ಭಾನುವಾರ, ಅಕ್ಟೋಬರ್ 25, 2020
24 °C
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಬಸವರಾಜ್‌ ಹೊರಟ್ಟಿ

ಸೇಡಿನ ರಾಜಕಾರಣ ಮಾಡುವವರು ಯೋಗ್ಯರಲ್ಲ: ಬಸವರಾಜ್‌ ಹೊರಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಚುನಾವಣೆ ಮುಗಿದ ಮೇಲೆ ಮತ ಹಾಕಿದವರು, ಹಾಕದವರನ್ನು ಒಟ್ಟಿಗೆ ಒಯ್ಯಬೇಕು. ಓಟು ಹಾಕಿಲ್ಲ ಎಂದು ಸೇಡಿನ ರಾಜಕಾರಣ ಮಾಡುವವರು ಪದವೀಧರ ಕ್ಷೇತ್ರ, ಶಿಕ್ಷಣ ಕ್ಷೇತ್ರಗಳ ಪ್ರತಿನಿಧಿಗಳಾಗಲು ಯೋಗ್ಯರಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಸದ್ಯೋಜಾತ ಮಠದ ಆವರಣದಲ್ಲಿ ಶನಿವಾರ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ನಾರಾಯಣ ಸ್ವಾಮಿ ಅವರಿಗೆ ಹಿಂದಿನ ಬಾರಿ ಮತ ಹಾಕಿಲ್ಲ ಎಂಬ ಕಾರಣಕ್ಕೆ ಜಗಳೂರಿನ ಶಿವಣ್ಣ ಎಂಬವರ ಡೆಪ್ಟೇಶನ್‌ ಅನ್ನೇ ರದ್ದು ಮಾಡಿದ್ದರು. ಅಂಥ ರಾಜಕೀಯ ಸರಿಯಲ್ಲ ಎಂದರು. ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಜತೆ ಮಾತನಾಡಿದ್ದೇನೆ. ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ ಬರುವ ಶಿಕ್ಷಕರ ಮೇಲೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳುವುದು ಸರಿಯಲ್ಲ’ ಎಂದು ತಿಳಿಸಿದರು.

ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಒಂದು ಸಮಸ್ಯೆ ಪರಿಹಾರವಾದಾಗ ಮತ್ತೊಂದು ಉದ್ಬವವಾಗುತ್ತದೆ. ಆದರೆ ಪರಿಹರಿಸಲು ಸಾಧ್ಯ ಇರುವುದನ್ನು ಕೂಡ ಪರಿಹರಿಸದಿದ್ದರೆ ಅದು ಸರಿಯಲ್ಲ ಎಂದರು.

‘ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಕೆಲಸಗಳಾಗಿಲ್ಲ. ಸಮ್ಮಿಶ್ರ ಸರ್ಕಾರ ಇರುವಾಗ ಜನರಿಗೆ ಸ್ಪಂದಿಸುವ ಕೆಲಸ ಮಾಡಿದ್ದೇವೆ. ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್‌ ಒಂದೇ ಒಂದು ಕೆಲಸ ಮಾಡಿದ್ದರೆ ಹೇಳಲಿ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್‌ ಹಿಂದೆ ಇದೆ’ ಎಂದು ಟೀಕಿಸಿದರು.

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ‘ 32 ವಿಧಾನಸಭಾ ಕ್ಷೇತ್ರಗಳನ್ನು ಈ ಪದವೀಧರ ಕ್ಷೇತ್ರ ಒಳಗೊಂಡಿರುವುದರಿಂದ ಚೌಡರೆಡ್ಡಿ ಅವರು ಎಲ್ಲ ಕಡೆ ಬರಲು ಕಷ್ಟ. ಹಾಗಾಗಿ ಈ ಭಾಗದಲ್ಲಿ ನಾನೇ ಚೌಡರೆಡ್ಡಿ ಎಂದು ತಿಳಿದುಕೊಳ್ಳಿ. ನಿಮ್ಮ ಸಮಸ್ಯೆ, ಕೆಲಸಗಳಿಗೆ ಸ್ಪಂದಿಸುತ್ತೇನೆ’ ಎಂದು ತಿಳಿಸಿದರು.

ನಿಮ್ಮ ಕೆಲಸ ಮಾಡುವ ಹಸುವಿನಂಥ ಚೌಡರೆಡ್ಡಿ ಬೇಕಾ? ಭಯ ಹುಟ್ಟಿಸುವ ರಾಜಕಾರಣ ಮಾಡುವವರು ಬೇಕಾ? ಪ್ರೀತಿಯಿಂದ ಕೆಲಸ ಮಾಡುವವರಿಗೆ ಮತ ನೀಡಿ ಎಂದು ಕೋರಿದರು.

ಅಭ್ಯರ್ಥಿ ಚೌಡರೆಡ್ಡಿ ಆರ್‌. ತೂಪಲ್ಲಿ, ‘ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಇದ್ದ ಉದ್ಯೋಗವನ್ನೂ ಕಿತ್ತುಕೊಂಡಿದೆ. ಇಚ್ಛಾಶಕ್ತಿ ಇಲ್ಲದ ಕಾರಣ ನಿರುದ್ಯೋಗ ಹೆಚ್ಚಿದೆ. ನಾನು ಪ್ರಾಮಾಣಿಕವಾಗಿ ಶಿಕ್ಷಕರ, ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಸುಳ್ಳು ಹೇಳುವ ರಾಜಕಾರಣ ಮಾಡಿಲ್ಲ’ ಎಂದರು.

ಜೆಡಿಎಸ್‌ ನಾಯಕರಾದ ಗಣೇಶ್‌ ದಾಸ್‌ ಕರಿಯಪ್ಪ, ಜೆ. ಅಮಾನುಲ್ಲಾ ಖಾನ್‌, ಕೆ.ಟಿ. ಕಲ್ಲೇರುದ್ರೇಶ್‌, ಶೀಲಾ ಕುಮಾರ್‌, ಎಂ.ಎ. ಬಕ್ಕಪ್ಪ, ಎ.ಕೆ. ನಾಗಪ್ಪ, ಟಿ. ಅಜ್ಗರ್‌, ಸಂಗಣ್ಣ, ಅಂಜಿನಪ್ಪ, ಓಂಕಾರಪ್ಪ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು