ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯಿತು ಅಂಗಡಿ ಪೂಜೆ: ಲಕ್ಷ್ಮೀಪೂಜೆಗೆ ಸಿದ್ಧತೆ

ಬಲಿಪಾಡ್ಯಮಿ ದಿನ ನಡೆಯಲಿದೆ ಸಂಭ್ರಮದ ದೀಪಾವಳಿ
Last Updated 15 ನವೆಂಬರ್ 2020, 15:14 IST
ಅಕ್ಷರ ಗಾತ್ರ

ದಾವಣಗೆರೆ: ದೀಪಾವಳಿಯ ಆರಂಭದ ಎರಡು ದಿನಗಳ ಸಂಭ್ರಮ ಮುಗಿದಿದೆ. ಸೋಮವಾರ ಬಲಿಪಾಡ್ಯಮಿಯಂದು ಕೊನೇ ದಿನದ ಸಂಭ್ರಮಕ್ಕೆ ಜನ ಸಜ್ಜಾಗಿದ್ದಾರೆ.

ಶನಿವಾರ ಮನೆ ಸ್ವಚ್ಛಗೊಳಿಸಿ, ರಂಗೋಲಿ ಇಟ್ಟು, ಅಭ್ಯಂಜನ ಸ್ನಾನ ಮಾಡಿ, ವಾಹನಗಳನ್ನು ತೊಳೆದು ದೀಪಾವಳಿಗೆ ಚಾಲನೆ ನೀಡಿದ್ದರು. ಯುವಕರು ಪಟಾಕಿ ಸಿಡಿಸಿ ಈ ಸಂಭ್ರಮಕ್ಕೆ ಕಳೆಕಟ್ಟಿದ್ದರು. ಭಾನುವಾರ ಎಲ್ಲ ಕಡೆ ಅಂಗಡಿ ಪೂಜೆಗಳು ನಡೆದವು.

ಅಂಗಡಿ, ಹೋಟೆಲ್‌ಗಳನ್ನು ಅಲಂಕರಿಸಲಾಗಿತ್ತು. ಹಳೇ ಲೆಕ್ಕಗಳನ್ನು ಮುಗಿಸಿ ಹೊಸ ಲೆಕ್ಕಕ್ಕೆ ನಾಂದಿ ಹಾಡಲಾಯಿತು. ಹಳೇ ಪುಸ್ತಕ ತೆಗೆದು ಹೊಸ ಪುಸ್ತಕ ಇಡಲಾಯಿತು. ಸ್ಟುಡಿಯೊಗಳಲ್ಲಿ ಕ್ಯಾಮೆರಾಗಳಿಗೆ, ಸಲೂನ್‌ಗಳಲ್ಲಿ ಕತ್ತರಿ, ಬಾಚಣಿಗೆಗಳನ್ನು, ಪುಸ್ತಕದ ಅಂಗಡಿಯಲ್ಲಿ ಪೆನ್ನು ಪುಸ್ತಕಗಳನ್ನು ಹೀಗೆ ಆಯಾ ಅಂಗಡಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಇಟ್ಟು ಪೂಜೆ ಸಲ್ಲಿಸಲಾಯಿತು.

ಅಂಗಡಿ ಪೂಜೆಗೆ ಬಂದವರಿಗೆ ಪ್ರಸಾದದ ಜತೆಗೆ ಸಿಹಿತಿಂಡಿ ನೀಡಿ, ತಂಪು ಪಾನೀಯ ಕೊಟ್ಟು ಸತ್ಕರಿಸಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಇಂದು ಹಟ್ಟಿ ಲಕ್ಕವ್ವ ಪೂಜೆ: ಕೃಷಿ ಸಂಬಂಧಿ ಜಾನುವಾರು, ಪರಿಕರಗಳನ್ನು ಪೂಜಿಸಿ, ಪ್ರಾರ್ಥನೆ ಮಾಡುವ ಕ್ರಮ ಎಲ್ಲೆಡೆ ಇದೆ. ಆದರೆ ಪದ್ಧತಿಗಳು ಭಿನ್ನವಾಗಿರುತ್ತವೆ. ದಾವಣಗೆರೆಯಲ್ಲಿ ಹಟ್ಟಿ ಲಕ್ಕವ್ವನ ಪೂಜೆ ವಿಶೇಷವಾಗಿ ಸೋಮವಾರ ನಡೆಯಲಿದೆ. ಸೆಗಣಿ ಇಟ್ಟು, ಸುತ್ತ ಕಂಚಿಕಡ್ಡಿ ಊರಿ, ಹೂವಿನಿಂದ ಅಲಂಕರಿಸಿ ಹಟ್ಟಿ ಲಕ್ಕವ್ವನ ಪೂಜೆ ನಡೆಯಲಿದೆ.

ಬಳಿಕ ಮನೆಮನೆಗಳಲ್ಲಿ ಲಕ್ಷ್ಮೀಪೂಜೆ ನೆರವೇರಲಿದೆ. ಮನೆಯ ಐಶ್ವರ್ಯ ವೃದ್ಧಿಯಾಗಲಿ ಎಂದು ಜನರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಯುವಕರು ಖುಷಿಗಾಗಿ ಶನಿವಾರ, ಭಾನುವಾರ ಪಟಾಕಿ ಸಿಡಿಸಿದರೂ ದೊಡ್ಡ ಹಬ್ಬ ಸೋಮವಾರವೇ ನಡೆಯಲಿದೆ. ಪಟಾಕಿ ವ್ಯಾಪಾರ ಕೂಡ ಸೋಮವಾರ ಹೆಚ್ಚು ನಡೆಯಲಿದೆ.

ಬಹುತೇಕ ಮನೆಗಳಿಗೆ ವಿದ್ಯುತ್‌ ಅಲಂಕಾರ ಮಾಡಲಾಗಿತ್ತು. ಕೆಲವು ಕಡೆ ಆಕರ್ಷಕ ಗೂಡುದೀಪಗಳು, ಆಕಾಶಬುಟ್ಟಿಗಳನ್ನು ಇಡಲಾಗಿತ್ತು. ಆಕರ್ಷಕ ಹಣತೆಗಳು ಬೆಳಗಿದವು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪಟಾಕಿ ಸದ್ದು ಕಡಿಮೆ ಇದ್ದರೂ ಸಂಭ್ರಮಕ್ಕೆ ಕೊರತೆ ಕಂಡುಬರಲಿಲ್ಲ.

ಮಾವಿನ ಎಲೆ, ಬೂದುಗುಂಬಳ, ಬಾಳೆಕಂದು, ಬಾಳೆ ಎಲೆ, ಹಣ್ಣುಹಂಪಲುಗಳು, ಚೆಂಡು ಹೂವು, ಕಾಕಡ, ಕನಕಾಂಬರಿ ಸಹಿತ ವಿವಿಧ ಹೂವುಗಳಿಗೆ ಭಾನುವಾರವೂ ಭಾರಿ ಬೇಡಿಕೆ ಕಂಡು ಬಂತು.

ಕೊರೊನಾ ಸೋಂಕು ಎಂಬ ಮಾರಿಯ ನಡುವೆಯೂ ಬೆಳಕಿನ ಹಬ್ಬ ಎಲ್ಲರಲ್ಲಿ ಸಡಗರವನ್ನು ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT