ಭಾನುವಾರ, ಅಕ್ಟೋಬರ್ 25, 2020
24 °C
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಸಿದ್ಧತೆ ಸಭೆಯಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ

ಮೋದಿ, ಬಿಎಸ್‌ವೈ ಟೀಕಿಸುವವರಿಗೆ ಉತ್ತರ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಾಂಗ್ರೆಸ್‌ ಸಹಿತ ವಿರೋಧ ಪಕ್ಷಗಳು ಸೋತು ಸುಣ್ಣವಾಗಿವೆ. ಆದರೂ ಪ್ರಧಾನಮಂತ್ರಿ ನರೇಂದ್ರಮೋದಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ವಿರೋಧ ಪಕ್ಷಗಳ ಟೀಕೆಗೆ ಸರಿಯಾದ ಉತ್ತರ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ವಿಧಾನಪರಿಷತ್‌ ಚುನಾವಣೆಯ ಸಿದ್ಧತೆಯ ಬಗ್ಗೆ ಬಿಜೆಪಿ ಜಿಲ್ಲಾ ಕಚೇರಿ
ಯಲ್ಲಿ ಸೋಮವಾರ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಪದವೀಧರ ಕ್ಷೇತ್ರದ ಚುನಾವಣೆ
ಯಲ್ಲಿ ಮತದಾರರಾಗಿರುವವರು ರಾಜಕೀಯವನ್ನು ತಿಳಿದವರು, ವಿದ್ಯಾವಂತರು. ಅವರೆಲ್ಲ ಬಿಜೆಪಿ ಪರವೇ ಇದ್ದಾರೆ. ಅವರನ್ನು ಕರೆದುಕೊಂಡು ಬಂದು ಮತ ಹಾಕಿಸುವುದೇ ದೊಡ್ಡ ಜವಾಬ್ದಾರಿ ಎಂದು ತಿಳಿಸಿದರು.

ಚುನಾವಣೆ ಅಂದರೆ ಬಿಜೆಪಿ ಗೆಲುವು ಎಂಬ ಸ್ಥಿತಿ ರಾಜ್ಯದಲ್ಲಿ ಇದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ ಎಂದು ಕಾಂಗ್ರೆಸ್ ಹೇಳಿತು. 17 ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲಲಿದೆ ಎಂದಿತು. ಆದರೆ ಎರಡು ಮೂರು ಸ್ಥಾನಗಳಷ್ಟೇ ಅವರಿಗೆ ಸಿಕ್ಕಿದೆ. ಇಲ್ಲೂ ನಮ್ಮ ಗೆಲುವು ಮುಂದುವರಿಸಬೇಕು ಎಂದರು.

‘ಅವರು ಜಾತಿವಾದಿಗಳು, ನಾವು
ರಾಷ್ಟ್ರವಾದಿಗಳು. ನಮ್ಮನ್ನು ಮತದಾ
ರರು ಒಪ್ಪಿದ್ದಾರೆ. ಮತದಾರರನ್ನು ಬೂತ್‌ಗೆ ಕರೆದುಕೊಂಡು ಬಂದು ಮತ ಹಾಕಿಸಬೇಕು. ಇಲ್ಲದೇ ಇದ್ದರೆ ಅದರಿಂದ ಬಿಜೆಪಿಗೆ ನಷ್ಟವಾಗುತ್ತದೆಯೇ ಹೊರತು, ಬೇರೆ ಪಕ್ಷಗಳಿಗಲ್ಲ’ ಎಂದು ವಿವರಿಸಿದರು.

ಕ್ಷೇತ್ರದಲ್ಲಿ ಎಷ್ಟು ಮತದಾರರಿದ್ದಾರೆ ಎಂದು ತಲೆಕೆಡಿಸಿಕೊಳ್ಳಬೇಡಿ. ಒಂದೊಂದು ಶಕ್ತಿ ಕೇಂದ್ರದಲ್ಲಿ ಎಷ್ಟಿದ್ದಾರೆ ಎಂಬುದನ್ನಷ್ಟೇ ನೋಡಿ. ಪ್ರತಿ 50 ಮತದಾರರ ಉಸ್ತುವಾರಿಯನ್ನು ಒಬ್ಬರಿಗೆ ನೀಡಿ. ಒಬ್ಬರಿಗೆ ಕಷ್ಟವಾಗುವುದಿದ್ದರೆ ಮೂವರಿಗೆ ನೀಡಿ. ಇನ್ನು ಹದಿನೈದು ದಿನಗಳಲ್ಲಿ ಆ ಮತದಾರರನ್ನು ಮೂರ್ನಾಲ್ಕು ಬಾರಿ ಭೇಟಿಯಾಗಲಿ. ಈ ಕಾರ್ಯಕರ್ತರನ್ನು ಜಿಲ್ಲಾ, ಮಂಡಲ ಮಟ್ಟದ ನಾಯಕರು ವಿಚಾರಿಸಲಿ. ಆಗ ನಮ್ಮ ನಿರೀಕ್ಷೆ ಮೀರಿ ಮತಗಳು ಬರಲಿವೆ. ಇಂಥ ಕಾರ್ಯಕರ್ತರ ಪಡೆ ಮತ್ಯಾವ ಪಕ್ಷದಲ್ಲಿಯೂ ಇಲ್ಲ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಲೋಕಸಭಾ ಕ್ಷೇತ್ರ ಒಂದು ಅಥವಾ ಎರಡು ಜಿಲ್ಲೆಗಳನ್ನು ಒಳಗೊಂಡಿರುತ್ತದೆ. ಆದರೆ ಈ ಪದವೀಧರರ ಕ್ಷೇತ್ರ ಐದು ಜಿಲ್ಲೆಗಳನ್ನು ಒಳಗೊಂಡಿದೆ. 32 ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿವೆ’ ಎಂದು ವಿವರಿಸಿದರು.

ಓದಿದ ಬುದ್ಧಿವಂತರೇ ಮತ ಹಾಕುವಾಗ ಹೆಚ್ಚು ತಪ್ಪುಗಳನ್ನು ಮಾಡುತ್ತಾರೆ. ಹಾಗಾಗಿ 70 ಸಾವಿರ ಮತದಾನವಾದರೆ ಅದರಲ್ಲಿ ಐದಾರು ಸಾವಿರ ಮತಗಳು ಅಸಿಂಧು ಆಗಿರುತ್ತವೆ. ಈ ಬಗ್ಗೆ ಎಚ್ಚರ ಇರಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಅಧ್ಯಕ್ಷತೆ ವಹಿಸಿದ್ದರು. ಸಾಬೂನು ಮತ್ತು ಮಾರ್ಜಕ ನಿಗಮ ಮಂಡಳಿ ಅಧ್ಯಕ್ಷ, ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ಪ್ರೊ. ಲಿಂಗಣ್ಣ, ವಿಭಾಗ ಪ್ರಭಾರಿ ಜಿ.ಎಂ. ಸುರೇಶ್‌, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್‌, ಬಿ.ಎಸ್. ಜಗದೀಶ್‌, ಸೊಕ್ಕೆ ನಾಗರಾಜ್‌, ಶಾಂತಕುಮಾರ್‌ ಪಾಟೀಲ್‌, ಬಸವರಾಜ ನಾಯ್ಕ್‌, ಕಲ್ಲೇಶ್‌, ಸತೀಶ್‌ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.