ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ನರೇಗಾದಡಿ ಜಲ ಸಂರಕ್ಷಣೆ ಕಾಯಕ

ರೈತರ ಜಮೀನಿನಲ್ಲಿ ಟ್ರೆಂಚ್‌–ಬದು ನಿರ್ಮಾಣಕ್ಕೆ ಆದ್ಯತೆ: ಜಿ.ಪಂ. ಸಿಇಒ ಪದ್ಮ ಬಸವಂತಪ್ಪ
Last Updated 4 ಜೂನ್ 2020, 3:43 IST
ಅಕ್ಷರ ಗಾತ್ರ

ದಾವಣಗೆರೆ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಮಳೆಗಾಲದಲ್ಲಿ ಜಲಸಂರಕ್ಷಣೆ ಮಾಡಲು ರೈತರ ಜಮೀನುಗಳಲ್ಲಿ ಟ್ರೆಂಚ್‌ ಕಂ ಬದು ನಿರ್ಮಾಣ ಕಾಮಗಾರಿಗೆ ಒತ್ತು ನೀಡುತ್ತಿದ್ದೇವೆ. ಕೊರೊನಾ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಕೆರೆ ಹೂಳೆತ್ತುವ ಕಾಮಗಾರಿಗೆ ಕೊನೆಯ ಆದ್ಯತೆ ಕೊಡುತ್ತಿದ್ದೇವೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ತಿಳಿಸಿದರು.

ಬುಧವಾರ ನಡೆದ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಜನರು ‘ನರೇಗಾ’ ಕುರಿತ ಕೇಳಿದ ಪ್ರಶ್ನೆಗಳಿಗೆ ಸಿಇಒ ಉತ್ತರಿಸಿದರು. ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ನೀಡಿದ ದೂರುಗಳನ್ನು ದಾಖಲಿಸಿಕೊಂಡ ಅವರು, ಖುದ್ದಾಗಿ ಬಂದು ಪರಿಶೀಲಿಸುವುದಾಗಿಯೂ ಭರವಸೆ ನೀಡಿದರು.

ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ, ದಾವಣಗೆರೆ ತಾಲ್ಲೂಕಿನ ತಿಮ್ಮಾಪುರ, ಹರಿಹರ ತಾಲ್ಲೂಕಿನ ಸಾರಥಿ ಗ್ರಾಮಗಳಲ್ಲಿ ನರೇಗಾದಡಿ ಟ್ರೆಂಚ್‌ ಕಂ ಬದು ನಿರ್ಮಾಣ ಕೆಲಸ ಉತ್ತಮವಾಗಿ ನಡೆದಿದೆ. ಮಳೆ ಆರಂಭವಾದ ಬಳಿಕ ಗುಡ್ಡಗಾಡು ಪ್ರದೇಶಗಳಲ್ಲಿ ಟ್ರೆಂಚ್‌ ನಿರ್ಮಿಸಿ ಸಸಿಗಳನ್ನು ನೆಡಲಾಗುವುದು ಎಂದು ಪದ್ಮ ಬಸವಂತಪ್ಪ ತಿಳಿಸಿದರು.

ಬದು ನಿರ್ಮಿಸುವುದರಿಂದ ಜಲಸಂರಕ್ಷಣೆ ಜೊತೆಗೆ ಮಣ್ಣಿನ ಸವಕಳಿಯನ್ನೂ ತಡೆಯಬಹುದು. ಮಣ್ಣಿನ ತೇವಾಂಶ ಹೆಚ್ಚುವರಿಂದ ಶೇ 10ರಿಂದ 15ರಷ್ಟು ಅಧಿಕ ಇಳುವರಿ ಬರಲಿದೆ. ಕಂದಕ, ಬದು ನಿರ್ಮಿಸಿಕೊಳ್ಳಲು ಎಕರೆಗೆ ಗರಿಷ್ಠ ₹ 13 ಸಾವಿರ ಆರ್ಥಿಕ ನೆರವು ನೀಡಲಾಗುವುದು. ಒಂದು ಎಕರೆ ಭೂಮಿಯಲ್ಲಿ 100 ಮೀ. ಬದು ನಿರ್ಮಾಣದಿಂದ ಹದ ಮಳೆಗೆ 2 ಲಕ್ಷ ಲೀಟರ್‌ ನೀರು ಸಂಗ್ರಹವಾಗಲಿದೆ. ಬದುವಿನ ಮೇಲೆ ತೋಟಗಾರಿಕೆ, ಅರಣ್ಯ ಸಸಿಗಳನ್ನು ನಾಟಿ ಮಾಡುವುದರಿಂದ ಆದಾಯವನ್ನೂ ಹೆಚ್ಚಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ವಿಶೇಷವಾಗಿ ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರಿನ ಶಾಸಕರು ಹೆಚ್ಚು ಆಸಕ್ತಿ ವಹಿಸಿ ಕಾಮಗಾರಿ ಸ್ಥಳಕ್ಕೆ ಹೋಗುತ್ತಿರುವುದರಿಂದ ಈ ಭಾಗಗಳಲ್ಲಿ ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸವಾಗಿದೆ ಎಂದೂ ಅವರು ಹೇಳಿದರು.

ಬದು ನಿರ್ಮಾಣ ಮಾಸಾಚರಣೆ: ‘ಮೇ 19ರಿಂದ ಜೂನ್‌ 18ರವರೆಗೆ ಬದು ನಿರ್ಮಾಣ ಮಾಸಾಚರಣೆ ನಡೆಸುತ್ತಿದ್ದೇವೆ. 270 ಬದು ನಿರ್ಮಾಣ ಕಾಮಗಾರಿ ಮುಗಿದಿದೆ. ಪ್ರತಿ ಹಳ್ಳಿಯಲ್ಲೂ ಕನಿಷ್ಠ 10 ಬದು ನಿರ್ಮಾಣ ಕೆಲಸ ಕೈಗೊಳ್ಳುವ ಗುರಿ ಹೊಂದಿದ್ದೇವೆ. 113 ಹಳ್ಳಿಗಳಲ್ಲಿ ಕೆಲಸ ಆರಂಭಿಸಲಾಗಿದೆ. ಮಳೆಗಾಲ ಮುಗಿದು ಜಮೀನಿನಲ್ಲಿ ಬೆಳೆ ಕೊಯ್ಲು ಮಾಡಿದ ನಂತರ ಮತ್ತೆ ಕಾಮಗಾರಿ ಆರಂಭಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ. ಆನಂದ ಮಾಹಿತಿ ನೀಡಿದರು.

ಅರಣ್ಯೀಕರಣ: ‘ಜೂನ್‌ 5ರಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಸಸಿ ನೆಡಲಾಗುವುದು. ಮಳೆಗಾಲದಲ್ಲಿ ಗ್ರಾಮೀಣ ಭಾಗಗಳಲ್ಲಿ ನೆಡಲು 3 ಲಕ್ಷ ಸಸಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಅರಣ್ಯೀಕರಣಕ್ಕೆ ಒಟ್ಟು ಐದು ಲಕ್ಷ ಸಸಿಗಳನ್ನು ಬೆಳೆಸಲಾಗಿದೆ’ ಎಂದು ಬಿ. ಆನಂದ ತಿಳಿಸಿದರು.

ಸಹಾಯಕ ಯೋಜನಾಧಿಕಾರಿ ಆನಂದ್‌ ಬಿ.ಜೆ, ನರೇಗಾ ವಿಷಯ ನಿರ್ವಾಹಕ ನಾಗೇಶ್‌ ಎಲ್‌., ಸಾಮಾಜಿಕ ಪರಿಶೋಧನೆ ಸಂಯೋಜಕ ಜಯಪ್ರಕಾಶ್‌, ನರೇಗಾ ವಿಭಾಗದ ಎಡಿಪಿಸಿ ಸಿದ್ಧರಾಮಸ್ವಾಮಿ, ಐಇಸಿ ಸಂಯೋಜಕ ಚಂದನ್‌ ಉಪಸ್ಥಿತರಿದ್ದರು.

ಶಾಲೆಗಳಲ್ಲಿ ಕೈತೋಟ ನಿರ್ಮಾಣ

ಜಿಲ್ಲೆಯ 196 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾದಡಿ ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಒಂದಾದರೂ ಕೈತೋಟ ನಿರ್ಮಿಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.

ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಅನುಕೂಲವಾಗುವ ಸೊಪ್ಪು, ತರಕಾರಿ, ನುಗ್ಗೆ ಸೊಪ್ಪು, ಕರಿಬೇವುಗಳನ್ನು ಶಾಲೆಯ ಆವರಣದಲ್ಲಿ ಬೆಳೆಸಲಾಗುವುದು. ಶಾಲೆಯ ಆವರಣ ಗೋಡೆ ಸರಿಯಾಗಿರುವ 96 ಶಾಲೆಗಳನ್ನು ಕೈತೋಟ ನಿರ್ಮಿಸಲು ಈಗಾಗಲೇ ಗುರುತಿಸಲಾಗಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗುವುದು ಎಂದು ಸಿಇಒ ತಿಳಿಸಿದರು.

‘ಕಾಯಕ ಮಿತ್ರ’ ಆ್ಯಪ್‌ನಲ್ಲೂ ಕೆಲಸಕ್ಕೆ ಬೇಡಿಕೆ

ಜಾಬ್‌ಕಾರ್ಡ್‌ ಹೊಂದಿರುವವರು ನರೇಗಾದಡಿ ಕೆಲಸವನ್ನು ನೀಡುವಂತೆ ಸಂಬಂಧಪಟ್ಟ ಪಂಚಾಯಿತಿಗೆ ಹೋಗಿ ಬೇಡಿಕೆ ಸಲ್ಲಿಸಬಹುದು. ಇಲ್ಲವೇ ಇಲಾಖೆಯ ‘ಕಾಯಕ ಮಿತ್ರ’ ಆ್ಯಪ್‌ನ ಮೂಲಕವೂ ಕೂಲಿಕಾರ್ಮಿಕರು ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಇದರಲ್ಲಿ ಅರ್ಜಿ ಸಲ್ಲಿಸಿರುವುದು ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೂ ಬರುತ್ತದೆ. ವಿಳಂಬ ಮಾಡಿದರೆ ಕೆಲಸ ನೀಡುವಂತೆ ಸಂಬಂಧಪಟ್ಟ ಪಿಡಿಒಗೆ ನಿರ್ದೇಶನವನ್ನೂ ನೀಡುತ್ತಾರೆ. ಹೀಗಾಗಿ ಕಾಯಕ ಮಿತ್ರ ಆ್ಯಪ್‌ ಬಳಸಿಕೊಳ್ಳಬೇಕು ಎಂದು ಸಿಇಒ ಮನವಿ ಮಾಡಿದರು.

ನರೇಗಾ ಕುರಿತ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಮಟ್ಟದ ಉಚಿತ ಸಹಾಯವಾಣಿ 18004258666 ಹಾಗೂ ಜಿಲ್ಲಾ ಮಟ್ಟದ ಉಚಿತ ಸಹಾಯವಾಣಿ 18004252203ಗೆ ಕರೆ ಮಾಡಬಹುದು. ಕೂಲಿಕಾರ್ಮಿಕರು ಕೆಲಸಕ್ಕೆ ಸಹಾಯವಾಣಿಗೆ ಕರೆ ಮಾಡಿಯೂ ಬೇಡಿಕೆ ಇಡಬಹುದು ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿದ 15 ದಿನದೊಳಗೆ ಜಾಬ್‌ ಕಾರ್ಡ್‌

ಉದ್ಯೋಗ ಚೀಟಿ (ಜಾಬ್‌ ಕಾರ್ಡ್‌) ಪಡೆಯಲು ಗ್ರಾಮ ಪಂಚಾಯಿತಿಯಲ್ಲಿ ನೋಂದಾಯಿಸಿಕೊಳ್ಳಬೇಕು. 15 ದಿನದೊಳಗೆ ಜಾಬ್‌ಕಾರ್ಡ್ ತಲುಪುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಹಾಗೂ ಉಪ ಕಾರ್ಯದರ್ಶಿ (ಡಿಎಸ್‌) ಬಿ. ಆನಂದ್ ತಿಳಿಸಿದರು.

‘ಪ್ರಜಾವಾಣಿ ಫೋನ್‌ ಇನ್’ ಕಾರ್ಯಕ್ರಮದಲ್ಲಿ ನಾಗರಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

* ನರೇಗಾದಡಿ ಜಾಬ್‌ ಕಾರ್ಡ್‌ ಇಲ್ಲದಿದ್ದರೂ ಕೆಲಸ ಮಾಡಿಸಿ, ಹಣ ಪಡೆಯುತ್ತಿದ್ದಾರಲ್ಲ...

–ನಾಗರಾಜ, ಕ್ಯಾಸನಹಳ್ಳಿ, ಜಗಳೂರು ತಾಲ್ಲೂಕು

ಸಿಇಒ: ಹಾಗೆ ಕೆಲಸ ಮಾಡಿಸಿದ ಪಿಡಿಒಗಳನ್ನು ಅಮಾನತು ಮಾಡಲಾಗಿದೆ. ಕ್ಯಾಸನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.

* ಕಂಪ್ಯೂಟರ್ ಆಪರೇಟರ್ ಇಲ್ಲದಿರುವುದರಿಂದ ಜಾಬ್‌ ಕಾರ್ಡ್‌ ತಿದ್ದುಪಡಿಯಾಗುತ್ತಿಲ್ಲ.

–ರೇಣುಕೇಶ್, ಅಣಬೂರು

ಸಿಇಒ: ಕಂಪ್ಯೂಟರ್ ಆಪರೇಟರ್‌ ನಾಳೆ ಬರುತ್ತಾರೆ.

* ಹಲವು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆ ನಡೆಯುತ್ತಿಲ್ಲ. ಈ ಬಗ್ಗೆ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದೆ. ಕೋರ್ಟ್‌ ನಿರ್ದೇಶನ ಏಕೆ ಪಾಲಿಸಿಲ್ಲ?

–ಚಂದ್ರಕಾಂತ್, ವಕೀಲ, ಜಗಳೂರು

ಸಿಇಒ: ಗ್ರಾಮ ಸಭೆಗಳನ್ನು ಕರೆಯುತ್ತೇವೆ. ಆದರೆ, ಗ್ರಾಮಸ್ಥರೇ ಬರುವುದಿಲ್ಲ. ಸ್ವಸಹಾಯ ಸಂಘಗಳ ಗುಂಪಿನ ಸದಸ್ಯರು ಅಲ್ಲಿ ಇರುತ್ತಾರೆ. ಜನರಿಗೆ ಆಸಕ್ತಿ ಇಲ್ಲ. ಇಲ್ಲಿಯವರೆಗೆ ಆಗಿರುವ ದುರುಪಯೋಗ ಕುರಿತು ಕ್ರಮ ಕೈಗೊಳ್ಳುತ್ತೇನೆ.

* ಆರ್‌ಒ ಘಟಕಕ್ಕೆ ಪ್ರಿಪೇಯ್ಡ್‌ ಕಾರ್ಡ್‌ ವ್ಯವಸ್ಥೆ ಮಾಡಿ.

–ರಾಜು, ಗೌರಿಪುರ

ಡಿಎಸ್‌: ಆರ್‌ಒ ಘಟಕ ನಿರ್ವಹಣೆ ಸರಿಯಾಗಿ ನಡೆಯದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಬೇರೆ ಏಜೆನ್ಸಿಗೆ ಕೊಟ್ಟಿದ್ದೇವೆ. ಕಾರ್ಡ್ ವ್ಯವಸ್ಥೆ ಮಾಡಿಸುತ್ತೇವೆ.

* ಸರ್ಕಾರಿ ಶಾಲೆಯ ಕಾಂಪೌಂಡ್ ಬಿದ್ದುಹೋಗಿದೆ. ಕಿಡಿಗೇಡಿಗಳು ರಾತ್ರಿ ವೇಳೆ ಬಂದು ಮದ್ಯ ಸೇವಿಸುತ್ತಿದ್ದಾರೆ.

–ಎಂ.ಕರಿಯಪ್ಪ, ಹದಡಿ

ಸಿಇಒ: ನರೇಗಾದಡಿ ಶಾಲೆಗೆ ಕಾಂಪೌಂಡ್‌ ನಿರ್ಮಿಸಲು ಅವಕಾಶವಿದೆ. ಶಾಲೆಯೊಳಗೆ ನುಗ್ಗಲು ಒಳದಾರಿ ಇದ್ದರೆ ಅಲ್ಲಿ ಕಾಂಪೌಂಡ್ ನಿರ್ಮಿಸೋಣ.

* ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್‌ ಕಾರ್ಡ್‌ ಪಡೆಯಲು ಅರ್ಹತೆ ಏನು?

– ರೇವಣಸಿದ್ದಪ್ಪ, ಮಲ್ಲನಾಯಕನಹಳ್ಳಿ

ಡಿಎಸ್‌: ಸರ್ಕಾರಿ ನೌಕರರಿಗೆ ಜಾಬ್ ಕಾರ್ಡ್ ಸಿಗುವುದಿಲ್ಲ. ಗ್ರಾಮದ ನಿವಾಸಿ ಎನ್ನುವುದಕ್ಕೆ ಆಧಾರ್ ಕಾರ್ಡ್‌, ವೋಟರ್ ಐಡಿ ದಾಖಲೆಯೊಂದಿಗೆ ನೀವು ಇರುವ ಗ್ರಾಮ ಪಂಚಾಯಿತಿಯಲ್ಲೇ ಅರ್ಜಿ ಕೊಟ್ಟರೆ ಜಾಬ್ ಕಾರ್ಡ್ ಸಿಗುತ್ತದೆ. ಕುಟುಂಬದಲ್ಲಿ ನಾಲ್ಕು ಜನ ಇದ್ದರೆ ಒಂದೇ ಕಾರ್ಡ್ ಮಾಡಿಕೊಡುತ್ತೇವೆ. ಪ್ರತ್ಯೇಕವಾಗಿ ಬ್ಯಾಂಕ್ ಖಾತೆ ಮಾಡಿಸಬೇಕು. ನೀರಾವರಿ ಜಮೀನು ಇದ್ದರೆ ಬರುವುದಿಲ್ಲ.

* ಉದ್ಯೋಗ ಖಾತ್ರಿಯಡಿ ಅಡಿಕೆ ಬೆಳೆಯಬಹುದೇ?

–ರಾಜು, ಕಾರಿಗನೂರು

ಸಿಇಒ: ಅರೆ ಮಲೆನಾಡು ಪ್ರದೇಶಗಳಾದ ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕುಗಳಲ್ಲಿ ಮಾತ್ರ ಅವಕಾಶವಿದೆ. ಗ್ರಾಮ ಪಂಚಾಯಿತಿಯಲ್ಲಿ ತೋಟಗಾರಿಕೆ ಬೆಳೆಗೆ ನಿಮ್ಮ ಹೆಸರು ಸೇರಿಸಿದ್ದೀರೋ ಇಲ್ಲವೋ ಖಚಿತಪಡಿಸಿಕೊಳ್ಳಿ.

* ನನ್ನ ಬಳಿ ಇರುವ ಜಾಬ್‌ ಕಾರ್ಡ್‌ನಲ್ಲಿ 100 ದಿನಗಳ ಕೆಲಸ ಮುಗಿದಿದೆ. ಇನ್ನೂ 50 ದಿನಗಳು ಕೆಲಸ ಮಾಡಲು ಅವಕಾಶವಿಲ್ಲವೇ?

–ವೀರಮ್ಮ, ದಾಗಿನಕಟ್ಟೆ; ಶಿವರಾಜ್, ಕ್ಯಾಸನಹಳ್ಳಿ

ಸಿಇಒ: ಜಗಳೂರು ತಾಲ್ಲೂಕಿನಲ್ಲಿ ಮಾತ್ರ ಹೆಚ್ಚುವರಿಯಾಗಿ 50 ಮಾನವ ದಿನಗಳಿಗೆ ಅವಕಾಶವಿದೆ. ಮನವಿ ಕೊಡಿ. ನಾನು ಪಿಡಿಒಗೆ ಸೂಚಿಸುತ್ತೇನೆ.

* ನಕಲಿ ಜಾಬ್‌ ಕಾರ್ಡ್ ಹೊಂದಿರುವವರಿಗೆ ₹2.71 ಲಕ್ಷ ಹಣ ಬಿಡುಗಡೆಯಾಗಿದೆ.

–ಮಧುಕುಮಾರ್, ಬಿಳಿಚೋಡು

ಸಿಇಒ: ನಕಲಿ ಜಾಬ್ ಕಾರ್ಡ್‌ ಸೃಷ್ಟಿ ಮಾಡಿ ಹಣ ತೆಗೆದುಕೊಂಡವರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ದಾಖಲೆ ಇದ್ದರೆ ಕೊಡಿ ನಾನೇ ಖುದ್ದಾಗಿ ತನಿಖೆ ಮಾಡುತ್ತೇನೆ.

* ಉದ್ಯೋಗ ಖಾತ್ರಿಯಡಿ ಮೊದಲನೇ ಅವಧಿಗೆ ಕೆಲಸ ಮಾಡಿರುವುದಕ್ಕೆ ಹಣ ಬಂದಿದೆ. ಎರಡನೇ ಅವಧಿಯ ಹಣ ಇನ್ನೂ ಬಂದಿಲ್ಲ.

–ಮಂಜುನಾಥ್, ಬಿಳಿಚೋಡು

ಸಿಇಒ: ಕ್ರಮ ವಹಿಸುತ್ತೇನೆ.

* ತ್ಯಾಜ್ಯದ ನೀರು ನಮ್ಮ ಜಮೀನಿಗೆ ಹರಿದು ಬರುತ್ತಿದೆ. ಹೂಳು ತೆಗೆಯಲು ಅವಕಾಶವಿದೆಯಾ?

ಮಹಾಲಿಂಗಪ್ಪ, ದೇವನಾಯಕನಹಳ್ಳಿ, ಹೊನ್ನಾಳಿ ತಾಲ್ಲೂಕು

ಸಿಇಒ: ನರೇಗಾದಡಿ ನಿಮ್ಮ ಜಮೀನಿನಲ್ಲಿ ಹೂಳು ತೆಗೆಯಲು ಅವಕಾಶವಿಲ್ಲ. ಹೊನ್ನಾಳಿ ಪಟ್ಟಣ ಪಂಚಾಯಿತಿ ಶುಚಿಗೊಳಿಸಬೇಕಾಗುತ್ತದೆ.

* ಅಡಿಕೆ ಕಾಮಗಾರಿಗೆ ತೋಟಗಾರಿಕೆ ಇಲಾಖೆಗೆ ಅರ್ಜಿ ಕೊಟ್ಟಿದ್ದೇವೆ. ಅವರು ಸ್ಪಂದಿಸುತ್ತಿಲ್ಲ.

ಅಣ್ಣಪ್ಪ, ದಾಗಿನಕಟ್ಟೆ

ಡಿಎಸ್‌: ಚನ್ನಗಿರಿ ಹಾಗೂ ಹೊನ್ನಾಳಿ ತಾಲ್ಲೂಕುಗಳಲ್ಲಿ ಅಡಿಕೆ ಕಾಮಗಾರಿಗೆ ಅವಕಾಶವಿದೆ. ತೋಟಗಾರಿಕೆ ಇಲಾಖೆಗೆ ಅರ್ಜಿ ಕೊಡಿ, ಅಲ್ಲಿನ ಸಹಾಯಕ ನಿರ್ದೇಶಕರಿಗೆ ಹೇಳುತ್ತೇವೆ.

* ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಮೂರು ವರ್ಷಗಳಿಂದಲೂ ಅರ್ಜಿ ಹಾಕುತ್ತಿದ್ದೇನೆ. ಆದರೆ ಕೆಲಸ ಸಿಗುತ್ತಿಲ್ಲ. ಏನು ಮಾಡುವುದು?

–ಜೆ.ಬಿ. ಕರಿಬಸವನಗೌಡ, ಉದ್ದಘಟ್ಟ, ಹನುಮಂತಾಪುರ

ಸಿಇಒ: ನಾಳೆಯೇ ಪಂಚಾಯಿತಿಗೆ ಹೋಗಿ. ಕೆಲಸ ಕೊಡಲು ಹೇಳುತ್ತೇನೆ.

* ಊರಿನಲ್ಲಿ ಹಲವರಿಗೆ ಕೆಲಸ ಕೊಡುತ್ತಿಲ್ಲ. ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಬರುತ್ತಿಲ್ಲ. ಪಿಂಚಣಿ ಹಣ ತೆಗೆದುಕೊಳ್ಳಲು ಸಮಸ್ಯೆಯಾಗಿದೆ.

–ಅರುಣ, ಗೌರಿಪುರ, ಜಗಳೂರು

ಸಿಇಒ: ಕಾಯಕಮಿತ್ರ ಆ್ಯಪ್‌ನಲ್ಲಿ ಎಷ್ಟು ಜನರಿಗೆ ಕೆಲಸ ಬೇಕೋ ಅವರಿಂದ ಅರ್ಜಿ ಹಾಕಿಸಿ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರು ಹಾಗೂ ನರ್ಸ್‌ ಬರುವಂತೆ ಕ್ರಮ ಕೈಗೊಳ್ಳಲಾಗುವುದು.

ಮನಿ ಆರ್ಡರ್‌ಗಿಂತ ಬ್ಯಾಂಕ್‌ನಲ್ಲಿ ಖಾತೆ ತೆರೆದರೆ ಅನುಕೂಲ. ಪೋಸ್ಟ್‌ಮನ್‌ಗೆ ಹಣ ಕೊಡುವುದು ತಪ್ಪುತ್ತದೆ. ಅಂಚೆ ಕಚೇರಿಯಲ್ಲೇ ಖಾತೆ ತೆರೆಯಬಹುದು. ಬ್ಯಾಂಕ್‌ ಖಾತೆ ತೆರೆದರೆ ಬ್ಯಾಂಕ್‌ ಮಿತ್ರರು ಮನೆಗೆ ಬಂದು ಹಣ ಕೊಡುತ್ತಾರೆ.

* ರೈತರು ಯಾವ ಕೆಲಸ ಮಾಡಿಸಿಕೊಳ್ಳಬಹುದು?

ಕೆಂಚಪ್ಪ, ಹಿರೇಆಲಿವಾಣ; ಸಿದ್ದೇಶ್‌, ಬನ್ನಿಕೋಡು

ಡಿಎಸ್‌: ಬದು ನಿರ್ಮಿಸಿಕೊಳ್ಳಬಹುದು. ಜಾಸ್ತಿ ಜಾಗ ಇದ್ದರೆ ಕೃಷಿ ಹೊಂಡ ಮಾಡಿಸಿಕೊಳ್ಳಬಹುದು. ಎರೆಹುಳು ತೊಟ್ಟಿ ಮಾಡಬಹುದು. ದನದ ಕೊಟ್ಟಿಗೆಯನ್ನೂ ನಿರ್ಮಿಸಿಕೊಳ್ಳಬಹುದು.

ತೋಟಗಾರಿಕೆ ಇಲಾಖೆಯಿಂದ ದಾಳಿಂಬೆ, ಮಾವು, ಗುಲಾಬಿ, ಮಲ್ಲಿಗೆ, ಎಲೆಬಳ್ಳಿ, ಕರಿಬೇವು, ಪೇರಲ ಬೆಳೆದುಕೊಳ್ಳಬಹುದು. ಅಲ್ಲದೇ ಈರುಳ್ಳಿ ಗೋದಾಮು ನಿರ್ಮಾಣ ಮಾಡಲು ಅವಕಾಶವಿದೆ. ಆದರೆ, ಭತ್ತ ಬೆಳೆಗೆ ಅವಕಾಶವಿಲ್ಲ. ಕೂಲಿ ಕೆಲಸ ನಾವು ಮಾಡಿಸಿಕೊಡುತ್ತೇವೆ. ಉಳಿದ ಖರ್ಚನ್ನು ನೀವು ಹಾಕಿಕೊಳ್ಳಬೇಕು.

* ನರೇಗಾದಡಿ 2013–14ರಲ್ಲಿ ಮಾಡಿದ ಕೆಲಸದ ಕೂಲಿ ಇನ್ನೂ ಬಂದಿಲ್ಲ.

–ವೀರೇಶ್‌ ಅರಳೀಕಟ್ಟೆ, ನ್ಯಾಮತಿ

ಡಿಎಸ್‌: ಇದು ಲೋಕಾಯುಕ್ತಕ್ಕೆ ದೂರು ನೀಡಿರುವ ಪ್ರಕರಣ. ವಿಚಾರಣೆಯಲ್ಲಿ ಇರುವಾಗ ಹಣ ಪಾವತಿ ಮಾಡಲು ಬರುವುದಿಲ್ಲ. ಈಗ ಪ್ರಕರಣ ಇತ್ಯರ್ಥವಾಗಿದೆ. ಮುಂದೆ ಬರುವ ಅನುದಾನದಲ್ಲಿ ವೇತನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.

* ಕೆಲಸ ಮಾಡಿಲ್ಲ. ಹೀಗಿದ್ದರೂ ಕೆಲಸ ಮಾಡಲಾಗಿದೆ ಎಂದು ಕೂಲಿ ತಗೆದುಕೊಂಡಿದ್ದಾರೆ. ಸಾಮಾಜಿಕ ಲೆಕ್ಕಪರಿಶೋಧನೆಯೂ ನಕಲಿಯಾಗಿದೆ.

– ಪ್ರದೀಪ್, ಗೌರಗೊಂಡನಹಳ್ಳಿ, ಜಗಳೂರು

ಸಿಇಒ: ಈ ಬಗ್ಗೆ ವಿಚಾರಣೆಗಳು ನಡೆದಿವೆ. ತಪ್ಪಿತಸ್ಥರನ್ನು ಅಮಾನತು ಮಾಡಲಾಗಿದೆ. ನೀವು ಜಾಗೃತರಾಗಿದ್ದರೆ, ನಮಗೆ ಸಹಕಾರ ನೀಡಿದರೆ ಅವ್ಯವಹಾರವನ್ನು ನಿಯಂತ್ರಿಸಬಹುದು. ಗ್ರಾಮ ಸಭೆಗಳಲ್ಲಿ ಕೂಡ ಈ ಬಗ್ಗೆ ಪ್ರಶ್ನಿಸಬೇಕು.

* ಹೊಸದಾಗಿ ಜಾಬ್‌ಕಾರ್ಡ್‌ ಪಡೆದಿದ್ದೇನೆ. 15 ದಿನ ಕೆಲಸ ಮಾಡಿದ್ದೇನೆ. ಇನ್ನೂ ಕೂಲಿ ಹಣ ಪಾವತಿಯಾಗಿಲ್ಲ. ಆದರೆ, ಕೆಲಸ ಮಾಡದ ಅಜ್ಜಿಗೆ ಹಣ ಪಾವತಿಯಾಗಿದೆ.

– ಶಿವಕುಮಾರ್‌, ಬಿಳಿಚೋಡು, ಜಗಳೂರು

ಸಿಇಒ: ಒಬ್ಬರು ಕೆಲಸ ಮಾಡಿ ಇನ್ನೊಬ್ಬರ ಖಾತೆಗೆ ಹಣ ಪಾವತಿಯಾಗಿರುವ ಬಗ್ಗೆ ಪರಿಶೀಲಿಸಿ ಸರಿಪಡಿಸುತ್ತೇವೆ.

* ಗಡಿಮಾಕುಂಟೆ ಗ್ರಾಮದಲ್ಲಿ ಕೆರೆಯ ಹೂಳೆತ್ತಿಲ್ಲ. ಕೆಲವು ರೈತರು ತಮ್ಮ ಹೊಲಗಳಿಗೆ ಮಣ್ಣು ತೆಗೆದುಕೊಂಡು ಹೋಗಿದ್ದಾರೆ. ಈಗ ನರೇಗಾದಡಿ ಕೆಲಸ ಮಾಡಲಾಗಿದೆ ಎಂದು ತೋರಿಸಿದ್ದಾರೆ.

– ಸುಧೀರ್‌, ಗಡಿಮಾಕುಂಟೆ, ಜಗಳೂರು

ಸಿಇಒ: ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಈ ಬಗ್ಗೆ ಫೋಟೊ, ಇನ್ನಿತರ ದಾಖಲೆಗಳು ನಿಮ್ಮಲ್ಲಿದ್ದರೆ ನೀಡಿ.

* ಬಿಪಿಎಲ್‌ ಕಾರ್ಡ್‌ ಇರುವವರಿಗೆ ನರೇಗಾದಲ್ಲಿ ಅಡಿಕೆ ಸಸಿ ಬೆಳೆಸಲು ಅವಕಾಶ ಇದೆ. ಸಣ್ಣ ಹಿಡುವಳಿದಾರ ಪ್ರಮಾಣ ಪತ್ರವನ್ನೂ ನೀಡುವಂತೆ ಅಧಿಕಾರಿಗಳು ಕೇಳುತ್ತಿದ್ದಾರೆ.

– ವೀರೇಂದ್ರ ಹೊನ್ನಾಳಿ

ಡಿಎಸ್‌: ಕೆಲವು ಬಾರಿ ಜಮೀನು ಹೆಚ್ಚಿದ್ದರೂ ಬಿಪಿಎಲ್‌ ಕಾರ್ಡ್‌ ಮಾಡಿಸಿಕೊಂಡಿರುತ್ತಾರೆ. ಅವರು ಈ ಸೌಲಭ್ಯ ಬಳಸಿಕೊಳ್ಳುವ ಸಾಧ್ಯತೆ ಇದೆ. ಅದಕ್ಕಾಗಿ 5 ಎಕರೆಗಿಂತ ಕಡಿಮೆ ಜಮೀನು ಹೊಂದಿದ ಬಿಪಿಎಲ್‌ ಕಾರ್ಡ್‌ ಹೊಂದಿದವರಿಗಷ್ಟೇ ಈ ಸೌಲಭ್ಯ ದೊರಕಲಿ ಎಂದು ಸಣ್ಣ ಹಿಡುವಳಿದಾರ ಎಂಬ ಪ್ರಮಾಣ ಪತ್ರ ಕೇಳುತ್ತಾರೆ.

* ನರೇಗಾದಡಿ 25 ಎರೆಹುಳು ತೊಟ್ಟಿ ಮಾಡಿದ್ದೆವು. ಅದರ ಮೆಟಿರಿಯಲ್‌ ಹಣ ಪಾವತಿಯಾಗಿಲ್ಲ.

– ತಿಪ್ಪೇಸ್ವಾಮಿ, ಕಾರಿಗನೂರು, ಚನ್ನಗಿರಿ

ಸಿಇಒ: 2018–19ರ ಸಾಲಿನ ಮಟಿರಿಯಲ್‌ ಪೂರೈಕೆ ಬಿಲ್‌ ಬಂದಿಲ್ಲ. ಮಾನವ ಶ್ರಮ ಮತ್ತು ಮೆಟೀರಿಯಲ್ ಬಳಕೆ 60:40 ಪ್ರಮಾಣದಲ್ಲಿರಬೇಕು. ಮೆಟೀರಿಯಲ್‌ ಪ್ರಮಾಣ ಹೆಚ್ಚಾಗಿದೆ ಎಂದು ಬಿಲ್‌ ಪಾವತಿಯಾಗಿಲ್ಲ. ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರ ಸಂವಹನ ಮಾಡುತ್ತಿದೆ. ಈ ಬಾರಿ ಮಾನವ ಶ್ರಮ ಹೆಚ್ಚು ಮಾಡಿ ಅದನ್ನು ಸರಿದೂಗಿಸಿ ಹಣ ಪಾವತಿ ಮಾಡಿಸಲು ಪ್ರಯತ್ನ ಪಡುತ್ತಿದ್ದೇನೆ.

* ಇ–ಸೊತ್ತು ಮಾಡಲು ಅರ್ಜಿ ಸಲ್ಲಿಸಿದರೂ ಪಿಡಿಒ ಖಾತೆ ಬದಲಾವಣೆ ಮಾಡಿಕೊಟ್ಟಿಲ್ಲ.

– ದೊಡ್ಡ ಹನುಮಂತಪ್ಪ, ಚಿಕ್ಕಗಂಗೂರು, ಚನ್ನಗಿರಿ

ಸಿಇಒ: ಪಿಡಿಒ ಜತೆ ಮಾತನಾಡುತ್ತೇನೆ. ನೀವು ಪಂಚಾಯಿತಿಗೆ ನಾಳೆಯೇ ಹೋಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT