ಜಗಳೂರು: ಈಚೆಗೆ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಗೂ ಸೇತುವೆಗಳು ಕುಸಿದಿದ್ದು, ಹೊಲಗಳಿಗೆ ಹೋಗಲು ಹಾಗೂ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ರೈತರಿಗೆ ತೀವ್ರ ಸಮಸ್ಯೆಯಾಗಿದೆ.
ಆಗಸ್ಟ್ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಕಸಬಾ, ಬಿಳಿಚೋಡು ಮತ್ತು ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಗೂ ವಿವಿಧ ಗ್ರಾಮಗಳಿಗೆ ತೆರಳುವ ಹಲವು ರಸ್ತೆಗಳು ಕಿತ್ತು ಹೋಗಿವೆ.
ಪ್ರಸ್ತುತ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ಮುಂತಾದ ಬೆಳೆಗಳು ಕಟಾವು ಹಂತ ಸಮೀಪಿಸುತ್ತಿದೆ. ರಸ್ತೆಗಳು, ಸೇತುವೆಗಳು ಕುಸಿದ ಕಾರಣ ಯಾವುದೇ ರೀತಿಯ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಂತಾಗಿ, ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಭರಮಸಮುದ್ರ ಗ್ರಾಮದ ಸಮೀಪ ನೂರಾರು ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ಹಳ್ಳದ ರಭಸಕ್ಕೆ ಕೊಚ್ಚಿಕೊಂಡು ಹೋಗಿದೆ.
‘ತೀವ್ರ ಮಳೆ ಬಿದ್ದಿದ್ದರಿಂದಾಗಿ ದೊಡ್ಡ ಪ್ರಮಾಣದಲ್ಲಿ ಹಳ್ಳಗಳು ಹರಿದು ಭರಮಸಮುದ್ರ ಗ್ರಾಮ ಮತ್ತು ಉದ್ದಗಟ್ಟದ ನೂರಾರು ರೈತರ ಹೊಲಗಳಿಗೆ ತೆರಳುವ ರಸ್ತೆ ಮತ್ತು ಸೇತುವೆ ಕೊಚ್ಚಿಕೊಂಡು ಹೋಗಿದೆ. ಸೇತುವೆಗಳಿಗೆ ಹಾಕಿರುವ ಸಿಮೆಂಟ್ ಪೈಪ್‌ಗಳು ಕಿತ್ತುಹೋಗಿವೆ. ಹೊಲದಲ್ಲಿರುವ ಬೆಳೆಗಳು ಕಟಾವಾದ ನಂತರ ಕೃಷಿ ಉತ್ಪನ್ನಗಳನ್ನು ಹೊರಗೆ ಸಾಗಿಸುವುದು ಕಷ್ಟವಾಗುತ್ತದೆ. ಕೂಡಲೇ ತಾಲ್ಲೂಕು ಆಡಳಿತ ಸೇತುವೆ ಮತ್ತು ರಸ್ತೆಗಳನ್ನು ದುರಸ್ತಿ ಮಾಡಬೇಕು’ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ರೈತ ಹರೀಶ್ ರೆಡ್ಡಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.