ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವು, ಜಲ, ಪರಿಸರ ಸಂರಕ್ಷಣೆಗೆ ‘ರಾಷ್ಟ್ರ ಧರ್ಮ ವಿಜಯಪಥ’ ಯಾತ್ರೆ

ದಾವಣಗೆರೆಯಿಂದ ರಾಣೇಬೆನ್ನೂರಿಗೆ ಹೊರಟ ನರ್ಮದಾನಂದ ಸ್ವಾಮೀಜಿ ಪಾದಯಾತ್ರೆ
Last Updated 29 ಜುಲೈ 2020, 11:12 IST
ಅಕ್ಷರ ಗಾತ್ರ

ದಾವಣಗೆರೆ:ಗೋವು, ಜಲ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್‌ನಿಂದ ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಗಂಗೋತ್ರಿಧಾಮದಿಂದ ಆರಂಭವಾದ‘ರಾಷ್ಟ್ರಧರ್ಮ ವಿಜಯಪಥ’ ಯಾತ್ರೆ ಬುಧವಾರ ದಾವಣಗೆರೆಯಿಂದ ರಾಣೆಬೆನ್ನೂರಿಗೆ ತಲುಪಿತು.

ಮಧ್ಯಪ್ರದೇಶದ ಓಂಕಾರ ಜ್ಯೋತಿರ್ಲಿಂಗ ನಜರ್ ನಿಹಾಲ್ ಆಶ್ರಮದ ನರ್ಮದಾನಂದ ಸ್ವಾಮೀಜಿ ಪಾದಯಾತ್ರೆಯ ನೇತೃತ್ವ ವಹಿಸಿದ್ದು, ಕೇದಾರನಾಥ್, ಹೃಷಿಕೇಶ, ಬನಾರಸ್‌, ವೈಜನಾಥ್ ಧಾಮ್, ಸಂಬಲ್‌ಪುರ, ಶ್ರೀಶೈಲ, ರಾಮೇಶ್ವರದ ಮೂಲಕ ಬೆಂಗಳೂರಿಗೆ ಬಂದಿದ್ದು, ನೆಲಮಂಗಲ, ತುಮಕೂರು, ಚಿತ್ರದುರ್ಗ ಹಾಗೂ ಭರಮಸಾಗರ ಮಾರ್ಗವಾಗಿ ಸೋಮವಾರ ದಾವಣಗೆರೆ ತಲುಪಿತ್ತು.

ನಗರದ ರಾಮ್ ಅಂಡ್ ಕೊ ವೃತ್ತದ ದೇವಾಲಯದ ಹಿಂಭಾಗದ ಬಳಿ ಛತ್ರದಲ್ಲಿ ಎರಡು ದಿವಸ ವಾಸ್ತವ್ಯ ಹೂಡಿದ್ದ ಸ್ವಾಮೀಜಿ, ‘ಹಣದ ಆಸೆಗೆ ಬಿದ್ದು ಮರಳನ್ನು ತೆಗೆಯಲು ಜನರು ನೆಲದ ಒಡಲನ್ನು ಬಗೆಯುತ್ತಿದ್ದು, ಇದು ಪ್ರಕೃತಿ ನಾಶಕ್ಕೆ ದಾರಿ ಮಾಡಿಕೊಡುತ್ತದೆ. ಆದ್ಜರಿಂದ ಜಲಮೂಲವನ್ನು ಸಂರಕ್ಷಿಸಿ’ ಎಂದು ಸ್ವಾಮೀಜಿ ಕಾರ್ಯಕರ್ತರಿಗೆ ಸಲಹೆ ನೀಡಿದರು.

‘ಗೋವು, ಜಲ ಹಾಗೂ ಪರಿಸರ ಸಂರಕ್ಷಣೆ ಒಂದಕ್ಕೊಂದು ಸಂಬಂಧ ಇದೆ. ಗೋವಿನ ಉತ್ಪನ್ನಗಳನ್ನು ಬಳಸುವುದರಿಂದ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆಯಾಗುತ್ತದೆ. ಪರಿಸರ ರಕ್ಷಣೆ ಮಾಡಿದರೆ ಮಳೆ ಸಮೃದ್ಧಿಯಾಗಿ ಬೀಳುತ್ತದೆ. ದೇಸಿಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಗೋವುಗಳ ಸಂರಕ್ಷಣೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಉತ್ತರ ಕರ್ನಾಟಕದ ಮೂಲಕ ಮಹಾರಾಷ್ಟ್ರದ ತಲುಪಿ ಮುಂದಿನ ವರ್ಷ ಜನವರಿ ಅಥವಾ ಫೆಬ್ರುವರಿ ತಿಂಗಳಲ್ಲಿ ಮಧ್ಯಪ್ರದೇಶಕ್ಕೆ ತೆರಳುತ್ತದೆ. ರಥಯಾತ್ರೆ ದೇಶದ 10 ರಾಜ್ಯಗಳನ್ನು ಆಯ್ದು ಬಂದಿದೆ. ಎಲ್ಲಾ ಕಡೆಗಳಲ್ಲಿಯೂ ಬಹಿರಂಗ ಸಭೆಗಳು ನಡೆಯಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಕೇವಲ ಕಾರ್ಯಕರ್ತರಿಗಷ್ಟೇ ಸೀಮಿತಗೊಂಡಿದೆ’ ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಎಚ್‌ಪಿ ಜಿಲ್ಲಾಧ್ಯಕ್ಷ ರವೀಂದ್ರ ತಿಳಿಸಿದರು.

ಆವರಗೆರೆ ಗೋಶಾಲೆಗೆ ಭೇಟಿ: ಭರಮಸಾಗರದ ಮೂಲಕ ಆವರೆಗೆರೆ ಗೋಶಾಲೆಗೆ ಬಂದಾಗ ಸ್ವಾಮೀಜಿಗೆ ಭವ್ಯ ಸ್ವಾಗತ ನೀಡಲಾಯಿತು. ಗೋಶಾಲೆಯ ರಾಸುಗಳಿಗೆ ಸ್ವಾಮೀಜಿ ಸ್ವತಃ ತಂದಿದ್ದ ಚಪಾತಿ ಹಾಗೂ ಬೆಲ್ಲವನ್ನು ತಿನ್ನಿಸಿದರು.

ಗೋರಕ್ಷಾ ಸಮಿತಿಯ ಪ್ರಮುಖ್ ಮಲ್ಲೇಶ್, ಕೃಷ್ಣಮೂರ್ತಿ ಪವಾರ್, ರಾಘವೇಂದ್ರ, ಆರ್‌. ಪ್ರತಾಪ್‌, ವಿಎಚ್‌ಪಿಯ ಹನುಮಂತಪ್ಪ ಎಸ್ಒಜಿ, ಧರ್ಮ ಜಾಗರಣೆಯ ಮಲ್ಲಿಕಾರ್ಜುನ್, ಗೋಪಾಲರಾವ್ ಸಾವಂತ್, ಕೆ.ಎನ್.ಓಂಕಾರಪ್ಪ, ರಾಘವೇಂದ್ರ,ಮಲ್ಲಿಕಾರ್ಜುನ ಅಂಗಡಿ, ರಾಜು, ಬಸಣ್ಣಕಡ್ಲೆಬಾಳು, ಜೊಳ್ಳಿಗುರು, ಆಟೊ ಮಂಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT