ಭಾನುವಾರ, ಫೆಬ್ರವರಿ 28, 2021
21 °C
ನಗರ ಡಿವೈಎಸ್‌ಪಿ ಯು. ನಾಗೇಶ್ ಐತಾಳ್ ಸಲಹೆ

ಅರ್ಚಕರಿಗೆ ಬೇಕಿದೆ ಸಮಾಜದ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಇಂದಿನ ದಿನಗಳಲ್ಲಿ ಅರ್ಚಕರು ಸಂಕಷ್ಟದಲ್ಲಿ ಇದ್ದು, ಅದರಲ್ಲೂ ಕೋವಿಡ್ ಸಮಯದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಸಮಾಜ ಹಾಗೂ ಸಂಘಟನೆಗಳು ಅವರನ್ನು ಮೇಲೆತ್ತುವ ಕೆಲಸ ಮಾಡಬೇಕು ಎಂದು ನಗರ ಡಿವೈಎಸ್‌ಪಿ ಯು. ನಾಗೇಶ್ ಐತಾಳ್ ಸಲಹೆ ನೀಡಿದರು.

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ದಾವಣಗೆರೆ ಜಿಲ್ಲಾ ಕಾರ್ಯಕಾರಿಣಿ ಸಮಿತಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬ್ರಾಹ್ಮಣರು ಉನ್ನತ ವ್ಯಾಸಂಗ ಮಾಡುತ್ತಾರೆ. ಹೆಚ್ಚಿನ ಮಂದಿ ಎಂಜಿನಿಯರ್‌ ಗಳಾಗಿರುತ್ತಾರೆ. ಆದರೆ ಅವರಿಗೆ ಹೆಣ್ಣು ಕೊಡುತ್ತಿಲ್ಲ. ವಧುದಕ್ಷಿಣೆ ಕೊಟ್ಟು ವಿವಾಹವಾಗುವ ಪರಿಸ್ಥಿತಿ ಬಂದಿದೆ. ಬ್ರಾಹ್ಮಣರಿಗೆ ಕಷ್ಟವನ್ನು ಎದುರಿಸುವ ಶಕ್ತಿ ಇದೆ. ಬಡತನವಿದ್ದರೂ ಬೇರೆಯವರ ಬಳಿ ಸಾಲ ಕೇಳಿ ಜೀವನ ಮಾಡುವುದಿಲ್ಲ. ಕಷ್ಟದಲ್ಲಿರುವ ಅರ್ಚಕರನ್ನು ಮೇಲೆ ತರಬೇಕಾಗಿದೆ’ ಎಂದು ಹೇಳಿದರು.  

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿ.ಸಿ.ಶ್ರೀನಿವಾಸ ಮಾತನಾಡಿ, ‘23 ಜಿಲ್ಲೆಗಳಲ್ಲಿ ಪುರೋಹಿತರ ಪರಿಷತ್ ಸಭೆಗಳು ಸ್ಥಾಪನೆಯಾಗಿವೆ.  ಬ್ರಾಹ್ಮಣ ಮಂಡಳಿಯಿಂದ 22 ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಅವುಗಳಲ್ಲಿ 8 ಯೋಜನೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ವೇಳೆ ಘೋಷಿಸಿದ್ದ ಶೇ 10ರಷ್ಟು ಮೀಸಲಾತಿ ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ 9 ರಾಜ್ಯಗಳಲ್ಲಿ ಘೋಷಣೆಯಾಗಿದೆ. ರಾಜ್ಯದಲ್ಲೂ ಮೀಸಲಾತಿ ಜಾರಿಗೆ ತರಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಸಲ್ಲಿಸಿದ್ದು, ಮುಂದಿನ ಸಚಿವ ಸಂಪುಟದಲ್ಲಿ ಅನುಮೋದನೆ ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿದ್ದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪವನಕುಮಾರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್‌ನ ಸಂಘಟನಾ ಕಾರ್ಯದರ್ಶಿ ರಮೇಶ್ ಜೋಯ್ಸ್, ಖಜಾಂಚಿ ಪ್ರದೀಪ್ ಭಟ್, ದಾವಣಗೆರೆ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಬಿ.ಟಿ. ಅಚ್ಯುತ, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಂಕರನಾರಾಯಣರಾವ್, ನೇತ್ರ ತಜ್ಞ ಡಾ.ಮೋಹನ್ ನಾಡಿಗೇರ್, ಜಿಲ್ಲಾ ಘಟಕದ ಜಯತೀರ್ಥಚಾರ್, ಚಿದಂಬರ ಮೂರ್ತಿ, ರಂಗನಾಥ ನಾಡಿಗೇರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.