ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸೂಚನೆ

ಭದ್ರಾ ಜಲಾಶಯದಿಂದ ನೀರು
Last Updated 20 ಸೆಪ್ಟೆಂಬರ್ 2020, 15:30 IST
ಅಕ್ಷರ ಗಾತ್ರ

ದಾವಣಗೆರೆ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಜಿಟಿ ಜಿಟಿ ಮಳೆ ಸುರಿದಿದೆ. ಭದ್ರಾ ಜಲಾಶಯದಿಂದ 1ಲಕ್ಷ ಕ್ಯುಸೆಕ್ ನೀರನ್ನು ಬಿಟ್ಟಿರುವುದರಿಂದ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಹೊನ್ನಾಳಿ ತಾಲ್ಲೂಕಿನ ತಗ್ಗು ಪ್ರದೇಶಗಳ ಜನರಿಗೆ ಸೂಚನೆ ನೀಡಲಾಗಿದೆ.

ಜಿಲ್ಲೆಯ ಹರಿಹರ, ಹೊನ್ನಾಳಿ, ಚನ್ನಗಿರಿ, ನ್ಯಾಮತಿ ತಾಲ್ಲೂಕುಗಳಲ್ಲಿ ಮಳೆ ಸುರಿದಿದೆ. ಬೆಳಿಗ್ಗೆಯಿಂದ ಮಳೆ ಸುರಿಯುತ್ತಿದ್ದು, ಕೆಲವೊಮ್ಮೆ ಗಂಟೆಗೊಮ್ಮೆ ಮಳೆ ಬಂದು 10ರಿಂದ 15 ನಿಮಿಷಗಳ ಕಾಲ ನಿರಂತರವಾಗಿ ಸುರಿದು ಹೋಗುತ್ತಿತ್ತು. ತಣ್ಣನೆಯ ಸುಳಿಗಾಳಿ ಹಾಗೂ ಆಗಿಂದಾಗ್ಗೆ ಸುರಿಯುವ ಮಳೆ ಮತ್ತು ಚಳಿಯಿಂದಾಗಿ ಸಂಚಾರ ವಿರಳವಾಗಿತ್ತು.

ನಗರದಲ್ಲಿ ಭಾನುವಾರ ಸುರಿದ ಮಳೆ ಜನರನ್ನು ಹೊರಗೆ ಹೋಗಲು ಬಿಡಲಿಲ್ಲ. ರಜೆ ಇದ್ದುದರಿಂದ ನೌಕರರು ಮಕ್ಕಳೊಂದಿಗೆ ಮನೆಯಲ್ಲಿಯೇ ಖುಷಿಯಿಂದ ಕಳೆದರು. ಕಾರ್ಮೋಡ ಆವರಿಸಿಕೊಂಡಿದ್ದರಿಂದ ಸೂರ್ಯ ಮರೆಯಾಗಿದ್ದ. ಮಳೆಯಿಂದಾಗಿ ಗರಿಷ್ಠ ತಾಪಮಾನ ಕುಸಿತ ಕಂಡಿದ್ದು, ಭಾನುವಾರ ಸಂಜೆಯ ವೇಳೆಗೆ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದರಿಂದ ಇಡೀ ಜಿಲ್ಲೆಯಲ್ಲಿ ತಂಪಾದ ವಾತಾವರಣ ಸೃಷ್ಟಿಯಾಗಿತ್ತು.

‘ಮಳೆಯಾಗುತ್ತಿರುವುದರಿಂದ ರಾಗಿ ಬೆಳೆಗೆ ಅನುಕೂಲವಾಗಲಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಹೇಳುತ್ತಾರೆ.

ನ್ಯಾಮತಿ ವರದಿ

’ಮಳೆಯಿಂದಾಗಿ ರೈತರು ಬೆಳೆದ ಶೇಂಗಾ ಫಸಲಿಗೆ ತೊಂದರೆ ಆಗಿದೆ. ಕೀಳದೆ ಬಿಟ್ಟರೆ ಮೊಳಕೆ ಬರುತ್ತದೆ. ಈಗಾಗಲೇ ಕಿತ್ತುಹಾಕಿರುವ ಶೇಂಗಾ ಹೊಟ್ಟು ಮಳೆಗೆ ತೋಯ್ದು ಹಾಳಾಗಿದೆ. ಮೆಕ್ಕೆಜೋಳ ಫಸಲಿನ ತೆನೆಗೆ ಹೂಳು ಬಿದ್ದಿದೆ. ಈರುಳ್ಳಿ ಬೆಳೆಗೆ ಬೆಂಕಿ ರೋಗ ತಗುಲಿದೆ. ಮಳೆ ಇದೇ ರೀತಿ ಮುಂದುವರಿದರೆ ರೈತರ ಬದುಕು ಮೂರಾಬಟ್ಟೆ ಆಗಲಿದೆ’ ಎಂದು ರೈತರಾದ ಹೊಸಮನೆ ಮಲಿಕಾರ್ಜುನ, ಕತ್ತಿಗೆ ವೀರೇಶ, ದಾನಿಹಳ್ಳಿ ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT