ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Quit India Day: ಬಲಿಷ್ಠ ದೇಶ ಕಟ್ಟಲು ಎಲ್ಲರೂ ಶ್ರಮಿಸಿ –ಜಿಲ್ಲಾಧಿಕಾರಿ ಹೇಳಿಕೆ

ಕ್ವಿಟ್ ಇಂಡಿಯಾ ಚಳವಳಿ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಹೇಳಿಕೆ
Published 9 ಆಗಸ್ಟ್ 2023, 7:15 IST
Last Updated 9 ಆಗಸ್ಟ್ 2023, 7:15 IST
ಅಕ್ಷರ ಗಾತ್ರ

ದಾವಣಗೆರೆ: ‘ದೇಶ ಸ್ವತಂತ್ರಗೊಳ್ಳಲು ಹಲವು ಮಹನೀಯ ಹೋರಾಟಗಾರರ ತ್ಯಾಗ, ಬಲಿದಾನವಾಗಿದೆ. ಬಲಿಷ್ಠ ದೇಶ ನಿರ್ಮಾಣ ಮಾಡುವ ಮೂಲಕ ಅವರ ಹೋರಾಟವನ್ನು ಸಾರ್ಥಕಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಎನ್.ಸಿ.ಸಿ, ಎನ್.ಎಸ್.ಎಸ್, ಗ್ರಾಮ ಸ್ವರಾಜ್ ಅಭಿಯಾನದ ಆಶ್ರಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶವು ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ಸಂಗತಿ. ಇತಿಹಾಸ ಅರಿಯಲಾರದವರು ಇತಿಹಾಸ ಸೃಷ್ಟಿಸಲಾರರು’ ಎಂದು ಹೇಳಿದರು.

ಕ್ವಿಟ್ ಇಂಡಿಯಾ ಚಳವಳಿ ಆರಂಭವಾದಾಗ ವಿದ್ಯಾರ್ಥಿಗಳು, ರೈತರು, ಸರ್ಕಾರಿ ನೌಕರರು ಸೇರಿದಂತೆ ಎಲ್ಲಾ ವರ್ಗದವರು ಹೋರಾಟವನ್ನು ಬೆಂಬಲಿಸಿದರು. ಅದರ ಫಲವೇ ಸ್ವಾತಂತ್ರ್ಯ’ ಎಂದು ತಿಳಿಸಿದರು.

‘ಗಾಂಧೀಜಿಯವರು ಸತ್ಯಹರಿಶ್ಚಂದ್ರ ಹಾಗೂ ಶ್ರವಣಕುಮಾರನ ಕಥೆಗಳನ್ನು ಓದುತ್ತಿದ್ದರು. ಅದರಿಂದ ಬಹಳ ಪ್ರೇರಣೆ ಪಡೆದಿದ್ದರು’ ಎಂದು ಹೇಳಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮಂಜಣ್ಣ ಮಾತನಾಡಿ, ‘ದೇಶದ ಮಹಾನ್ ಸಂತ ಗಾಂಧೀಜಿ. ಕ್ವಿಟ್ ಇಂಡಿಯಾ ಚಳವಳಿಗೂ ಮುನ್ನ ಹಲವು ಚಳವಳಿ ನಡೆದಿದ್ದವು. ಆದರೆ, ಆ ಬಳಿಕ ಅಂತಹ ಯಾವ ದೊಡ್ಡ ಚಳವಳಿಯೂ ನಡೆಯಲಿಲ್ಲ’ ಎಂಬುದು ಗಮನಾರ್ಹ ಎಂದರು.

‘50 ಜನರಿಂದ ಶುರುವಾದ ಚಳವಳಿ ಇಡೀ ದೇಶಾದ್ಯಂತ ಹಬ್ಬಿತು. ಇದರ ಹಿಂದಿರುವ ಶಕ್ತಿ ಗಾಂಧೀಜಿ. ಅವರು ಹೋದಲೆಲ್ಲಾ ಸಂಚಲನ ಸೃಷ್ಟಿಯಾಗುತ್ತಿತ್ತು. ಮಾಡು ಇಲ್ಲವೇ ಮಡಿ ಎಂಬ ಚಿಂತನೆಯೊಂದಿಗೆ ಅವರು ಹೋರಾಟ ನಡೆಸಿದರು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಮರುಳಸಿದ್ದಪ್ಪ, ಎನ್.ಎಸ್.ಎಸ್.ವಿಭಾಗೀಯ ಅಧಿಕಾರಿ ಪ್ರದೀಪ್, ಎನ್.ಸಿ.ಸಿ.ಸುಬೇದಾರ್ ಮಾಲುಂಜಾಕರ್, ಹವಾಲ್ದಾರ್ ಧರ್ಮವೀರ್, ಗ್ರಾಮ ಸ್ವರಾಜ್ ಅಭಿಯಾನದ ಆವರಗೆರೆ ರುದ್ರಮುನಿ, ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಸಂಘದ ಯುವ ಕಾರ್ಯಕರ್ತೆ ಉಷಾರಾಣಿ, ಚಿತ್ರಿಕಿ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೇಜಸ್ವಿ ಪಟೇಲ್ ಉಪಸ್ಥಿತರಿದ್ದರು.

ಎನ್.ಸಿ.ಸಿ.ಕೆಡೆಟ್, ಎನ್.ಎಸ್.ಎಸ್.ಸ್ವಯಂ ಸೇವಕರು, ವಿವಿಧ ಕಾಲೇಜಿನ ಉಪನ್ಯಾಸಕರು, ರೈತ ಮುಖಂಡರು ಭಾಗವಹಿಸಿದ್ದರು.

ಕಲಾವಿದರಾದ ಐರಣಿ ಚಂದ್ರು ಮತ್ತು ತಂಡದವರು ಜಾಗೃತಿ ಮತ್ತು ದೇಶಭಕ್ತಗೀತೆ ಹಾಡಿದರು.

ಮನವಿ ಸಲ್ಲಿಕೆ: ಸ್ಥಳೀಯ ಆಡಳಿತದಿಂದ ನಿವೇಶನ, ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ, ರಿಯಾಯಿತಿ ದರದಲ್ಲಿ ವಿದ್ಯುತ್, ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಗೆ ಅವಕಾಶ ಕಲ್ಪಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಉತ್ತರಾಧಿಗಳ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಗ್ರಂಥಾಲಯ ಆರಂಭ ಶೀಘ್ರ’

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ಪ್ರಾಸ್ತಾವಿಕವಾಗಿ ಮಾತನಾಡಿ ಗಾಂಧಿ ಭವನದಲ್ಲಿ ಶೀಘ್ರದಲ್ಲೇ ಸುಸಜ್ಜಿತವಾದ ಗ್ರಂಥಾಲಯವು ಆರಂಭವಾಗಲಿದ್ದು ಓದುಗರಿಗೆ ಮುಕ್ತ ಅವಕಾಶ ಇರಲಿದೆ ಎಂದು ತಿಳಿಸಿದರು. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಗಾಂಧಿ ಭವನಕ್ಕೆ ಭೇಟಿ ನೀಡಿ ಇಲ್ಲಿನ ಗ್ಯಾಲರಿ ಮತ್ತು ದಂಡಿಯಾತ್ರೆಯ ಪುತ್ಥಳಿಗಳನ್ನು ವೀಕ್ಷಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT