ಮಂಗಳವಾರ, ಜನವರಿ 28, 2020
25 °C
‘ಹಾದಿಯ ಹಂಗು’ ಮುಕ್ತಕಗಳ ಸಂಕಲನ ಬಿಡುಗಡೆ ಕಾರ್ಯಕ್ರಮ

‘ಪೂರ್ವಗ್ರಹವಿದ್ದರೆ ಉತ್ತಮ ಸಾಹಿತ್ಯ ಮೂಡದು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬರಹಗಾರ ಎಂದಿಗೂ ಪೂರ್ವಗ್ರಹಗಳನ್ನು ಮೀರಿರಬೇಕು. ಪೂರ್ವಗ್ರಹ ಪೀಡಿತರಿಂದ ಉತ್ತಮ ಸಾಹಿತ್ಯ ನಿರ್ಮಿಸಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ಹೇಳಿದರು.

ನಿಟ್ಟೂರು ಬಜ್ಜಿ ಹನುಮಂತಪ್ಪ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಮಹಾಂತೇಶ್‌ ಬಿ. ನಿಟ್ಟೂರು ಅವರ ‘ಹಾದಿಯ ಹಂಗು’ ಮುಕ್ತಕಗಳ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಶಿವಯೋಗ ಮಂದಿರದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಧರ್ಮ, ಮೇಲು, ಕೀಳು ಭಾವ ಇದ್ದ ಇರುವವರೇ ಹೆಚ್ಚಿದ್ದಾರೆ. ಇವುಗಳನ್ನು ಮೀರದೇ ಅನುಭಾವಿ ಸಾಹಿತ್ಯ ಹೊರಹೊಮ್ಮದು. ವಚನ ಸಾಹಿತ್ಯದಂತೆ ಎಲ್ಲವನ್ನು ಮೀರಬೇಕು. ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗಿದೆ. ಕೊಂಡು ಓದುವವರೂ ಇನ್ನೂ ಕಡಿಮೆ. ಅಂತರ್ಜಾಲದ ಪ್ರಭಾವ ಇದಕ್ಕೆ ಕಾರಣ ಎಂದು ವಿಶ್ಲೇಷಿಸಿದರು.

ಉಪನ್ಯಾಸಕ ಡಾ. ಹೊನ್ನಪ್ಪ ಹೊನ್ನಪ್ಪನವರ ಅವರು ಕೃತಿ ಅವಲೋಕನ ಮಾಡಿ, ‘ನಾಲ್ಕು ಕವನ ಬರೆದು ಸಾಹಿತಿ ಎಂದು ತಿರುಗಾಡುವವರು ಜಾಸ್ತಿಯಾಗಿದ್ದಾರೆ. ಹಾಗೆಯೇ ಬೇರೆಯವರ ಕವನಗಳನ್ನು ನೋಡಿ ಇದರಲ್ಲಿ ಏನಿದೆ ಎಂದು ಮೂಗು ಮುರಿಯುವವರೂ ಹೆಚ್ಚಿದ್ದಾರೆ. ನಾಲ್ಕು ಕವಿತೆ ಬರಿ ಎಂದು ಮೂಗು ಮುರಿಯುವವರಿಗೆ ಹೇಳಬೇಕು. ಆಗ ಅದರ ಕಷ್ಟ ಗೊತ್ತಾಗುತ್ತದೆ’ ಎಂದು ತಿಳಿಸಿದರು.

‘ಆನಂದಕ್ಕಾಗಿ ಸಾಹಿತ್ಯ ರಚನೆಯ ಕಾಲ ಹೋಗಿದೆ. ಸಮಾಜ ಡೊಂಕುಗಳನ್ನು ತಿದ್ದಲು, ಜಾತಿ ಅಸಮಾನತೆಗಳನ್ನು ಮೀರಲು ಬರೆಯಬೇಕಾದ ಕಾಲದಲ್ಲಿ ನಾವಿದ್ದೇವೆ. ಈಗಿನ ರಾಜಕಾರಣದ ವಾಸ್ತವವನ್ನು ಹಾದಿಯ ಹಂಗು ಸಂಕಲನದಲ್ಲಿ ಬಿಚ್ಚಿಟ್ಟಿದ್ದಾರೆ’ ಎಂದು ವಿವರಿಸಿದರು.

ಬಹುತೇಕ ಸಾಹಿತ್ಯ ಎಂದರೆ ಪಾರ್ಥೇನಿಯಂ ಗಿಡವೇ ಬೆಳೆದ ವನದಂತಾಗಿದೆ. ಅದನ್ನೇ ಕವಿ ವಿಡಂಬಿಸಿದ್ದಾರೆ. ಈಗಂತೂ ಶಾಲಾ, ಕಾಲೇಜುಗಳಿಗೆ ಪೊಲೀಸರು ನುಗ್ಗುವ ವಾತಾವರಣ ನಿರ್ಮಾಣವಾಗಿದೆ. ಸಾಹಿತ್ಯ ಎನ್ನುವುದು ಸಮಾಜದ ಪ್ರತಿಬಿಂಬ ಆಗುವ ಬದಲು ಸಮಾಜ ಹೇಗಿರಬೇಕು ಎಂಬುದನ್ನು ತೋರಿಸುವ ಗತಿಬಿಂಬವಾಗಬೇಕು ಎಂದರು.

ನಿವೃತ್ತ ಉಪನ್ಯಾಸಕ ಪ್ರೊ. ತಿಮ್ಮಪ್ಪ, ಜನಮಿಡಿತ ಸಂಪಾದಕ ಜಿ.ಎಂ.ಆರ್‌. ಆರಾಧ್ಯ, ಸಾಹಿತಿ ಇಸ್ಮಾಯಿಲ್‌ ಎಲಿಗಾರ್, ಸಾಹಿತಿ ಮಹಾಂತೇಶ್‌ ನಿಟ್ಟೂರು, ಮಂಜಣ್ಣ ಪುಟಗನಾಳ್‌, ಚಂದ್ರಪ್ಪ, ಆಂಜನೇಯ, ರವಿ, ನಾಗರಾಜ್‌ ಅವರೂ ಇದ್ದರು. ಐರಣಿ ಚಂದ್ರು, ಸಂಗೀತ ರಾಘವೇಂದ್ರ, ಪ್ರಶಾಂತ ಕಾವ್ಯಗಾಯನ ನಡೆಸಿಕೊಟ್ಟರು.

ಪ್ರತಿಕ್ರಿಯಿಸಿ (+)