ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧರಿಗೆ ಸೀಮಿತವಾಗುತ್ತಿರುವ ಪ್ರತಿಷ್ಠಿತ ಬಡಾವಣೆಗಳು

ಸಮಾನ ಮನಸ್ಕರ ಸೇವಾ ಸಮಿತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಸವಪ್ರಭು ಶ್ರೀ ಕಳವಳ
Last Updated 8 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ದಾವಣಗೆರೆ: ವಿದ್ಯಾನಗರ, ಆಂಜನೇಯ ಬಡಾವಣೆ ಸಹಿತ ನಗರದ ಪ್ರತಿಷ್ಠಿತ ಬಡಾವಣೆಗಳು ವೃದ್ಧಾಶ್ರಮದಂತಾಗಿವೆ. ಅಲ್ಲಿ ಹೆಚ್ಚಿನ ಮನೆಗಳಲ್ಲಿ ವೃದ್ಧರಷ್ಟೇ ಇದ್ದಾರೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಸಮಾನ ಮನಸ್ಕರ ಸೇವಾ ಸಮಿತಿ ಉದ್ಘಾಟನೆ ಹಾಗೂ ಕನ್ನಡ ನಿತ್ಯೊತ್ಸವ ಸಮಾರಂಭದಲ್ಲಿ ಸಂಸ್ಥೆಯ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಮಕ್ಕಳು ಎಲ್ಲಿದ್ದಾರೆ ಎಂದು ಕೇಳಿದರೆ ಅಮೆರಿಕ, ಇಂಗ್ಲೆಂಡ್‌, ಬೆಂಗಳೂರು ಎಂದೆಲ್ಲ ಹೇಳುತ್ತಿದ್ದಾರೆ. ತಂದೆ ತಾಯಿಗಳನ್ನು ನೋಡಿಕೊಳ್ಳುವ ಸಂಸ್ಕೃತಿಯನ್ನು ಕಲಿಸುವಲ್ಲಿ ನಾವು ವಿಫಲರಾಗಿದ್ದೇವೆ. ಹೆತ್ತವರಿಗೆ ವಯೋ ಸಹಜ ತೊಂದರೆಯಾದರೆ ಅವರ ಸೇವೆಯನ್ನು ಮಕ್ಕಳು ಮಾಡುತ್ತಿಲ್ಲ. ಆದರೆ ಹೆತ್ತವರು ತನ್ನ ಮಗುವಿಗೆ ಏನೇ ತೊಂದರೆಯಾದರೂ, ಹುಟ್ಟುತ್ತಲೇ ತೊಂದರೆ ಇದ್ದರೂ ಜೋಪಾನವಾಗಿ ಸಾಕುತ್ತಾರೆ’ ಎಂದು ತಿಳಿಸಿದರು.

‘ಹಣ ಗಳಿಸಿದರೆ ದೊಡ್ಡವರಾಗುವುದಿಲ್ಲ. ಸೇವೆಯಿಂದ ದೊಡ್ಡರಾಗುತ್ತೇವೆ. ಬದುಕಲು ಹಣ ಬೇಕು. ಅದು ಸದ್ವಿನಿಯೋಗವಾಗಬೇಕು. ಹಣ ಗಳಿಸುವುದೊಂದೇ ಬದುಕಿನ ಉದ್ದೇಶವಾಗಬಾರದು. ಹೇಗಾದರೂ ಮಾಡಿ ಹಣ ಅತಿ ಸಂಗ್ರಹ ಮಾಡಿದರೆ ದುಡ್ಡಿದ್ದವನ ನಡಿಗೆ ಜೈಲಿನ ಕಡೆಗೆ ಎಂದಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ಕಾರ್ಯಕ್ರಮ ಉದ್ಘಾಟಿಸಿ, ‘ಜಾಗತೀಕರಣದ ಈ ಕಾಲದಲ್ಲಿ ಅವಕಾಶವಾದಿತನ ಮತ್ತು ಮಾರುಕಟ್ಟೆ ಆಧಾರಿತ ಬದುಕೇ ಎಲ್ಲಡೆ ಕಾಣುತ್ತಿದ್ದೇವೆ. ಸಮಾಜದಲ್ಲಿ ಸ್ವಾರ್ಥವೇ ತುಂಬಿರುವಾಗ ಸ್ನೇಹ, ಸೇವೆ, ಸಹಕಾರ, ಸೌಹಾರ್ದ ಇಟ್ಟುಕೊಂಡ ಸಮಾನ ಮನಸ್ಕರು ಸಿಗುವುದು ಕಷ್ಟ’ ಎಂದು ವಿಶ್ಲೇಷಿಸಿದರು.

ಸಮಾಜ ಸೇವೆ ಮಾಡುವ ಸಮಾನ ಮನಸ್ಕರು ಇಲ್ಲ ಎಂದಲ್ಲ. ಆದರೆ ಅವರಿಗೆ ಮಾನ್ಯತೆ, ಗೌರವ, ಅವಕಾಶಗಳು ಸಿಗುತ್ತಿಲ್ಲ. ಮುಖವಾಡ ಹಾಕಿಕೊಂಡು ಅಸಹಜವಾಗಿ ಬದುಕುವವರೇ ಎಲ್ಲೆಡೆ ವಿಜ್ರಂಭಿಸುತ್ತಿದ್ದಾರೆ. ನೈಜವಾಗಿ ಬದುಕುವವರು ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ ಎಂಬ ಪರಿಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾನ ಮನಸ್ಕರ ಸೇವಾ ಸಮಿತಿಯ ಅಧ್ಯಕ್ಷ ಬಂಕಾಪುರದ ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ದೂರದರ್ಶನ ದುರ್ದರ್ಶನ ಆಗಿದೆ. ಮೊಬೈಲ್‌ ಫೋನ್‌ ಬಂದಿದ್ದರಿಂದ ಆದ ಲಾಭಕ್ಕಿಂತ ಹತ್ತುಪಟ್ಟು ಅನಾಹುತಗಳೇ ಆಗಿವೆ. ಪುಸ್ತಕ ಓದುವವರೇ ಇಲ್ಲವಾಗಿದೆ. ಸಾಹಿತಿಗಳು ಬರೆದರೆ ಅದನ್ನು ಪ್ರಕಟಿಸುವವರು ಇಲ್ಲದೇ ಬರೆದವರೇ ಪ್ರಕಟಿಸಬೇಕಾದ ಕೆಟ್ಟಸ್ಥಿತಿಯಲ್ಲಿ ನಾವಿದ್ದೇವೆ. ಅದಕ್ಕಾಗಿ ಪ್ರತಿಭಾವಂತರನ್ನು ಗುರುತಿಸಿ ಅವರಿಗೆ ನೆರವು ನೀಡಿ ಪ್ರೋತ್ಸಾಹಿಸಲು ಈ ಸಂಘವನ್ನು ಹುಟ್ಟುಹಾಕಲಾಗಿದೆ’ ಎಂದು ತಿಳಿಸಿದರು.

ಸಮಿತಿಯ ಗೌರವಾಧ್ಯಕ್ಷ ಜಿ. ಅಬ್ದುಲ್‌ ಸತ್ತಾರ್‌ಸಾಬ್‌ ಅಧ್ಯಕ್ಷತೆ ವಹಿಸಿದ್ದರು. ಕಲಾಕುಂಚ ಅಧ್ಯಕ್ಷ ಕೆ.ಎಚ್‌. ಮಂಜುನಾಥ, ಸಮಿತಿಯ ಉಪಾಧ್ಯಕ್ಷ ಬಕ್ಕೇಶ್‌ ನಾಗನೂರು ಅವರೂ ಉಪಸ್ಥಿತರಿದ್ದರು. ವೀಣಾ ಪ್ರಸಾದ್‌, ಸಂಗೀತಾ ಮತ್ತು ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು. ಸಮಿತಿಯ ಖಜಾಂಚಿ ಟಿ. ಅಜ್ಜೇಶ್ ಸ್ವಾಗತಿಸಿದರು. ಸಹಕಾರ್ಯದರ್ಶಿ ಲೋಕೇಶ್‌ ಬಿ. ಕುರುಬರಹಳ್ಳಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ ಶೆಣೈ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT