಸಮಾಜದ ಏಳಿಗೆಗಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ನಿರಂತರ ಮಾಡಿಕೊಂಡು ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶ್ಲಾಘಿಸಿದರು.

ರಾಜನಹಳ್ಳಿಯಲ್ಲಿ ಎರಡನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಭಾನುವಾರ ನಡೆದ ಜನಜಾಗೃತಿ ಸಮಾವೇಶದಲ್ಲಿ ವಾಲ್ಮೀಕಿ ವಿಜಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಪುಣ್ಯಾನಂದ ಸ್ವಾಮೀಜಿ ಸ್ಥಾಪಿಸಿದ್ದ ಈ ಕ್ಷೇತ್ರವನ್ನು ಕಳೆದ 12 ವರ್ಷಗಳಿಂದ ಪ್ರಸನ್ನಾನಂದ ಸ್ವಾಮೀಜಿ ಅಭಿವೃದ್ಧಿ ಪಡಿಸಲು, ಸಮಾಜವನ್ನು ಮುಂದಕ್ಕೆ ಒಯ್ಯಲು ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಎಲ್‌.ಜಿ. ಹಾವನೂರು, ರಾಮಕೃಷ್ಣ ಹೆಗಡೆ, ಉಗ್ರಪ್ಪ ಅವರ ಸಹಕಾರದೊಂದಿಗೆ ದೇವೇಗೌಡರು ಹೋರಾಟ ಮಾಡಿದ್ದರಿಂದ ಚಂದ್ರಶೇಖರ್‌ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ವಾಲ್ಮೀಕಿ ಸಮಾಜ ಪರಿಶಿಷ್ಟ ಪಂಗಡದಲ್ಲಿ ಬರುವಂತಾಯಿತು. ಅದರ ಪರಿಣಾಮವಾಗಿ ಈಗ 14 ಶಾಸಕರು, ಇಬ್ಬರು ಸಂಸದರು ಆಗಿದ್ದಾರೆ ಎಂದು ಹೇಳಿದರು.

‘ಪುಣ್ಯಾನಂದ ಸ್ವಾಮೀಜಿ ಅವರ ಹೆತ್ತವರು ತಿಪಟೂರಿನಲ್ಲಿ ಅತ್ಯಂತ ಕಷ್ಟದ ಜೀವನ ಮಾಡುತ್ತಿರುವುದನ್ನು ಮಾಧ್ಯಮಗಳ ಮೂಲಕ ತಿಳಿದೆ. ಅಲ್ಲಿ ಅವರು ತಳ್ಳುಗಾಡಿ ಮೂಲಕ ಜೀವನ ಸಾಗಿಸುತ್ತಿದ್ದರು. ಅವರಿಗೆ ನಾನು ನೆರವು ನೀಡಿದ ಬಳಿಕ ಅನೇಕರು ಸಹಾಯಹಸ್ತ ಚಾಚಿದ್ದರಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು’ ಎಂದು ನೆನಪಿಸಿಕೊಂಡರು.

‘ಎಸ್‌ಟಿ ಮೀಸಲಾತಿ ಹೆಚ್ಚಿಸಲು ಸ್ವಾಮೀಜಿಯ ನೇತೃತ್ವದಲ್ಲಿ ಪಾದಯಾತ್ರೆ ಮಾಡಿದಾಗ ಜಸ್ಟಿಸ್‌ ನಾಗಮೋಹನ್‌ದಾಸ್‌ ಸಮಿತಿ ರಚಿಸುವ ಮೂಲಕ ವೈಜ್ಞಾನಿಕ ಅಧ್ಯಯನಕ್ಕೆ ಅವಕಾಶವನ್ನು ನಾನು ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದೆ’ ಎಂದರು.

ಪ್ರಸನ್ನಾನಂದ ಸ್ವಾಮೀಜಿ, ಮಹಿಮ ಪಟೇಲ್‌, ಎಚ್‌.ಎಸ್‌. ಶಿವಶಂಕರ್‌, ನಟ ಶಶಿಕುಮಾರ್‌ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು