ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಗಾಪುರ: ಶೈಕ್ಷಣಿಗೆ ಪ್ರಗತಿಗೆ ಹೆಸರಾದ ರಾಮಲಿಂಗೇಶ್ವರ ಮಠ

ಎನ್‌.ವಿ.ರಮೇಶ್‌
Published 9 ಮಾರ್ಚ್ 2024, 5:23 IST
Last Updated 9 ಮಾರ್ಚ್ 2024, 5:23 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರ ಮಠ ಹಲವು ದಶಕಗಳಿಂದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸಿದೆ.

ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದರೊಂದಿಗೆ ಅವರ ಕುಟುಂಬದಲ್ಲಿ ನಿರುದ್ಯೋಗ ಬಡತನ, ಹಸಿವು, ದಾರಿದ್ರ್ಯ ತಾಂಡವವಾಡುತ್ತಿದ್ದುದನ್ನು ಗಮನಿಸಿದ ಮಠದ ರಾಮಲಿಂಗೇಶ್ವರ ಸ್ವಾಮೀಜಿ, ‘ಶಿಕ್ಷಣದಿಂದಲೇ ಸಮಾಜದ ಸರ್ವಾಂಗೀಣ ಪ್ರಗತಿ’ ಎಂಬ ದೃಢ ಚಿಂತನೆಯಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ತಮ್ಮ ಸ್ವಂತ ಗ್ರಾಮವಾದ ಕೆಂಗಾಪುರ ಸಮೀಪದ ಹರನಹಳ್ಳಿಯಲ್ಲಿ ರಾಮಲಿಂಗೇಶ್ವರ ವಿದ್ಯಾ ಸಂಸ್ಥೆ ತೆರೆದರು. ಈಗ ಇಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮಗಳಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಹಾಗೂ ಬಿ.ಇಡಿ ಕಾಲೇಜು ಆರಂಭಿಸಿ ಸೇರಿ ವಿವಿಧ ಕೋರ್ಸ್‌ ಆರಂಭಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಅಂದಾಜು 2,000 ವಿದ್ಯಾರ್ಥಿಗಳು ಇಲ್ಲಿನ ಶಾಲೆ– ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿದ್ದು, 100ಕ್ಕೂ ಅಧಿಕ ಶಿಕ್ಷಕರು, ಉಪನ್ಯಾಸಕರು ಸಿಬ್ಬಂದಿ ವರ್ಗದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಚಿತ ವಿದ್ಯಾರ್ಥಿ ನಿಲಯ ಸ್ಥಾಪಿಸಿ ಕಲಿಕೆಯಲ್ಲಿ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಲಾಗಿದೆ. 1,000ಕ್ಕೂ ಅಧಿಕ ಬಾಲಕ, ಬಾಲಕಿಯರು ಈ ವಿದ್ಯಾರ್ಥಿ ನಿಲಯಗಳಲ್ಲಿದ್ದು ಓದುತ್ತಿದ್ದಾರೆ.

‘ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯಿಂದ ಹೊನ್ನಾಳಿ ತಾಲ್ಲೂಕು ಕ್ಯಾಸಿನಕೆರೆ ಮತ್ತು ಭದ್ರಾವತಿ ತಾಲ್ಲೂಕು ನಿಂಬೆಗೊಂದಿಯಲ್ಲಿ ಎರಡು ಪ್ರೌಢಶಾಲೆ ಆರಂಭಿಸಿ ಅಲ್ಲಿನ ಮಕ್ಕಳ ಪ್ರೌಢಶಿಕ್ಷಣಕ್ಕೆ ನೆರವಾಗಿದ್ದಾರೆ. ವಿದ್ಯಾಸಂಸ್ಥೆಯಲ್ಲಿ ನೂರಾರು ಶೈಕ್ಷಣಿಕ, ವೈಜ್ಞಾನಿಕ, ಸಾಮಾಜಿಕ ಕಾರ್ಯಕ್ರಮ ಏರ್ಪಡಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ’ ಎಂದು ಇಲ್ಲಿನ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಎಚ್‌.ಎಸ್‌. ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಮಲಿಂಗೇಶ್ವರ ಸ್ವಾಮೀಜಿ ಧಾರ್ಮಿಕತೆಯಲ್ಲಿ ಅಡಗಿರುವ ವೈಜ್ಞಾನಿಕ ಅಂಶಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಪ್ರತಿವರ್ಷ ಶ್ರಾವಣ ಮಾಸದಲ್ಲಿ ಬರುವ ನಾಗರಪಂಚಮಿ ಹಬ್ಬದಲ್ಲಿ ಹಾವಿನ ಹುತ್ತ ಮತ್ತು ನಾಗರಕಲ್ಲಿಗೆ ಹಾಲನ್ನೆರೆಯದೇ ವಿದ್ಯಾರ್ಥಿಗಳಿಗೆ ತಾವೇ ಸ್ವತಃ ಹಾಲು ಕುಡಿಸುವುದು ಸ್ವಾಮೀಜಿಯವರ ವೈಚಾರಿಕ ಚಿಂತನೆಗೆ ಸಾಕ್ಷಿಯಾಗಿದೆ.

ಜಾತೀಯತೆ, ಸಂಕುಚಿತ ಧಾರ್ಮಿಕ ಭಾವನೆ, ಬಡವ ಬಲ್ಲಿದ, ಮೇಲು– ಕೀಳು ಎಂಬ ಭಾವನೆಗಳು ಅವರ ಮಠದಲ್ಲಾಗಲೀ, ವಿದ್ಯಾಸಂಸ್ಥೆಯಲ್ಲಾಗಲೀ ಸುಳಿಯದಂತೆ ನೋಡಿಕೊಂಡಿದ್ದು, ಸದಾ ವಿದ್ಯಾರ್ಥಿಗಳೊಂದಿಗೆ ಬೆರೆತು, ಅವರ ಯೋಗಕ್ಷೇಮ ವಿಚಾರಿಸುತ್ತ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಎಂದು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದಾದಾಪೀರ್‌ ಹೇಳಿದರು.

‘ಕೆಂಗಾಪುರದ ರಾಮಲಿಂಗೇಶ್ವರ ಮಠದಲ್ಲಿ 50 ವರ್ಷಗಳಿಂದ ಪ್ರತಿ ತಿಂಗಳ ಅಮಾವಾಸ್ಯೆಯಂದು ನಡೆಯುವ ಧರ್ಮಸಭೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಿ ಸ್ವಾಮೀಜಿಯಿಂದ ಆಶೀರ್ವಾದ ಪಡೆಯುತ್ತಾರೆ. ಪ್ರತಿ ವರ್ಷದ ಮಾಘ ಮಾಸದಲ್ಲಿ ನಡೆಯುವ ಸ್ವಾಮೀಜಿಯವರ ಮುಳ್ಳುಗದ್ದುಗೆ ಉತ್ಸವ ಸತತ ಐದು ದಿನ ನಡೆಯಲಿದ್ದು, ಉಚಿತ ಸಾಮೂಹಿಕ ವಿವಾಹ, ಪ್ರತಿಭಾ ಪುರಸ್ಕಾರ, ಪ್ರಸಿದ್ಧ ಸಾಹಿತಿ, ವಿದ್ವಾಂಸರಿಂದ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ಜನ ಭಕ್ತರು ಭಾಗವಹಿಸುತ್ತಾರೆ’ ಎಂದು ಮಠದ ಭಕ್ತರಾದ ಕಂಸಾಗರದ ವೀರಭದ್ರಪ್ಪ, ಕೆಂಗಾಪುರದ ಶಂಕ್ರಾನಾಯ್ಕ ತಿಳಿಸಿದರು. 

ಮುಳ್ಳುಗದ್ದುಗೆ ಉತ್ಸವ ಇಂದಿನಿಂದ

ಮಾರ್ಚ್‌ 9ರಂದು ಬೆಳಿಗ್ಗೆ 6ಕ್ಕೆ ಹರನಹಳ್ಳಿಯ ಹೊರಮಠದಿಂದ ರಾಮಲಿಂಗೇಶ್ವರ ಸ್ವಾಮೀಜಿಯವರ ಮುಳ್ಳುಗದ್ದುಗೆ ಉತ್ಸವ ಆರಂಭವಾಗಲಿದೆ. ಕಾಂಗ್ರೆಸ್‌ ಮುಖಂಡ ವಿ.ಎಸ್‌. ಉಗ್ರಪ್ಪ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಉತ್ಸವವು ವಿವಿಧ ಜಾನಪದ ಮೇಳಗಳು ಮತ್ತು ಸಹಸ್ರಾರು ಭಕ್ತರೊಂದಿಗೆ ಕೆಂಗಾಪುರದ ಒಳಮಠಕ್ಕೆ ಬಂದ ನಂತರ ಸ್ವಾಮೀಜಿಯಿಂದ ಕಾರ್ಣಿಕ ಉಚಿತ ಸಾಮೂಹಿಕ ವಿವಾಹ ನಂತರ ವಿವಿಧ ಮಠಾಧೀಶರು ಮತ್ತು ಜನಪ್ರತಿನಿಧಿಗಳು ಸಾಹಿತಿಗಳು ಭಾಗವಹಿಸುವ ಧರ್ಮಸಭೆಯಲ್ಲಿ ಉಪನ್ಯಾಸ ಆಶೀರ್ವಾದ ನಡೆಯಲಿವೆ ಎಂದು ಆಡಳಿತಾಧಿಕಾರಿ ಎಚ್‌.ಆರ್‌. ವಿಜಯಕುಮಾರ್‌ ತಿಳಿಸಿದ್ದಾರೆ.

ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರಸ್ವಾಮಿ ಮಠ
ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪುರದ ರಾಮಲಿಂಗೇಶ್ವರಸ್ವಾಮಿ ಮಠ
ರಾಮಲಿಂಗೇಶ್ವರ ಸ್ವಾಮೀಜಿ
ರಾಮಲಿಂಗೇಶ್ವರ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT