ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 29ರೊಳಗೆ ಸೂಳೆಕೆರೆ ಸರ್ವೆಯ ವರದಿ ನೀಡಿ

ಶಾಂತಿಸಾಗರದ ಸರ್ವೆ, ಒತ್ತುವರಿ ತೆರವು ಕಾರ್ಯಾಚರಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ
Last Updated 4 ಜನವರಿ 2020, 14:36 IST
ಅಕ್ಷರ ಗಾತ್ರ

ದಾವಣಗೆರೆ: ಸೂಳೆಕೆರೆಯ ಸರ್ವೆ ನಡೆಸಿ ಫೆ.29ರ ಒಳಗೆ ಅಂತಿಮ ವರದಿಯನ್ನು ನೀಡಬೇಕು. ತಪ್ಪಿದರೆ ಟೆಂಡರ್‌ದಾರ ಸಂಸ್ಥೆ ಮೇಲೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಸೂಳೆಕೆರೆ(ಶಾಂತಿಸಾಗರ)ಯ ಸರ್ವೆ ಕಾರ್ಯ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಸಭೆಯಲ್ಲಿ ಅವರು ಮಾತನಾಡಿದರು.

ಕಾಣದ ಕೈಗಳು ಸರ್ವೆಗೆ ಅಡ್ಡಿಪಡಿಸುತ್ತಿದ್ದರೆ ತಿಳಿಸಿ. ಖಡ್ಗ ಸಮಿತಿಯ ಹೋರಾಟದ ಫಲವಾಗಿ ಸೂಳೆಕೆರೆ (ಶಾಂತಿಸಾಗರ) ಸರ್ವೆ ಮಾಡಲು ಸರ್ಕಾರ ₹ 11 ಲಕ್ಷವನ್ನು ನೀರಾವರಿ ಇಲಾಖೆಗೆ ಬಿಡುಗಡೆ ಮಾಡಿದೆ. ಕೆರೆಯ ನೀರಿನ ಮಟ್ಟ ಇಳಿಯುತ್ತಿದ್ದಂತೆ ಸರ್ವೆ ಮಾಡಿ. ನೀಲನಕಾಶೆ ತಯಾರಿಸಿ ಜಿಲ್ಲಾ ಯೋಜನಾ ಇಲಾಖೆಯ ಮೂಲಕ ವರದಿ ಮಂಡಿಸಿ ಎಂದು ಸೂಚಿಸಿದರು.

ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಮಾತನಾಡಿ, ‘ಏಷ್ಯಾದ 2ನೇ ಅತಿದೊಡ್ಡ ಕೆರೆಯಾಗಿರುವ ಸೂಳೆಕೆರೆಗೆ ಇತಿಹಾಸ ಇದೆ. ಆದರೆ ಈವರೆಗೂ ಕೆರೆಯ ವಿಸ್ತೀರ್ಣ ಎಷ್ಟಿದೆ? ಎಷ್ಟು ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬುದರ ಬಗ್ಗೆ ಎಲ್ಲಿಯೂ ಮಾಹಿತಿ ಸಿಗುತ್ತಿಲ್ಲ’ ಎಂದರು.

ಪುರಾತನ ದಾಖಲೆಗಳನ್ನು ನೋಡಿದರೆ 6,460 ಎಕರೆ ವಿಸ್ತೀರ್ಣವನ್ನು ಈ ಕೆರೆ ಹೊಂದಿದೆ. ಇದರಲ್ಲಿ ಸುಮಾರು 950 ಎಕರೆ ಜಾಗ ಒತ್ತುವರಿಯಾಗಿದೆ ಎಂಬ ಮಾಹಿತಿ ದೊರೆತಿದೆ. ಇದನ್ನು ಬಿಟ್ಟರೆ ಯಾವುದೇ ನಿಖರ, ಸ್ಪಷ್ಟ ಮಾಹಿತಿ ಇಲ್ಲ. ಸರ್ವೆಗೆ ಅನುದಾನ ಬಿಡುಗಡೆಯಾಗಿದ್ದರೂ ನೀರಾವರಿ ಇಲಾಖೆ ಸರ್ವೆ ಮಾಡದೇ ಸಬೂಬು ಹೇಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರವಾಸಿ ತಾಣವಾಗಿರುವುದರಿಂದ ನಿತ್ಯ ನೂರಾರು ಜನ ಕೆರೆ ವೀಕ್ಷಣೆ ಮಾಡುತ್ತಾರೆ. ಇಲ್ಲಿರುವ ರಂಗ ಮಂಟಪವು ಬೀಳುವ ಹಂತದಲ್ಲಿದೆ. ಕೆರೆ ಸರ್ವೆ ಕೂಡಲೇ ಮಾಡಬೇಕು. ರಂಗಮಂಟಪ ದುರಸ್ತಿ ಮಾಡಬೇಕು ಎಂದು ಖಡ್ಗ ಸಂಘಟನೆಯ ಹರೀಶ್‌ ಒತ್ತಾಯಿಸಿದರು.

ಸರ್ವೆಗಾಗಿ ಈಗಾಗಲೇ ಟೆಂಡರ್ ನೀಡಲಾಗಿದೆ. 2019ರಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಕೆರೆಯಲ್ಲಿ 27 ಅಡಿ ನೀರು ನಿಂತಿದೆ. ಕೆರೆಯ ಸುತ್ತಮುತ್ತ ಕೃಷಿ ಮಾಡಿರುವುದರಿಂದ ಸರ್ವೆ ಮಾಡಲು ಸಾಗುತ್ತಿಲ್ಲ. ನೀರಿನ ಪ್ರಮಾಣ 3 ಅಡಿ ಇಳಿದ ಕೂಡಲೇ ಸರ್ವೆ ಕಾರ್ಯ ಆರಂಭಿಸಲಾಗುವುದು. ಕೆರೆಯ ಅಭಿವೃದ್ಧಿಗಾಗಿ ₹ 10 ಲಕ್ಷ ಅನುದಾನ ಬಿಡುಗಡೆಯಾಗಿದೆ. ಸ್ಟೀಲ್ ಹ್ಯಾಂಡ್‌ವಾಲ್ ಸ್ಟ್ಯಾಂಡ್‌ಗಳನ್ನು ನಿರ್ಮಿಸಲಾಗುವುದು. ₹ 3.5 ಲಕ್ಷದಲ್ಲಿ ರಂಗಮಂಟಪದ ದುರಸ್ತಿ ಮಾಡಲಾಗುವುದು’ ಎಂದು ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ಜಿ.ಡಿ. ಗುಡ್ಡಪ್ಪ ಮಾಹಿತಿ ನೀಡಿದರು.

ಈ ಬಾರಿಯ ಅಧಿಕ ಮಳೆಯಿಂದಾಗಿ ಕೆರೆ ತುಂಬಿದೆ. ನೀರು ತುಂಬಿಕೊಂಡಿರುವ ಜಾಗವನ್ನು ಕೆರೆಯ ಗಡಿ ಎಂದು ನಿರ್ಧರಿಸಬೇಕು ಎಂದು ತೇಜಸ್ವಿ ಪಟೇಲ್ ಸಲಹೆ ನೀಡಿದರು.

ಕೆರೆಯ ಸರ್ವೆ ಕಾರ್ಯಕ್ಕಾಗಿ ಉಪ ವಿಭಾಗಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿಕೊಂಡು ವಿಶೇಷ ಅನುದಾನದಲ್ಲಿ ಡ್ರೋನ್‌ ಕ್ಯಾಮೆರಾ ಮೂಲಕ ವಿಡಿಯೊ ಮಾಡಿ ಈಗಿರುವ ನೀರು ಯಾವ ಕಡೆಗೆ ಹರಿಯುತ್ತದೆ ಎಂದು ದಾಖಲೆಗಳನ್ನು ಸಂಗ್ರಹಿಸಬೇಕು ಎಂದರು.

ಉಪ ವಿಭಾಗಧಿಕಾರಿ ಮಮತಾ ಹೊಸಗೌಡರ್, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಚನ್ನಗಿರಿ ತಹಶೀಲ್ದಾರ್‌ ನಾಗರಾಜ್, ಖಡ್ಗ ಸಮಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT