ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರ ಸ್ಮರಣಶಕ್ತಿ ದುರ್ಬಲ

ಡಾ.ಎಚ್‌. ಗಿರಿಜಮ್ಮ ವೃತ್ತಿ ಮತ್ತು ಬರಹ– ಸ್ಮರಣೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಶ್ರೀ
Last Updated 4 ಸೆಪ್ಟೆಂಬರ್ 2021, 3:21 IST
ಅಕ್ಷರ ಗಾತ್ರ

ದಾವಣಗೆರೆ: ಬೇರೊಬ್ಬರು ಮಾಡುವ ಕೆಲಸಗಳನ್ನು ನೋಡಿ ಅಸೂಯೆ ಪಡಬಾರದು. ಒಳ್ಳೆಯ ಕೆಲಸ ಮಾಡಿದಾಗ ಅವರನ್ನು ಪ್ರೋತ್ಸಾಹಿಸ ಬೇಕು ಎಂದು ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವೈದ್ಯ ಸಾಹಿತಿ ಡಾ.ಎಚ್‌. ಗಿರಿಜಮ್ಮ ವೃತ್ತಿ ಮತ್ತು ಬರಹ– ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯ ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಹೊಗಳಿಕೆ ಹಾಗೂ ತೆಗಳಿಕೆ ಎರಡೂ ಇರುತ್ತದೆ. ಟೀಕೆ ಮಾಡಿದರು ಎಂದು ಹೇಳಿ ಹಿಂಜರಿಯಬೇಕಿಲ್ಲ. ಹೊಗಳಿದರು ಅಂತ ಹಿಗ್ಗಬೇಕಿಲ್ಲ. ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಡಾ.ಗಿರಿಜಮ್ಮ ಅವರು ಛಲವಾದಿ ಹೆಣ್ಣುಮಗಳು. ಆಕೆ ಛಲದಿಂದ ಬದುಕಬೇಕಿತ್ತು. ಆದರೆ, ಅವರನ್ನು ನೋಡುವ ದೃಷ್ಟಿಕೋನ ಅವರನ್ನು ಖಿನ್ನರಾಗಿಸಿತು. ಜಾತಿಯ ಪ್ರಭಾವ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ ಎಂಬುದಕ್ಕೆ ಗಿರಿಜಮ್ಮ ಅವರೇ ಉದಾಹರಣೆ. ಆಕೆಯ ಜಾತಿ ಹಾಗೂ ಬಣ್ಣ ಅವರನ್ನು ಖಿನ್ನರಾಗಿಸಿತು’ ಎಂದು ವಿಷಾದ ವ್ಯಕ್ತಪಡಿಸಿದರು.

‘ಮನುಷ್ಯನಿಗೆ ಸಾಕಷ್ಟು ಸಮಸ್ಯೆಗಳು ಬರುತ್ತವೆ. ಆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಬೇಕು. ಗಿರಿಜಮ್ಮ ವೈದ್ಯೆಯಾದರೂ ಮನೋಸ್ಥೈರ್ಯ ಕಳೆದುಕೊಂಡರು. ಸಾರ್ವಜನಿಕರ ಸ್ಮರಣಶಕ್ತಿ ದುರ್ಬಲವಾಗಿದ್ದು, ವ್ಯಕ್ತಿ
ಸತ್ತ ಮೇಲೆ ಹೊಗಳುತ್ತಾರೆ. ಅದರ ಬದಲು ಬದುಕಿದ್ದಾಗ ಬಲ ತುಂಬಿದರೆ ಅವರು ಅದ್ಭುತ ಕೆಲಸ ಮಾಡುತ್ತಾರೆ’ ಎಂದರು.

‘ಗಾಂಧಿ, ಬಸವಣ್ಣ ಅಂತಹವರೂ ತಪ್ಪು ಮಾಡುತ್ತಾರೆ. ತಪ್ಪಿಗೆ ಪಶ್ಚಾತ್ತಾಪ ಪಟ್ಟು ತಿದ್ದಿಕೊಂಡಿದ್ದಾರೆ. ಪ್ರಾಯಶ್ಚಿತ್ತಕ್ಕಿಂತಪಶ್ಚಾತ್ತಾಪ ಮುಖ್ಯ. ಕೆಲವರು ಪ್ರಾಯಶ್ಚಿತ್ತ ಮಾಡಿಕೊಳ್ಳಲು, ರುದ್ರಾಭಿಷೇಕ, ಹೋಮ, ಬಂಗಾರ, ಸಿಂಹಾಸನ ಕೊಡುತ್ತಾರೆ. ಕೊನೆಗೆ ಜೈಲಿಗೂ ಹೋಗುತ್ತಾರೆ’ ಎಂದು ಹೇಳಿದರು.

ಸ್ಮರಣಾ ನುಡಿಗಳನ್ನಾಡಿದ ಲೇಖಕಿ ಡಾ.ವಸುಂಧರಾ ಭೂಪತಿ, ‘ಗಿರಿಜಮ್ಮ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕು. ಅವರ ಪುಸ್ತಕಗಳನ್ನು ಮರು ಮುದ್ರಣಗೊಳಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ‘ಗಿರಿಜಮ್ಮ ಸ್ನೇಹ ಬಳಗ’ ಆರಂಭಿಸಿದ್ದು, ಇದಕ್ಕೆ ನೀವೂ ಕೈಜೋಡಿಸಬಹುದು’ ಎಂದರು.

‘ಗಿರಿಜಮ್ಮ ಅವರದು ಭಾವುಕತೆ ವ್ಯಕ್ತಿತ್ವ. ಅವರಿಗೆ ಜೀವನ ಪ್ರೀತಿ ಸಿಗಲಿಲ್ಲ. ಅದು ಕಾಡುವ ನೆನಪಾಗಿ ಉಳಿಯುತ್ತದೆ. ಬೆರಗುಗಣ್ಣಿನಿಂದ ನೋಡುವಂತೆ ಅವರು ಕೆಲಸ ಮಾಡುತ್ತಿದ್ದರು. ವೈದ್ಯಕೀಯ ವೃತ್ತಿಯೂ ಇಂದು ಕಾರ್ಪೊರೇಟ್‌ ಆಗಿದೆ. ರಾಜಕಾರಣಿಗಳು ಹಾಗೂ ವೈದ್ಯರ ಕಿರುಕುಳದಿಂದಾಗಿ ಅವರು ಸರ್ಕಾರಿ ಸೇವೆಗೆ ವಾಪಸ್ ಬಂದಿದ್ದರು. ದಾವಣಗೆರೆ ನನ್ನ ಮೂಲಬೇರು. ಇಲ್ಲೇ ಇರುತ್ತೇನೆ ಎಂದಿದ್ದರು’ ಎಂದು ಸ್ಮರಿಸಿದರು.

‘ಗಿರಿಜಮ್ಮ ಅವರು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ನೋವನ್ನು ಉಂಡರು. ಅವರ ಬದುಕು ತೆರೆದಿಟ್ಟ ಪುಸ್ತಕ. ಅವರ ಪುಸ್ತಕಗಳನ್ನು ಮರುಮುದ್ರಣ ಮಾಡಬೇಕು’ ಎಂದು ಸಲಹೆ ನೀಡಿದರು.

ಹಿರಿಯ ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಕಾರ್ಯಕ್ರಮ ಉದ್ಘಾಟಿಸಿದರು.ಕರ್ನಾಟಕ ರಾಜ್ಯ ಮಹಾಮಂಡಳದ ಮಾಜಿ ಅಧ್ಯಕ್ಷ ಶೇಖರ್‌ಗೌಡ ಮಾಲಿಪಾಟೀಲ, ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಕಿರುವಾಡಿ ಗಿರಿಜಮ್ಮ, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ವರದಿಗಾರರ ಒಕ್ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಬಿ. ವಾಮದೇವಪ್ಪ, ಎನ್‌.ಎಸ್‌. ರಾಜು, ಬಿ. ದಿಳ್ಯೆಪ್ಪ, ಬುರುಡೇಕಟ್ಟೆ ಮಂಜಪ್ಪ, ಜಿ.ಆರ್. ಷಣ್ಮುಖಪ್ಪ, ಕೆ.ಬಿ. ಪರಮೇಶ್ವರಪ್ಪ ಇದ್ದರು.

ಬಾಕ್ಸ್‌...

ಭಾವುಕರಾದ ಮಂಜುನಾಥ ಕುರ್ಕಿ

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಅವರ ಅಧ್ಯಕ್ಷ ಸ್ಥಾನದ ಅವಧಿ ಗುರುವಾರಕ್ಕೆ ಕಡೆಯ ದಿನವಾಗಿದ್ದು, ಅವರ
ಏಳಿಗೆಗೆ ಸಹಕರಿಸಿದವರನ್ನು ನೆನೆದು ಭಾವುಕರಾದರು.

‘ನನ್ನ ಅವಧಿಯಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ, ಕೃಷಿ ಸಾಹಿತ್ಯ ಸಮ್ಮೇಳನ ನಡೆಸಿದ್ದೇನೆ. ಹೊನ್ನಾಳಿ ಹಾಗೂ ನ್ಯಾಮತಿಯಲ್ಲಿ ಸಾಹಿತ್ಯ ಭವನಕ್ಕೆ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಕೆಎಸ್‌ಆರ್‌ಟಿಸಿ ಕ್ರಿಯಾ ಸಮಿತಿಯ ರಾಜ್ಯಮಟ್ಟದ ಸಮ್ಮೇಳನ ನಡೆಸಿದ್ದೇನೆ. ಪುಸ್ತಕಗಳನ್ನು ಬರೆದು ಟ್ರಂಕ್‌ನಲ್ಲಿ ಇಟ್ಟುಕೊಳ್ಳುತ್ತಿದ್ದ ಪುಸ್ತಕಗಳನ್ನು ಮುದ್ರಣ ಮಾಡಿಸಿದ್ದೇನೆ’ ಎಂದರು.

‘3ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಕೆಲವರು ಆರೋಪ ಮಾಡಿದರು. ಅದು ಸುಳ್ಳು’ ಎಂದು ಸ್ಪಷ್ಟಪಡಿಸಿದರು.

‘ಕೆಲವು ಹೈಬ್ರಿಡ್ ಸಾಹಿತಿಗಳು ನನಗೆ ಮಾನಸಿಕವಾಗಿ ಕಿರುಕುಳ ನೀಡಿದರು’ ಎಂದು ಪ್ರಾಸ್ತಾವಿಕ ನುಡಿಗಳಲ್ಲಿ ಆರೋಪಿಸಿದರು.

‘ನನ್ನನ್ನು ಈ ಮಟ್ಟಕ್ಕೆ ಬೆಳೆಸಿದವರು ನಿಕಟಪೂರ್ವ ಅಧ್ಯಕ್ಷ ಉಜ್ಜಿನಪ್ಪ’ ಎಂದು ಹೇಳಿ ಮಂಜುನಾಥ್‌ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT