ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆದ್ದಾರಿ ಪಕ್ಕದಲ್ಲಿ ಔಷಧಿ ಪತ್ತೆ: ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ

Published 13 ಮೇ 2024, 4:48 IST
Last Updated 13 ಮೇ 2024, 4:48 IST
ಅಕ್ಷರ ಗಾತ್ರ

ಹರಿಹರ: ನಗರದ ಹೊರವಲಯದ ಹೆದ್ದಾರಿ ಪಕ್ಕದಲ್ಲಿ ನಿರುಪಯುಕ್ತ ಔಷಧಿಗಳನ್ನು ಎಸೆದಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ದಿಯನ್ನು ಗಮನಿಸಿ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಅಧಿಕಾರಿಗಳ ತಂಡ ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

‘ಕಂಡಕಂಡಲ್ಲಿ ಔಷಧಿ ತ್ಯಾಜ್ಯ’ ಎಂಬ ಶೀರ್ಷಿಕೆಯಲ್ಲಿ ಮೇ 9ರಂದು ವರದಿ ಪ್ರಕಟವಾಗಿತ್ತು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಬ್ದುಲ್ ಖಾದರ್ ನೇತೃತ್ವದ ತಂಡವು ದಾವಣಗೆರೆ ಮಾರ್ಗದ ಬೀರೂರು-ಸಮ್ಮಸಗಿ ಹೆದ್ದಾರಿ ಪಕ್ಕದ ಸುಮಾರು ಒಂದು ಕಿ.ಮೀ. ಉದ್ದಕ್ಕೂ ಎಸೆಯಲಾಗಿದ್ದ ಗುಳಿಗೆ, ಸ್ಯಾಚೆಟ್, ಬಾಟಲಿಗಳನ್ನು ಪರಿಶೀಲಿಸಿತು. 

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಡಾ.ಅಬ್ದುಲ್ ಖಾದರ್, ‘ಹೊರವಲಯದಲ್ಲಿ ರಾತ್ರಿ ಸಮಯದಲ್ಲಿ ಯಾರಿಗೂ ತಿಳಿಯುವುದಿಲ್ಲ ಎಂದು ಭಾವಿಸಿ, ಯಾರೋ ಔಷಧಿಗಳನ್ನು ಎಸೆದು ಹೋಗುತ್ತಿದ್ದಾರೆ. ಕ್ಲಿನಿಕ್, ನರ್ಸಿಂಗ್ ಹೋಂ, ಆಸ್ಪತ್ರೆ  ಯಾವುದೇ ಇರಲಿ, ಅಲ್ಲಿನ ಅವಧಿ ಮುಗಿದ ಔಷಧಿ, ಶಸ್ತ್ರಚಿಕಿತ್ಸೆ ಅಥವಾ ಹೆರಿಗೆಯ ವೇಳೆ ಬರುವ ಪ್ಲಾಸ್ಮಾ, ಇತರೆ ಜೈವಿಕ  ತ್ಯಾಜ್ಯವನ್ನು ಕಡ್ಡಾಯವಾಗಿ ಬಯೋ ಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ಪ್ಲಾಂಟ್‌ನ ಸಂಗ್ರಹದ ಟಿಪ್ಪರ್‌ಗೆ ಹಾಕಬೇಕು’ ಎಂದರು. 

ಯಾವುದೇ ಖಾಸಗಿ ಅಥವಾ ಸರ್ಕಾರಿ ಕ್ಲಿನಿಕ್, ನರ್ಸಿಂಗ್ ಹೋಂ, ಆಸ್ಪತ್ರೆಯವರು ವೈದ್ಯಕೀಯ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಹಾಕುವ ಕುರಿತು ಒಡಂಬಡಿಕೆ ಮಾಡಿಕೊಳ್ಳದಿದ್ದರೆ ಅಂತಹ ವೈದ್ಯಕೀಯ ಸಂಸ್ಥೆಯ ಪರವಾನಗಿ ರದ್ದು ಮಾಡಿ ಕಾನೂನು ಕ್ರಮಕೈಗೊಳ್ಳುವ ಅವಕಾಶವಿದೆ ಎಂದರು. 

ರಸ್ತೆ ಬದಿ ಎಸೆದಿರುವ ಔಷಧಿಗಳ ಕೆಲವು ಮಾದರಿಗಳನ್ನು ಸಂಗ್ರಹಿಸಿದ್ದೇವೆ. ಈ ಕುರಿತು ಸಹಾಯಕ ಔಷಧಿ ನಿಯಂತ್ರಕರಿಗೆ ಪತ್ರ ಬರೆದು, ಈ ಔಷಧಿ ಯಾರಿಂದ ಸರಬರಾಜು ಆಗಿದೆ, ಯಾರು ಖರೀದಿ ಮಾಡಿದ್ದಾರೆಂಬ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆಂದು ಎಂದು ತಿಳಿಸಿದರು.

ತಂಡದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಉಮ್ಮಣ್ಣ, ಆರೋಗ್ಯ ನಿರೀಕ್ಷಣಾಧಿಕಾರಿ ದಾದಾಪೀರ್, ಪ್ರಾಥಮಿಕ ಸುರಕ್ಷಣಾಧಿಕಾರಿ ಸುಧಾ ಸುಲಾಖೆ ಇದ್ದರು.

ಹರಿಹರ ಹೊರವಲಯದ ಬೀರೂರು-ಸಮ್ಮಸಗಿ ಹೆದ್ದಾರಿ ಪಕ್ಕದಲ್ಲಿ ಎಸೆದಿರುವ ನಿರುಪಯುಕ್ತ ಔಷಧಿಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ ಭಾನುವಾರ ಪರಿಶೀಲಿಸಿದರು
ಹರಿಹರ ಹೊರವಲಯದ ಬೀರೂರು-ಸಮ್ಮಸಗಿ ಹೆದ್ದಾರಿ ಪಕ್ಕದಲ್ಲಿ ಎಸೆದಿರುವ ನಿರುಪಯುಕ್ತ ಔಷಧಿಗಳನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಿಬ್ಬಂದಿ ಭಾನುವಾರ ಪರಿಶೀಲಿಸಿದರು
ಹೀಗೆ ಎಸೆದ ಔಷಧಿಗಳನ್ನು ಪ್ರಾಣಿ ಪಕ್ಷಿ ಕ್ರಿಮಿ ಕೀಟಗಳು ಅಕಸ್ಮಿಕವಾಗಿ ಸೇವನೆ ಮಾಡಿದರೆ ಅವುಗಳ ಪ್ರಾಣಕ್ಕೆ ತೊಂದರೆಯಾಗುತ್ತದೆ ಹೀಗೆ ಔಷಧಿಗಳನ್ನು ಎಸೆಯುವದರ ಬದಲು ಜೈವಿಕ ವೈದ್ಯಕೀಯ ತ್ಯಾಜ್ಯ ಟ್ರೀಟ್‌ಮೆಂಟ್ ಪ್ಲಾಂಟ್‌ನ ಗಾಡಿಗೆ ಹಾಕಬೇಕು
ಡಾ.ಅಬ್ದುಲ್ ಖಾದರ್ ತಾಲ್ಲೂಕು ಆರೋಗ್ಯಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT