ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ನೋಂದಣಿ ರದ್ದುಗೊಳಿಸಲು ಆಗ್ರಹ

Last Updated 17 ಜೂನ್ 2020, 15:13 IST
ಅಕ್ಷರ ಗಾತ್ರ

ದಾವಣಗೆರೆ: ಕಟ್ಟಡ ಕಾರ್ಮಿಕರ ಆನ್‌ಲೈನ್ ನೋಂದಣಿಯಲ್ಲಿ ನಕಲಿ ಕಾರ್ಮಿಕರು ಸೇರ್ಪಡೆಯಾಗುತ್ತಿದ್ದು, ಇದನ್ನು ರದ್ದುಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ಕಾರ್ಮಿಕರು ದೇವರಾಜ ಅರಸು ಬಡಾವಣೆಯಲ್ಲಿರುವ ಕಾರ್ಮಿಕ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

‘ಇತ್ತೀಚೆಗೆ ಭಾರಿ ಪ್ರಮಾಣದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಹೆಸರಿನಲ್ಲಿ ಆನ್‌ಲೈನ್‌ನಲಿ ಮಂಡಳಿಯ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಕಾಮಗಾರಿ ನಡೆಯುವ ಸ್ಥಳ, ಪ್ರೊಜೆಕ್ಟ್ ಹೆಸರನ್ನು ಸರಿಯಾಗಿ ನಮೂದಿಸದೇ ನಿಯಮಗಳನ್ನು ಗಾಳಿ ತೂರಲಾಗುತ್ತಿದೆ. ಕಾಮಗಾರಿ ನಡೆಯದೇ ಇರುವ ಸ್ಥಳದಲ್ಲಿ ಕಟ್ಟಡ ನಿರ್ಮಾಣವಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಕಾರ್ಮಿಕರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದರಲ್ಲಿ ಭಾರಿ ಪ್ರಮಾಣದ ದಲ್ಲಾಳಿಗಳ ಹಾವಳಿ ಇದೆ. ಶೇ 50ರಷ್ಟು ಉದ್ಯೋಗ ಪ್ರಮಾಣ ಪತ್ರಗಳು ಸೃಷ್ಟಿಯಾಗಿದೆ. ಇದರಿಂದ ಮಂಡಳಿಯ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ತಕ್ಷಣ ಆನ್‌ಲೈನ್‌ ವ್ಯವಸ್ಥೆ ಸ್ಥಗಿತಗೊಳಿಸಿ ಕಾರ್ಮಿಕರ ನೋಂದಣಿ, ನವೀಕರಣ, ಮತ್ತು ಇತರೆ ಧನಸಹಾಯದ ಸೌಲಭ್ಯದ ಅರ್ಜಿಗಳು ಕಾರ್ಮಿಕರ ನಿರೀಕ್ಷಕರ ಕಚೇರಿಯಲ್ಲಿ ಮತ್ತು ಅಧಿಕೃತ ಕಾರ್ಮಿಕ ಸಂಘಟನೆಯ ಕಚೇರಿಯಲ್ಲಿ ಸ್ವೀಕರಿಸುವಂತಾಗಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ನಕಲಿ ಕಾರ್ಡ್‍ದಾರರನ್ನು ಪತ್ತೆ ಹಚ್ಚಬೇಕು, 3 ತಿಂಗಳಿಗೊಮ್ಮೆ ಕಾರ್ಮಿಕ ಸಂಘಟನೆಗಳ ಸಭೆ ಕರೆಯಬೇಕು. ಮನೆ ಕಟ್ಟುವ ವಸ್ತುಗಳ ಬೆಲೆ ಏರಿಕೆಯಾಗಿದ್ದು, ದರ ಕಡಿತದ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆಯಬೇಕು, ಎಲ್ಲ ಸಂಘಟನೆಗಳ ಲೆಕ್ಕಪರಿಶೀಲನಾ ವರದಿ ಇಲಾಖೆಗೆ ತರಿಸಿಕೊಳ್ಳಬೇಕು, ಎಂಸ್ಯಾಂಡ್ ಮತ್ತು ಮರುಳು ಡಿಪೊವನ್ನು ಜಿಲ್ಲಾಡಳಿತದಿಂದಲೇ ತೆರೆಯಬೇಕು’ ಎಂದು ಆಗ್ರಹಿಸಿದರು.

ಈ ಸಂದರ್ಭ ಕಾರ್ಮಿಕ ಅಧಿಕಾರಿ ಮೂಲಕ ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಎಚ್.ಜಿ. ಉಮೇಶ್, ಫೈಯಾಜ್ ಆಹಮದ್, ಸಿದ್ದೇಶ್, ಭಜನೆ ಹನುಮಂತಪ್ಪ, ಮುರುಗೇಶ್, ದುಗ್ಗಪ್ಪ, ನಾಗರಾಜ್, ಮಣಿ, ಲಕ್ಷ್ಮಣ ಶ್ಯಾಗಲೆ, ಸಿದ್ದಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT