ಗುರುವಾರ , ಡಿಸೆಂಬರ್ 8, 2022
18 °C
ದುಷ್ಕರ್ಮಿಗಳನ್ನು ಬಂಧಿಸಲು, ಸಮಾಧಿ ಪುನರ್‌ ನಿರ್ಮಿಸಲು ಆಗ್ರಹ

ದಾವಣಗೆರೆ: ತಿಪ್ಪೇಸ್ವಾಮಿ ಸಮಾಧಿ ಧ್ವಂಸ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಡಾ.ಬಿ.ಎಂ. ತಿಪ್ಪೇಸ್ವಾಮಿ ಮತ್ತು ಅವರ ಕುಟುಂಬದ ಮೂವರು ಸದಸ್ಯರ ಸಮಾಧಿಗಳನ್ನು ನೆಲಸಮ ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಶಿವಕುಮಾರಸ್ವಾಮಿ ಬಡಾವಣೆ ಬಳಿಯ ವಿದ್ಯುತ್‌ನಗರದಿಂದ ಪ್ರತಿಭಟನಾ ಪಾದಯಾತ್ರೆಯನ್ನು ಆರಂಭಿಸಿ ಅಂಬೇಡ್ಕರ್‌ ಸರ್ಕಲ್‌ಗೆ ಬರಲಾಯಿತು. ಅಲ್ಲಿ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮೆರವಣಿಗೆ ಮುಂದೆ ಸಾಗಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.

‘ಭೂಗಳ್ಳರು ಅತಿಕ್ರಮ ಮಾಡಿ ಸಮಾಧಿ ಒಡೆದಿದ್ದಾರೆ. ಇದು ದೇವಸ್ಥಾನವನ್ನು ಒಡೆದಷ್ಟೇ ಅಪಾಯಕಾರಿ ಕೃತ್ಯ. ಡಾ. ತಿಪ್ಪೇಸ್ವಾಮಿ ಅವರು ದಾವಣಗೆರೆಗೆ, ಅವರ ಕುಟುಂಬಕ್ಕೆ ಸೇರಿದವರಲ್ಲ. ಈ ನಾಡಿನ ಸಾಕ್ಷಿ ಪ್ರಜ್ಞೆ. ಕಣ್ಣಿನ ತಜ್ಞನಾಗಿ, ಶಾಸಕನಾಗಿ, ಕೆಪಿಎಸ್‌ಸಿಯಾಗಿ ಕೆಲಸ ಮಾಡಿದ್ದರು. ಅಂಥವರ ಸಮಾಧಿಯನ್ನು ಒಡೆದು ಹಾಕಿದ್ದಾರೆ. ಸರ್ಕಾರದ ಭಯ ಇಲ್ಲದೇ ಇರುವುದೇ ಇದಕ್ಕೆ ಕಾರಣ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌. ದ್ವಾರಕನಾಥ್‌ ಆರೋಪಿಸಿದರು.

ದುಷ್ಕರ್ಮಿಗಳನ್ನು ಬಂಧಿಸಬೇಕು. ಸಮಾಧಿಗಳನ್ನು ಮರು ನಿರ್ಮಾಣ ಮಾಡಬೇಕು. ಅವರು ನಾಡಿನ ಕ್ಷಮೆ ಕೇಳಬೇಕು. ಸಮಸ್ಯೆ ಪರಿಹಾರವಾಗದೇ ಇದ್ದರೆ ಈ ಹೋರಾಟ ಬೇರೆಯೇ ತಿರುವು ಪಡೆಯಲಿದೆ ಎಂದು ಎಚ್ಚರಿಸಿದರು.

‘ತಂದೆ ತಿಪ್ಪೇಸ್ವಾಮಿ, ತಾಯಿ ಯಲ್ಲಮ್ಮ, ಸಹೋದರರಾದ ಬಿ.ಟಿ. ಮೋಹನ್‌, ಬಿ.ಟಿ. ಮಲ್ಲಿಕಾರ್ಜುನ ಅವರ ಸಮಾಧಿ ಇಲ್ಲಿದ್ದು, ಅದನ್ನು ಒಡೆಯುತ್ತಿದ್ದಾರೆ ಎಂಬ ಮಾಹಿತಿ ಬಂದಾಗ ನಾನು ಮತ್ತು ಮಗ ಬಂದೆವು. ಇಲ್ಲಿದ್ದ ಗಣೇಶ್‌ ಹುಲ್ಮನಿ ಮತ್ತು ಇತರರು ನಮ್ಮ ಮೇಲೆ ಹಲ್ಲೆಗೆ ಮುಂದಾದರು. 1955ರಿಂದ ಭೂಮಿ ಅವರಲ್ಲಿದೆ ಎಂದು ಹೇಳಿದರು. ಮತ್ಯಾಕೆ 1990ರಿಂದ ಇಲ್ಲಿವರೆಗೆ ನಾಲ್ಕು ಸಮಾಧಿ ಮಾಡಲು ಯಾಕೆ ಬಿಟ್ಟರು. ನಮ್ಮ ಭೂಮಿ ಇದು. 2013ರಲ್ಲಿ ರವಿ ಮತ್ತು ರವಿಕುಮಾರ್‌ ಎಂಬಿಬ್ಬರಿಗೆ ಸೇರಿದ ಜಮೀನು ಎಂದು ನಕಲಿ ದಾಖಲೆ ಸೃಷ್ಟಿಸಿದ್ದರು. ಅದು ನ್ಯಾಯಾಲಯದಲ್ಲಿ ಇರುವಾಗಲೇ ಇಲ್ಲಿ ಈಗ ಬೇರೆ ಯಾರೋ ನಮ್ಮ ಭೂಮಿ ಎಂದು ಬಂದಿದ್ದಾರೆ’ ಎಂದು ಬಿ.ಟಿ. ಜಾಹ್ನವಿ ದೂರಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹನುಮಂತಪ್ಪ ಅಣಜಿ, ಲಿಂಗರಾಜು ಎಂ., ಪ್ರದೀಪ್‌, ಮಹಾಂತೇಶ್‌ ಹಾಲುವರ್ತಿ, ಬನ್ನಿಹಟ್ಟಿ ನಿಂಗಪ್ಪ, ಖಾಲಿದ್‌ ಅಲಿ, ಮಹಾಂತೇಶ್‌ ಬೇತೂರು, ಅನಿಸ್‌ ಪಾಷ, ಜಬೀನಾಖಾನಂ, ಶಿರಿನ್‌ಬಾನು, ಹಾಲೇಶ್‌, ಎ.ಬಿ. ರಾಮಚಂದ್ರಪ್ಪ, ಡಿ. ಹನುಮಂತಪ್ಪ, ಸಿ. ಬಸವರಾಜ್‌, ಎಚ್‌. ಮಲ್ಲೇಶ್‌ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು