ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ಗರ್ಭಿಣಿ ಸಾವು

ಇನ್ನು ಮುಂದೆಯಾದರೂ ವೈದ್ಯರು ನಿರ್ಲಕ್ಷ್ಯ ವಹಿಸದಿರಲಿ: ಅಧ್ಯಕ್ಷರ ಮನವಿ
Last Updated 17 ಮಾರ್ಚ್ 2021, 4:54 IST
ಅಕ್ಷರ ಗಾತ್ರ

ದಾವಣಗೆರೆ: ಹೆರಿಗೆಗಾಗಿ ಬಂದಿದ್ದ ಮಹಿಳೆ ಭಾನುವಾರ ರಾತ್ರಿ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಪ್ರಕರಣ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಪ್ರತಿಧ್ವನಿಸಿತು. ಇನ್ನು ಮುಂದಾದರೂ ವೈದ್ಯರು ಸರಿಯಾಗಿ ಸ್ಪಂದಿಸಬೇಕು ಎಂದು ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ ಮನವಿ ಮಾಡಿಕೊಂಡರೆ, ತನಿಖೆ ಸರಿಯಾಗಿ ನಡೆಸಲು ಸಹಕರಿಸಿ ಎಂದು ಸಿಇಒ ಡಾ. ವಿಜಯ ಮಹಾಂತೇಶ್‌ ದಾನಮ್ಮನವರ್‌ ಆರೋಗ್ಯ ಇಲಾಖೆಗೆ ಸೂಚಿಸಿದರು.

ಭಾನುವಾರ ವೈದ್ಯರು ಇರುವುದಿಲ್ಲ. ನರ್ಸ್‌ಗಳೇ ನೊಡಿಕೊಳ್ಳಬೇಕಾಗಿದೆ. ವೈದ್ಯರ ನಿರ್ಲಕ್ಷ್ಯದಿಂದ ಈ ಸಾವು ಉಂಟಾಗಿದೆ ಎಂದು ಕೆ.ವಿ. ಶಾಂತಕುಮಾರಿ ಅವರು ಆರೋಪಿಸಿದರಲ್ಲದೇ ಮೃತಪಟ್ಟಿರುವ ಕಾವ್ಯ ಸಂಬಂಧಿ ಆಗಿರುವ ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಪರಮೇಶಿ ಅವರನ್ನು ಸಭೆಗೆ ಕರೆಸಿ ಅಲ್ಲಿ ನಡೆದಿರುವ ಘಟನೆಯನ್ನು ತಿಳಿಸುವಂತೆ ಕೋರಿದರು.

‘ಭಾನುವಾರ ಆಗಿದ್ದರಿಂದ ರಾತ್ರಿ ವೈದ್ಯರು ಇರಲಿಲ್ಲ. ಆಯಾಗಳೇ ನಿರ್ವಹಿಸುತ್ತಿದ್ದರು. ಮಗುವನ್ನು ಬದುಕಿಸಿಕೊಳ್ಳುವುದು ಕಷ್ಟ. ತಾಯಿಯನ್ನು ಉಳಿಸುತ್ತೇವೆ ಎಂದು ಮೊದಲು ಭರವಸೆ ನೀಡಿದರು. ಆದರೆ ಕಾವ್ಯ ಮೃತಪಟ್ಟರು. ನಮ್ಮನ್ನು ಒಳಗೆ ಹೋಗಿ ನೋಡಲೂ ಬಿಟ್ಟಿಲ್ಲ. ₹ 300 ಕೊಡುವವರನ್ನಷ್ಟೇ ಒಳಗೆ ಬಿಡುತ್ತಾರೆ. ಕಾವ್ಯ ಅವರ ಮೂಗು ಕಿವಿಯಲ್ಲಿ ಯಾರೋ ಹೊಡೆದಿರುವಂತೆ ರಕ್ತ ಬಂದಿತ್ತು’ ಎಂದು ಪರಮೇಶಿ ತಿಳಿಸಿದರು.

‘ಇದು ಪ್ರಿ ಎಕ್ಲಮಿಶಿಯಾ ಪ್ರಕರಣ. ಫಿಟ್ಸ್‌, ಮೂಗು, ಕಿವಿಯಲ್ಲಿ ರಕ್ತ ಬರುತ್ತದೆ. ಮಹಿಳೆಯನ್ನು ಅಧಿಕ ರಕ್ತ ಹೀನತೆ ಸಮಸ್ಯೆಯಿಂದಾಗಿ ಹರಪನಹಳ್ಳಿಯಿಂದ ಇಲ್ಲಿಗೆ ಕಳುಹಿಸಿ ಕೊಡಲಾಗಿತ್ತು. ಡಾ. ರಮೇಶ್‌ ಅವರು ಆಗ ಕರ್ತವ್ಯ ನಿರ್ವಹಿಸುತ್ತಿದ್ದರು. ವೈದ್ಯರಿಂದ ಲೋಪವಾಗಿಲ್ಲ’ ಎಂದು ಡಿಎಚ್‌ಒ ಡಾ. ನಾಗರಾಜ್‌, ಸರ್ಜನ್‌ ಡಾ. ಜಯಪ್ರಕಾಶ್‌ ವಿವರ ನೀಡಿದರು.

‘ಪೊಲೀಸ್‌ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿರುವುದರಿಂದ ತನಿಖೆಗೆ ಸಹಕರಿಸಿ. ಭಾನುವಾರ ವೈದ್ಯರು ಇರುವುದಿಲ್ಲ, ಔಷಧ ತರಲು ಹೊರಗೆ ಕಳುಹಿಸಲಾಗುತ್ತದೆ ಮುಂತಾದ ಆರೋಪಗಳೂ ಬಂದಿರುವುದರಿಂದ ಆಂತರಿಕ ತನಿಖೆ ಮಾಡಿ’ ಎಂದು ಸಿಇಒ ಸೂಚಿಸಿದರು.

ಚನ್ನಗಿರಿ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಸ್ಪಂದಿಸದ ವೈದ್ಯರನ್ನು ಬೇರೆಡೆಗೆ ವರ್ಗಾವಣೆ ಮಾಡಲು, ಇಲ್ಲವೇ ಅಮಾನತು ಮಾಡಲು ಬರೆಯುವಂತೆ ಡಿಎಚ್‌ಒಗೆ ಸಿಇಒ ತಿಳಿಸಿದರು.

ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶ ಬರಲಿ: ಎಸ್ಸೆಸ್ಸೆಲ್ಸಿಯಲ್ಲಿ ಒಟ್ಟು 23,700 ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ 21,800 ಮಂದಿ ಮಾತ್ರ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಕೆಲವರು ಕಾಫಿ ಪ್ಲಾಂಟ್‌ಗಳಿಗೆ ಕೂಲಿಗೆ ತೆರಳಿದ್ದಾರೆ. ಕೆಲವು ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರೇ ಒಪ್ಪಿಲ್ಲ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ತಿಳಿಸಿದರು.

ಹಾಜರಾತಿ ಕಡ್ಡಾಯ ಇಲ್ಲದೇ ಇರುವುದರಿಂದ ಶೇ 100 ನೋಂದಣಿಯಾಗಬೇಕು. ಈ ಬಾರಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕು ಎಂದು ಸಿಇಒ ಹೇಳಿದರು. ಕಳೆದ ವರ್ಷ ಜಿಲ್ಲೆಯು 17ನೇ ಸ್ಥಾನದಲ್ಲಿತ್ತು. ಈ ಬಾರಿ 10ರ ಒಳಗೆ ತರಲು ಪ್ರಯತ್ನ ನಡೆಯುತ್ತಿದೆ ಎಂದು ಡಿಡಿಪಿಐ ತಿಳಿಸಿದಾಗ, ‘10ರ ಒಳಗೆ ಸ್ಥಾನ ಪಡೆದರೆ ನಿಮ್ಮನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಗುವುದು’ ಎಂದು ಸಿಇಒ ಹುರಿದುಂಬಿಸಿದರು.

4912 ಅನರ್ಹ ಬಿಪಿಎಲ್ ಕಾರ್ಡ್ ರದ್ದು: ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರನ್ನು ಪತ್ತೆಹಚ್ಚುವ ಆಂದೋಲನ ನಡೆಯುತ್ತಿದೆ. ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ 4,912 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆ ಸಹಾಯಕ ನಿರ್ದೇಶಕ ಸೈಯದ್ ಖಲೀಮುಲ್ಲ ಮಾಹಿತಿ ನೀಡಿದರು.

ನಾಲ್ಕು ಚಕ್ರಗಳ ವಾಹನಗಳ ನೋಂದಣಿ ಮಾಡಿಸಿಕೊಂಡವರ ವಿವರಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಿಂದ ಪಡೆಯಲು ಸರ್ಕಾರ ಸೂಚನೆ ನೀಡಿದೆ. ಅದರಂತೆ ಮಾಹಿತಿ ಪಡೆದು, ಅಂಥವರಲ್ಲಿ ಬಿಪಿಎಲ್‌ ಕಾರ್ಡ್‌ ಇದ್ದರೆ ರದ್ದು ಮಾಡಲಾಗುವುದು ಎಂದು ತಿಳಿಸಿದರು.

ಪ್ರತಿ ತಿಂಗಳು 1ರಿಂದ 10ರವರೆಗೆ ಬಯೊಮೆಟ್ರಿಕ್‌ ನೀಡುವ ಅವಧಿಯಾಗಿರುತ್ತದೆ. 11ರಿಂದ ತಿಂಗಳ ಅಂತ್ಯದವರೆಗೆ ಪಡಿತರ ವಿತರಣೆ ಮಾಡಲಾಗುತ್ತದೆ. ಕೆಲವು ಕಡೆ ನಾಲ್ಕೈದು ದಿವಸ ಮಾತ್ರ ಪಡಿತರ ನೀಡಲಾಗುತ್ತಿದೆ. ಪ್ರತಿ ಚೀಟಿಗೆ ₹ 10 ಪಡೆಯಲಾಗುತ್ತಿದೆ ಎಂಬ ಆರೋಪ ಬಂದಿದ್ದರಿಂದ ಪರಿಶೀಲನೆ ನಡೆಸಲಾಗಿದೆ. 8 ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗಿದೆ. 3 ಅಂಗಡಿಗಳನ್ನೇ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಂಗವಿಕಲರ ಬೇಡಿಕೆ ಪರಿಗಣಿಸಿ: ಜಿಲ್ಲೆಯಲ್ಲಿ ಅಂಗವಿಕಲರಿಗೆ ಕೇವಲ ವಾಹನ, ಸಾಧನ ಸಲಕರಣೆ ನೀಡುತ್ತಿರುವುದು ಸರಿಯಲ್ಲ. ಅಂಗವಿಕಲರ ಬೇಡಿಕೆ ಏನು ಎಂಬುದನ್ನು ತಿಳಿಯಬೇಕು. ಪುನರ್ವಸತಿ ಕಾರ್ಯಕರ್ತರ ನೆರವಿನೊಂದಿಗೆ ಸಮೀಕ್ಷೆ ನಡೆಸಬೇಕು. ವಸತಿ ಸೌಕರ್ಯ, ವೃತ್ತಿ ತರಬೇತಿ, ಕೌಶಲ ಮುಂತಾದ ಬೇಡಿಕೆ ಆಧಾರದ ಸಮೀಕ್ಷೆ ನಡೆಸಬೇಕು. ಅದಕ್ಕೆ ಸರಿಯಾಗಿ ಕ್ರಿಯಾ ಯೋಜನೆ ರೂಪಿಸಬೇಕು. ಅಂಗವಿಕಲರಿಗೆ ಆದಾಯ ತರುವಂತಹ ವೃತ್ತಿ ಆಧಾರಿತ ತರಬೇತಿ ಕೊಡಿಸಬೇಕು. ವಸತಿ ರಹಿತರಿಗೆ ಮನೆ ಒದಗಿಸಬೇಕು. ಸಾಲ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್‌, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವೀರ ಶೇಖರಪ್ಪ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಅವರೂ ಇದ್ದರು.

‘5ರವರೆಗೆ ತರಗತಿ ಆರಂಭಿಸಿದರೆ ಕ್ರಮ’

6ನೇ ತರಗತಿಯಿಂದ ಮೇಲಿನವರಿಗೆ ಮಾತ್ರ ಶಾಲೆ ಆರಂಭಿಸಲಾಗಿದೆ. ಕೆಲವು ಶಾಲೆಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ಆರಂಭಿಸಿರುವುದು ಗಮನಕ್ಕೆ ಬಂದಿದೆ. ಅಂಥ ಶಾಲೆಗಳ ಮುಖ್ಯಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ ತಿಳಿಸಿದರು.

ಕೊರೊನಾ ಎರಡನೇ ಅಲೆ ಬರಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಸರ್ಕಾರದ ನಿಯಮ ಪಾಲನೆ ಮಾಡಬೇಕು. 5ರ ವರೆಗೆ ತರಗತಿ ಆರಂಭಿಸಬಾರದು ಎಂದು ಸಿಇಒ ಸೂಚಿಸಿದರು.

‘ಜನರ ಕೈಗೆ ಸಿಗದ ಅಧಿಕಾರಿಗಳು’

ಅಧಿಕಾರಿಗಳು ಕಚೇರಿಯಲ್ಲಿ ಸಾರ್ವಜನಿಕರಿಗೆ ದೊರಕುತ್ತಿಲ್ಲ. ಇದ್ದರೂ ಸಾರ್ವಜನಿಕರ ಮನವಿಗೆ ಸ್ಪಂದಿಸುತ್ತಿಲ್ಲ. ಅಹವಾಲುಗಳನ್ನು ಆಲಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಪ್ರತಿ ಸೋಮವಾರ ಯಾವುದೇ ಸಭೆ ನಡೆಸುವುದಿಲ್ಲ. ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಬೇಕು. ಸಾರ್ವಜನಿಕರಿಗೆ ಲಭ್ಯರಿರಬೇಕು. ಅವರ ಮನವಿಗೆ ಸ್ಪಂದಿಸಬೇಕು. ವಿನಾಕಾರಣ ಕಚೇರಿಗಳಿಗೆ ಸಾರ್ವಜನಿಕರನ್ನು ಅಲೆದಾಡಿಸಬಾರದು ಎಂದು ಜಿಲ್ಲಾ ಪ‌ಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT