ಬುಧವಾರ, ಜನವರಿ 22, 2020
18 °C
ಬಡವರಿಗೆ ಸೂರು ದೊರಕಿಸಲು ಪ್ರಯತ್ನ

ದಾವಣಗೆರೆ: ದೂಡಾ ಅಧ್ಯಕ್ಷರಾಗಿ ರಾಜನಹಳ್ಳಿ ಶಿವಕುಮಾರ್ ಅಧಿಕಾರ ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ (ದೂಡಾ) ಅಧ್ಯಕ್ಷರಾಗಿ ರಾಜನಹಳ್ಳಿ ಶಿವಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.

ಶಿವಕುಮಾರ್ ಬಿಜೆಪಿ ದಕ್ಷಿಣ ಬಿಜೆಪಿ ಮಂಡಲದ ಅಧ್ಯಕ್ಷ ಹಾಗೂ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇವರ ಜೊತೆ ದೂಡಾ ಸದಸ್ಯರಾಗಿ ದೇವಿರಮ್ಮ, ನಾಗರಾಜ್ ರೋಖಡೆ ಅಧಿಕಾರ ಸ್ವೀಕರಿಸಿದರು.

ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಬಡವರಿಗೆ ಸೂರು ದೊರಕಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಅಲ್ಲದೇ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಶಿವಕುಮಾರ್ ಭರವಸೆ ನೀಡಿದರು.

‘ಬಿಜೆಪಿ ಜಿಲ್ಲಾಧ್ಯಕ್ಷರಾದ ಯಶವಂತ್ ರಾವ್ ಜಾದವ್ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ. ದೂಡಕ್ಕೆ ಸಂಬಂಧಪಟ್ಟ ಅರ್ಧ ಅಡಿ ಜಾಗವನ್ನು ದುರ್ಬಳಕೆ ಮಾಡುವುದಿಲ್ಲ. ಪಕ್ಷ ಹಾಗೂ ಹಿರಿಯರ ಗೌರವಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್ ಷಾ ಅವರ ಗುರಿಯಂತೆ ಭ್ರಷ್ಟಾಚಾರಮುಕ್ತ ಆಡಳಿತ ನಡೆಸುತ್ತೇನೆ’ ಎಂದು ಭರವಸೆ ನೀಡಿದರು. 

‘ಪಕ್ಷದ ಕಾರ್ಯಕರ್ತರು ನೀಡಿದ ಸಹಕಾರ, ಬೆಂಬಲಕ್ಕೆ ಸದಾ ಚಿರಋಣಿಯಾಗಿರುತ್ತೇನೆ. ಅಧಿಕಾರಿಗಳೊಂದಿಗೆ ಸಮನ್ವಯತೆಯಿಂದ ನಗರದ ಅಭಿವೃದ್ಧಿಗೆ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡುತ್ತೇನೆ’ ಎಂದರು.

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ‘ದಾವಣಗೆರೆ ಮತ್ತು ಹರಿಹರ ನಗರ ಅಭಿವೃದ್ದಿಯತ್ತ ಗಮನಹರಿಸಬೇಕು.  ಮಹಾನಗರ ಪಾಲಿಕೆಯಾಗಿ ಕೋಟಿ ಕೋಟಿ ಅನುದಾನ ಬಂದರೂ ಅನೇಕ ರಸ್ತೆಗಳು ಗುಂಡಿಯಾಗಿವೆ. ಕಾಮಗಾರಿಗಳು ಕಳಪೆಯಾಗದಂತೆ ಎಚ್ಚರವಹಿಸಬೇಕು. ನಗರದಲ್ಲಿ ಎಲ್ಲೆಲ್ಲಿ ಲೋಪಗಳಿವೆ ಗಮನಿಸಿ ಪಟ್ಟಿ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ಹರಿಹರದಲ್ಲಿ ಉತ್ತಮ ಉದ್ಯಾನವನಗಳಿಲ್ಲ, ರಸ್ತೆಗಳು ಗುಂಡಿ ಬಿದ್ದಿದ್ದು, ಅವುಗಳನ್ನು ದುರಸ್ತಿಪಡಿಸಬೇಕು. ದೂಡಾ ಅನುದಾನದಲ್ಲಿ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ‘ಪಕ್ಷದಲ್ಲಿ ನಿಷ್ಟೆಯಿಂದ ದುಡಿದವರಿಗೆ ಅವಕಾಶಗಳು ಸಿಗುತ್ತವೆ. ಇದಕ್ಕೆ ಶಿವಕುಮಾರ್ ಸಾಕ್ಷಿಯಾಗಿದ್ದಾರೆ. ನಗರದ ಅಭಿವೃದ್ದಿ, ಕಾರ್ಯಕರ್ತರ ಕಷ್ಟಸುಖಗಳಲ್ಲಿ ಭಾಗಿಯಾಗಿರುವವರೆ ನಿಷ್ಟಾವಂತ ಮುಖಂಡರಾಗುತ್ತಾರೆ. ದಾವಣಗೆರೆ ಹಾಗೂ ಹರಿಹರ ನಗರಗಳಲ್ಲಿ ಉತ್ತಮ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಿ’ ಎಂದು ಸಲಹೆ ನೀಡಿದರು.

‘ಟೀಕೆ ಟಿಪ್ಪಣಿಗಳು ಸಹಜ. ಅವುಗಳತ್ತ ಕಿವಿಗೊಡದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ಮುಖ್ಯ. ಅರ್ಹರಿಗೆ, ಕಡುಬಡವರಿಗೆ ಸೌಲಭ್ಯಗಳನ್ನು ತಲುಪಿಸಬೇಕು ಎಂದು ಸಲಹೆ ನೀಡಿದ ಅವರು, ನಿವೇಶನ ಇಲ್ಲದ ಅರ್ಹ ಪತ್ರಕರ್ತರಿಗೆ ನಿವೇಶನ ಕೊಡಿಸುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.

ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್. ಶಿವಯೋಗಿಸ್ವಾಮಿ, ದೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಎಸ್.ಟಿ. ವೀರೇಶ್, ಸತೀಶ್, ಶ್ರೀನಿವಾಸ್, ಎಲ್.ಡಿ. ಗೋಣೆಪ್ಪ, ಶಿವನಗೌಡ ಪಾಟೀಲ್, ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು