ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಸ್ನೇಹಿ ವಾಹನಗಳನ್ನು ಸಂಶೋಧಿಸಿ

ಡೆಸಿಬಲ್ಸ್ ಲ್ಯಾಬ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಸೂರಜ್ ಎಸ್.ಡಿ. ಸಲಹೆ
Last Updated 6 ಮಾರ್ಚ್ 2020, 12:12 IST
ಅಕ್ಷರ ಗಾತ್ರ

ದಾವಣಗೆರೆ: ವಾಹನಗಳು ಹಾಗೂ ಇಂಧನಗಳ ಬೆಲೆ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ತಂತ್ರಜ್ಞಾನಕ್ಕಾಗಿ ಬೇರೆಯವರನ್ನು ಬೇಡುವ ಬದಲು ವಿದ್ಯಾರ್ಥಿಗಳು ಪರಿಣಾಮಕಾರಿ ಹಾಗೂ ಪರಿಸರಸ್ನೇಹಿ ತಂತ್ರಜ್ಞಾನದ ವಾಹನಗಳನ್ನು ಸಂಶೋಧಿಸಿ ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಡೆಸಿಬಲ್ಸ್ ಲ್ಯಾಬ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಸೂರಜ್ ಎಸ್.ಡಿ. ಸಲಹೆ ನೀಡಿದರು.

ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಎಲೆಕ್ಟ್ರಿಕಲ್ ವಾಹನಗಳ ಕುರಿತು ಶುಕ್ರವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪೆಟ್ರೋಲ್, ಡೀಸೆಲ್ ವಾಹನಗಳು ಉಗುಳುವ ಹೊಗೆಯಿಂದಾಗಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚುತ್ತಿದ್ದು, ಹಸಿರುಮನೆ ಪರಿಣಾಮಕ್ಕೆ ಕಾರಣವಾಗುತ್ತಿವೆ. ಪರಿಸರಕ್ಕೆ ಹಾನಿಕಾರಕವಾಗಿರುವ ಇವುಗಳನ್ನು ತ್ಯಜಿಸಿ ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕಲ್ ವಾಹನಗಳನ್ನು ಅವಲಂಬಿಸಬೇಕಿದ್ದು, ವಿದ್ಯಾರ್ಥಿಗಳು ಇಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು. ಪೆಟ್ರೋಲ್, ಡೀಸೆಲ್ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳು ಅನಿವಾರ್ಯ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ. ನಟರಾಜ ಮಾತನಾಡಿ, ‘ಮುಂದಿನ 10 ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಸೇರಿ ಪೆಟ್ರೋಲಿಯಂ ಉತ್ಪನ್ನಗಳ ಸಿಗುವುದು ಕಷ್ಟ. ಈ ನಿಟ್ಟಿನಲ್ಲಿ ಇದಕ್ಕೆ ಪರ್ಯಾಯ ತಂತ್ರಜ್ಞಾನವನ್ನು ಕಂಡುಕೊಳ್ಳಬೇಕಾಗಿದೆ. ಹೊಸ ಹೊಸ ಆಲೋಚನೆಗಳ ಮೂಲಕ ವಿದ್ಯಾರ್ಥಿಗಳು ಸ್ಟಾರ್ಟ್ ಅಪ್ ಸೆಂಟರ್ ಆರಂಭಿಸಬೇಕು’ ಎಂದು ಸಲಹೆ ನೀಡಿದರು.

ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ.ಎಸ್‌.ಕೆ. ಕುಮಾರಪ್ಪ, ಡಿ.ಇ. ಉಮೇಶ್‌, ಮೋಹನ್ ಟಿ.ಆರ್, ಡಾ. ತಿಪ್ಪೇಸ್ವಾಮಿ ಏಕಬೋಟೆ, ಇ.ಅಶೋಕ, ಪ್ರೊ.ಜಿ. ಮಾನವೇಂದ್ರ, ಕೆ.ಆರ್.ದೇವೇಂದ್ರಪ್ಪ, ಡಾ.ಶರಣ್ ಇದ್ದರು.

3 ದಿನಗಳ ತರಬೇತಿ: ಎಲೆಕ್ಟ್ರಿಕ್ ಬೈಕ್‌ಗಳ ತಯಾರಿಕೆ, ವಿನ್ಯಾಸ ಹಾಗೂ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಿಗೆ ಸೂರಜ್ ಅವರು ಮಾಹಿತಿ ನೀಡುವರು.

ಮೂರು ದಿನಗಳ ಈ ಕಾರ್ಯಾಗಾರದಲ್ಲಿ ಎಲೆಕ್ಟ್ರಿಕಲ್ ವಾಹನಗಳಲ್ಲಿ ಲೀಥಿಯಂ ಬ್ಯಾಟರಿ, ಚಾರ್ಚಿಂಗ್ ವ್ಯವಸ್ಥೆ, ಟ್ರಾಕ್ಷನ್ ಮೋಟರ್ಸ್, ಮೋಟರ್ ಕಂಟ್ರೋಲರ್, ಎಲೆಕ್ಟ್ರಿಕಲ್ ವಾಹನಗಳ ಲಘು ಹಾಗೂ ಭಾರಿವಾಹನಗಳ ಭಾಗಗಳ ವಿನ್ಯಾಸಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುವುದು.

ತಯಾರಿಕೆಯಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಿಡಿ ಭಾಗಗಳನ್ನು ಪ್ರತ್ಯೇಕಿಸುವುದು, ಬ್ಯಾಟರಿ ಹಾಗೂ ಮೋಟರ್‌ಗಳ ಪ್ಯಾಕಿಂಗ್, ಬ್ಯಾಟರಿ ಮೌಂಟಿಂಗ್ ತಯಾರಿಕೆ, ಚಾಸಿಸ್ ತಯಾರಿಕೆಗಳ ಬಗ್ಗೆಯೂ ಮಾಹಿತಿ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT