ಮಂಗಳವಾರ, ಮಾರ್ಚ್ 28, 2023
33 °C
ಕಟ್ಟಡ ಕಾರ್ಮಿಕರಿಗೆ ಫುಡ್‍ಕಿಟ್ ವಿತರಣೆಯಲ್ಲಿ ಅವ್ಯವಹಾರ ಆರೋಪ

ಆರೋಪ ಸಾಬೀತುಪಡಿಸಿದರೆ ರಾಜೀನಾಮೆ: ಶಾಸಕ ರೇಣುಕಾಚಾರ್ಯ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ‘ಕಟ್ಟಡ ಕಾರ್ಮಿಕರಿಗೆ ಫುಡ್‍ಕಿಟ್ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪವನ್ನು ಸಾಬೀತುಪಡಿಸಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದರು.

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 6,500 ಕಾರ್ಮಿಕರಿಗೆ ಫುಡ್‍ಕಿಟ್ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಕಾರ್ಮಿಕ ಇಲಾಖೆಗೆ ಬಂದ ಫುಡ್‍ಕಿಟ್‍ಗಳನ್ನು ಯಾವ ಗೋದಾಮಿನಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ. ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು ಬಿಜೆಪಿ ಕಾರ್ಯಕರ್ತರಿಗೆ ಸೇರಿದ ಗೋದಾಮಿನಲ್ಲಿ ಫುಡ್‍ಕಿಟ್ ಇರಿಸಲಾಗಿದೆ ಎಂದು ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು. ಆದರೆ, ನನ್ನ ಮೇಲಿನ ಆರೋಪವನ್ನು ಸಾಬೀತುಪಡಿಸಲು ಅವರು ವಿಫಲರಾಗಿದ್ದಾರೆ‘ ಎಂದು ಹೇಳಿದರು.

‘ನಾನು ಶಾಸಕನಾಗಿ ಎಲ್ಲರನ್ನೂ ಸಮಾನವಾಗಿ ಕಂಡಿದ್ದೇನೆ. ಸರ್ಕಾರದ ಯಾವುದೇ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಾಂಗ್ರೆಸ್‍ನವರಿಗೆ ಕೊಡಬೇಡಿ, ಬಿಜೆಪಿಯವರಿಗೆ ಮಾತ್ರ ಕೊಡಿ ಎಂದು ತಾರತಮ್ಯ ಮಾಡಿಲ್ಲ’ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಕೆ.ವಿ. ಶ್ರೀಧರ್, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ಎಪಿಎಂಸಿ ಅಧ್ಯಕ್ಷ ಸುರೇಶ್ ಮಾತನಾಡಿದರು.

ವೇದಿಕೆ ಮೇಲೆ ತಹಶೀಲ್ದಾರ್ ಬಸನಗೌಡ ಕೋಟೂರ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಇಬ್ರಾಹಿಂ ಸಾಬ್, ತಾಲ್ಲೂಕು ಕಾರ್ಮಿಕ ನಿರೀಕ್ಷಕ ರಾಜಶೇಖರ್ ಹಿರೇಮಠ, ಸಿಪಿಐ ಟಿ.ವಿ. ದೇವರಾಜ್, ಪುರಸಭಾ ಸದಸ್ಯರಾದ ರಂಗನಾಥ್, ಬಾಬು, ಕಿಟ್ಟಿ, ಮುಖಂಡರಾದ ಮಂಜುನಾಥ್ ಇಂಚರ, ಮಹೇಶ್ ಹುಡೇದ್ ಉಪಸ್ಥಿತರಿದ್ದರು.

‘ಕೊರಳುಪಟ್ಟಿ ಹಿಡಿಯಲು ಬಂದರೆ ತಕ್ಕ ಉತ್ತರ’

‘ನನ್ನ ಕೊರಳುಪಟ್ಟಿ ಹಿಡಿದು ಮನೆಯಿಂದ ಹೊರಗೆ ಎಳೆದು ತರುವುದಾಗಿ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹಾಗೂ ಅವರ ಪುತ್ರ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದಾರೆ. ತಾಕತ್ತು ಇದ್ದರೆ ನನ್ನ ಮನೆಗೆ ಬಂದು ನನ್ನ ಕೊರಳಪಟ್ಟಿ ಹಿಡಿಯಲಿ ನೋಡೋಣ.
ನಾನು ತಪ್ಪು ಮಾಡಿದ್ದರೆ ತಾಲ್ಲೂಕಿನ ಮತದಾರರು ನನ್ನ ಕೊರಳಪಟ್ಟಿ ಹಿಡಿದು ಕೇಳಲಿ. ಅದನ್ನು ಬಿಟ್ಟು ಬೇರೆ ಯಾರಾದರೂ ನನ್ನ ಕೊರಳಪಟ್ಟಿ ಹಿಡಿಯುತ್ತೇನೆ ಎಂದು ಬಂದರೆ ತಾಲ್ಲೂಕಿನ ಜನರೇ ತಕ್ಕ ಉತ್ತರ ನೀಡುವರು’ ಎಂದು ಶಾಸಕ ರೇಣುಕಾಚಾರ್ಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು