ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಪಿಎಸ್‌ ಯೋಜನೆ ರದ್ದುಪಡಿಸಲು ಒತ್ತಾಯಿಸಿ ಪ್ರತಿಭಟನೆ

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದಿಂದ ರಕ್ತದಾನ
Last Updated 8 ಡಿಸೆಂಬರ್ 2019, 2:29 IST
ಅಕ್ಷರ ಗಾತ್ರ

ದಾವಣಗೆರೆ: ಎನ್‌ಪಿಎಸ್‌ ಯೋಜನೆ ರದ್ದುಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದಿಂದ ಶನಿವಾರ ಪ್ರತಿಭಟನೆ ನಡೆಯಿತು.

‘ರಕ್ತ ಕೊಟ್ಟೇವು ಪಿಂಚಣಿ ಬಿಡೇವು’, ‘ಬೇಕೇ ಬೇಕು ನ್ಯಾಯ ಬೇಕು’ ಎಂದು ಘೋಷಣೆ ಕೂಗಿದರು.

ಹೈಸ್ಕೂಲ್ ಮೈದಾನದಿಂದ ಆರಂಭವಾದ ಈ ಪ್ರತಿಭಟನೆಗೆ ಚಾಲನೆ ನೀಡಿದ ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘2004ರಲ್ಲಿ ಕೇಂದ್ರ ಸರ್ಕಾರ ಎನ್‌ಪಿಎಸ್ ರದ್ದು ಮಾಡಿತು. ಅದೇ ರೀತಿ 2006ರಲ್ಲಿ ರಾಜ್ಯ ಸರ್ಕಾರವೂ ರದ್ದು ಮಾಡಿತು. ನಿವೃತ್ತರ ಈ ಹಣವನ್ನು ಷೇರು ಮಾರುಕಟ್ಟೆಗೆ ಕೊಡುವ ಕೆಲಸ ಮಾಡುತ್ತಿದೆ. ನಿವೃತ್ತ ವೇತನದ ನೀಡದೇ ಇರುವುದರಿಂದ ನೌಕರರು ಸಂಕಷ್ಟ ಅನುಭವಿಸಬೇಕಾಗುತ್ತದೆ’ ಎಂದು ಹೇಳಿದರು.

‘60 ವರ್ಷಗಳ ನಂತರ ವೃದ್ಧಾಪ್ಯ ಸಂಭವಿಸುತ್ತದೆ. ಆ ವೇಳೆ ಗಂಟು ಇದ್ದರೆ ಮಾತ್ರ ಮಕ್ಕಳು ತಂದೆ ತಾಯಿಗಳ ಹತ್ತಿರ ಬರುತ್ತಾರೆ. ಪೆನ್ಷನ್ ಹಣ ಇದೆಯೇ ಎಂದು ನೋಡುತ್ತಾರೆ. ನಿವೃತ್ತಿ ವೇತನ ನೀಡದೇ ಇದ್ದರೆ ಗೃಹಸ್ಥಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಎನ್‌ಪಿಎಸ್ ನಿವೃತ್ತರಾದ ಮೇಲೆ ಸುಖೀ ಜೀವನ ನಡೆಸಲು ಅಲ್ಲ. ಬದಲಾಗಿ ಅನ್ನಕೋಸ್ಕರ. ಬದುಕು ಕಟ್ಟಿಕೊಳ್ಳಲು ಎನ್‌ಪಿಎಸ್ ಬೇಕು. ಇದರಲ್ಲಿ ಕೋಟ್ಯಂತರ ಜನರ ಬದುಕು ಅಡಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇವರ ಬದುಕನ್ನು ಗಮನದಲ್ಲಿ ಇಟ್ಟುಕೊಂಡು ನಿವೃತ್ತಿ ವೇತನ ನೀಡಬೇಕು’ ಎಂದು ಆಗ್ರಹಿಸಿದರು.

‘ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಜಾಗೃತಿ ಮೂಡಿಸಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದಾರೆ. ಭವಿಷ್ಯತ್ತಿನ ಬದುಕನ್ನು ಆರೋಗ್ಯಪೂರ್ಣವಾಗಿ ನಿರ್ಮಿಸಬೇಕು ಎಂಬುದು ಎಲ್ಲರ ಬಯಕೆ. ಮಕ್ಕಳ ಆಶ್ರಯ ಬೇಡದೇ ನಿವೃತ್ತ ನೌಕರರ ಬದುಕನ್ನು ರೂಪಿಸಲು ನಿವೃತ್ತಿ ವೇತನ ಕಡ್ಡಾಯಗೊಳಿಸಿ ಅವರ ಮುಂದಿನ ಜೀವನಕ್ಕೆ ಆಶ್ರಯ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ಹೈಸ್ಕೂಲ್ ಮೈದಾನದಿಂದ ಹೊರಟ ಎನ್‌ಪಿಎಸ್ ನೌಕರರು ಅಂಬೇಡ್ಕರ್ ವೃತ್ತಕ್ಕೆ ಬಂದು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಹೊರಟು ಜಯದೇವ ವೃತ್ತಕ್ಕೆ ಬಂದು ಮಾನವ ಸರಪಳಿ ನಿರ್ಮಿಸಿದರು. ಆನಂತರ ಮಹಾನಗರ ಪಾಲಿಕೆ ಎದುರು ಇರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಪಿ.ಬಿ. ರಸ್ತೆಯ ಮೂಲಕ ಕಾಲು ನಡಿಗೆಯಲ್ಲಿ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ರಕ್ತದಾನ ಶಿಬಿರಕ್ಕೆ ಚಿಗಟೇರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ನಾಗರಾಜು ಚಾಲನೆ ನೀಡಿದರು. 92 ಯುನಿಟ್ ರಕ್ತ ಸಂಗ್ರಹವಾಯಿತು. ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ಸರ್ಕಾರಿ ನೌಕರರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಾಲಾಕ್ಷಿ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಮೋಹನ್ ಎಚ್.ಆರ್, ಗೌರವಾಧ್ಯಕ್ಷರಾದ ಸಿದ್ದಪ್ಪ ಸಂಗಣ್ಣನವರ, ತಿಪ್ಪೇಸ್ವಾಮಿ ಬಿ.ಆರ್, ರಾಜ್ಯ ಸಮಿತಿ ಸದಸ್ಯ ಮಂಜಪ್ಪ ಜಿ.ಎನ್, ಉಪಾಧ್ಯಕ್ಷ ಶಿವರಾಜ್ ಪಾಟೀಲ್, ಎಚ್, ಮಹಾನಗರಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು, ಶಿವಣ್ಣ, ಕಲ್ಲೇಶಪ್ಪ, ಮಾರುತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT