ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡಲು ಕೂಲಿಕಾರರ ಆಗ್ರಹ
Last Updated 10 ಸೆಪ್ಟೆಂಬರ್ 2021, 4:24 IST
ಅಕ್ಷರ ಗಾತ್ರ

ಜಗಳೂರು: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನೀಡುವಂತೆ ಒತ್ತಾಯಿಸಿ ತಾಲ್ಲೂಕಿನ ಹುಚ್ಚಂಗಿಪುರ ಗ್ರಾಮಸ್ಥರು ಗುರುವಾರ ತಾಲ್ಲೂಕಿನ ದಿದ್ದಿಗೆ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಹುಚ್ಚಂಗಿಪುರ ಗ್ರಾಮದಲ್ಲಿ ಅತಿಹೆಚ್ಚು ಕೂಲಿಕಾರ್ಮಿಕರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯಿತ್ರಿ ಅವರು ಕೆಲಸ ಕೊಡದೆ ಸತಾಯಿಸುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹಿಂದೆ ಉದ್ಯೋಗ ಖಾತ್ರಿ ಕಾಮಗಾರಿಯಲ್ಲಿ ಕೆಲಸ ಮಾಡಿರುವ ಕೂಲಿಕಾರ್ಮಿಕರಿಗೆ ಕಡಿಮೆ ಕೂಲಿ ಹಣ ನೀಡಿದ್ದಾರೆ. ಕೂಲಿ ಕೆಲಸ ಇಲ್ಲದೆ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

‘ಕೂಲಿಕಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕೆಲಸ ಕೇಳಿದರೆ ನಿಮಗೆ ಕೆಲಸ ಬೇಕಿದ್ದರೆ ನನ್ನ ತೋಟದಲ್ಲಿ ಬಂದು ಕೆಲಸ ಮಾಡಿ’ ಎಂದು ಪಿಡಿಒ ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಾಲರಾಜ್ ಮಾತನಾಡಿ, ‘ಗ್ರಾಮದಲ್ಲಿ ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೂರಾರು ಕಾರ್ಮಿಕರು ಕೆಲಸ ಕೊಡುವಂತೆ ಪ್ರತಿನಿತ್ಯ ಪಂಚಾಯಿತಿಗೆ ಅಲೆಯುತ್ತಿದ್ದಾರೆ. ಉದ್ಯೋಗ ಖಾತ್ರಿ ರಾಷ್ಟ್ರೀಯ ಯೋಜನೆಯಾಗಿದ್ದು, ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದೀರಿ. ಪಂಚಾಯಿತಿ ವ್ಯಾಪ್ತಿಯ 5 ಹಳ್ಳಿಗಳಲ್ಲಿ ಬೀದಿ ದೀಪಗಳಿಲ್ಲ. ಚರಂಡಿ ಸ್ವಚ್ಛತೆ ಕಾರ್ಯಕೈಗೊಂಡಿಲ್ಲ. ಕುಡಿಯುವ ನೀರಿನ ಪೈಪ್‌ಲೈನ್‌ ದುರಸ್ತಿಗೊಳಿಸದೆ ನಿರ್ಲಕ್ಷ್ಯವಹಿಸಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡರು.

ಕೂಲಿಕಾರ್ಮಿಕರ ಪ್ರತಿಭಟನೆ ಕಾರಣ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ ಸ್ಥಳಕ್ಕೆ ಭೇಟಿ ನೀಡಿದರು. ಕೂಲಿಕಾರ್ಮಿಕರಿಗೆ ತೊಂದರೆಯಾಗದಂತೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುವುದು. ಕೆಲಸ ಕೇಳುವುದು ಕೂಲಿಕಾರ್ಮಿಕರ ಹಕ್ಕಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಜಿಲ್ಲಾ ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಆನಂದ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ್ ಇದ್ದರು.

ಕೂಲಿಕಾರ್ಮಿಕರಾದ ಸಂಜಿವಮ್ಮ, ನಾಗರತ್ನ, ಚನ್ನಪ್ಪ, ಜಯ್ಯಪ್ಪ, ವೀರೇಶಿ, ನಾಗರತ್ನಮ್ಮ, ಗೌರಮ್ಮ ವಿಶಾಲಾಕ್ಷಿ, ಮಲ್ಲಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT