ಜಗಳೂರು: ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲ ಗ್ರಾಮೀಣ ಪ್ರದೇಶದಲ್ಲಿ ಸೂಲಗಿತ್ತಿಯಾಗಿ ಸೇವೆ ಸಲ್ಲಿಸಿದ ಜಗಳೂರು ಗೊಲ್ಲರಹಟ್ಟಿ ಗ್ರಾಮದ ಸುಲ್ತಾನ್‌ಬಿ (84) ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.

ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಗಳೇ ಇಲ್ಲದ ಸಂದರ್ಭದಲ್ಲಿ 10 ಸಾವಿರಕ್ಕೂ ಅಧಿಕ ಹೆರಿಗೆಗಳನ್ನು ಉಚಿತವಾಗಿ ಮಾಡಿಸಿರುವ ಸುಲ್ತಾನ್‌ಬಿ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ 2021ನೇ ಸಾಲಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಗುರುತಿಸಿದೆ.

ಸೂಲಗಿತ್ತಿ ಸೇವೆಯೇ ಅಲ್ಲದೇ ವಿಷಪೂರಿತ ಹಾವುಗಳು ಮನೆ ಹಾಗೂ ವಸತಿ ಪ್ರದೇಶಕ್ಕೆ ಪ್ರವೇಶಿಸಿದಾಗ ಸುರಕ್ಷಿತವಾಗಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿರುವ ಸುಲ್ತಾನ್‌ಬಿ ಅವರ ಸಾಧನೆ ಗಮನಾರ್ಹ. ಇಸುಬು, ಹುಳಕಡಿಗೂ (ಚರ್ಮ ಸಂಬಂಧಿ ರೋಗಗಳು) ನಾಟಿ ಔಷಧ ನೀಡುತ್ತಿದ್ದರು.

ಜಗಳೂರು ತಾಲ್ಲೂಕಿನ ಗೊಲ್ಲರಹಟ್ಟಿ ಗ್ರಾಮದವರಾದ ಸುಲ್ತಾನ್‌ಬಿ ಬಡ ಕುಟುಂಬದಿಂದ ಬಂದವರು. ಅವರ ಪತಿ ಹಾಗೂ ಪುತ್ರ ಎತ್ತಿನಗಾಡಿ ಇಟ್ಟುಕೊಂಡು ಪಟ್ಟಣದಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರು. ಏಕಾಏಕಿ ಇಬ್ಬರೂ ತೀರಿಹೋದರು. ಇದರಿಂದ ಎದೆಗುಂದದ ಸುಲ್ತಾನ್‌ಬಿ ಅವರು ಸ್ವತಃ ಬಾರುಕೋಲು ಹಿಡಿದು ಒಂಟಿ ಎತ್ತಿನ ಗಾಡಿಯನ್ನು ಓಡಿಸುತ್ತಾ ಪಟ್ಟಣದಲ್ಲಿ ದಶಕಗಳ ಕಾಲ ಮಹಿಳಾ ಹಮಾಲಿಯಾಗಿ ಕೆಲಸ ಮಾಡಿದರು. ಒಮ್ಮೆ ಮನೆಯೊಳಕ್ಕೆ ನುಗ್ಗಿದ್ದ ವಿಷಪೂರಿತ ಹಾವನ್ನು ಹಿಡಿಯುವ ಸಮಯದಲ್ಲಿ ಹಾವು ಕೈಗೆ ಕಚ್ಚಿದ್ದರಿಂದ ಕೋಮಾಗೆ ಜಾರಿದ್ದರು. ಹಲವು ದಿನಗಳ ಕಾಲ ಸಾವು-ಬದುಕಿನ ಹೋರಾಟ ನಡೆಸಿ ನಂತರ ಚೇತರಿಸಿಕೊಂಡಿದ್ದರು. ಇದೀಗ ವೃದ್ಧಾಪ್ಯದಿಂದ ಜೀವನದ ಇಳಿಸಂಜೆಯಲ್ಲಿದ್ದಾರೆ.

‘ನಮ್ಮ ತಾಯಿಯವರು ಸೂಲಗಿತ್ತಿಯಾಗಿ ಕೆಲಸ ಮಾಡಿದ್ದರು. ಅವರಿಂದ ಸ್ಫೂರ್ತಿ ಪಡೆದು ನಾನೂ 20ನೇ ವಯಸ್ಸಿನಲ್ಲೇ ಹೆರಿಗೆ ಕಾರ್ಯಕ್ಕೆ ತಾಯಿಯೊಂದಿಗೆ ಕೈಜೋಡಿಸಿದ್ದೆ. ನಮ್ಮ ಭಾಗದ ಹತ್ತಾರು ಹಳ್ಳಿಗಳಲ್ಲಿ ಸುಮಾರು 50 ವರ್ಷಗಳ ಕಾಲ ಲೆಕ್ಕವಿಲ್ಲದಷ್ಟು ಹೆರಿಗೆ ಮಾಡಿಸಿದ್ದೇನೆ. ತಾಯಿ ಮತ್ತು ಮಗು ಸುರಕ್ಷತೆಗೆ ಒತ್ತು ಕೊಟ್ಟಿದ್ದೆ. ಅವರೆಲ್ಲರೂ ಇಂದಿಗೂ ನನ್ನನ್ನು ನೆನೆಸುತ್ತಾರೆ. ಈಗ ವಯಸ್ಸಾಗಿದೆ. ಎಲ್ಲೂ ಹೋಗುತ್ತಿಲ್ಲ. ಸರ್ಕಾರವು ಪ್ರಶಸ್ತಿ ಮೂಲಕ ಗೌರವಿಸಿರುವುದು ಸಂತೋಷ ತಂದಿದೆ’ ಎಂದು ಸುಲ್ತಾನ್ ಬಿ ಅನಿಸಿಕೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.