ದಾವಣಗೆರೆ: ಬಂಜಾರ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಕೆ.ರೂಪ್ಲಾನಾಯ್ಕ್ ಅವರ ಸಮಾಜಸೇವೆಯನ್ನು ಗುರುತಿಸಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಚೀರಾನಾಯ್ಕ ಹಾಗೂ ಲಕ್ಷ್ಮಿಬಾಯಿ ಅವರ ಪುತ್ರರಾದ ಇವರು 1919ರಲ್ಲಿ ಜನಿಸಿದರು. ಆರಂಭದಲ್ಲಿ ಎಂಜಿನಿಯರ್ ಆಗಿದ್ದ ಇವರು ಲಕ್ಕವಳ್ಳಿ ಡ್ಯಾಮ್ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂತ ಸೇವಾಲಾಲ್ ಅವರ ಜನ್ಮಸ್ಥಳವಾದ ಸೂರಗೊಂಡನಕೊಪ್ಪದ ಅಭಿವೃದ್ಧಿಗೆ ಕಾರಣಕರ್ತರು. ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಸ್ಥಾನದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆರಂಭದಲ್ಲಿ ಸೂರನಗೊಂಡನಕೊಪ್ಪಕ್ಕೆ ಕಲ್ಲು ಮಣ್ಣಿನ ದಾರಿಯಲ್ಲಿ ತೆರಳಬೇಕಿತ್ತು. ಈಗ 40 ಅಡಿ ರಸ್ತೆ ನಿರ್ಮಾಣವಾಗಿದ್ದು, ಅದರಲ್ಲಿ ಮುಖ್ಯ ಪಾತ್ರ ವಹಿಸಿದ್ದರು. 35 ವರ್ಷಗಳ ಕಾಲ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದರು. ಬೆಂಗಳೂರಿನ ರಾಜಾಜಿನಗರದಲ್ಲಿ ಪ್ರಪ್ರಥಮವಾಗಿ ಸೇವಾಲಾಲ್ ನರ್ಸಿಂಗ್ ಹೋಮ್ ಕಟ್ಟಿಸಿ ಬಂಜಾರರಿಗೆ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸಿದರು. ಅಲ್ಲದೇ ಬಂಜಾರರ ದಂತ ವೈದ್ಯಕೀಯ ಕಾಲೇಜು ಮತ್ತು ಈಗಿನ ಬಂಜಾರ ಭವನವನ್ನು ಬಿಬಿಎಂಪಿ ವತಿಯಿಂದ ಮುಂಜೂರು ಮಾಡಿಸುವುಲ್ಲಿ ಮುಂಚೂಣಿಯಲ್ಲಿದ್ದರು.
ಕರ್ನಾಟಕ ಬಂಜಾರ ನೌಕರರ ಸಾಂಸ್ಕೃತಿಕ ಮತ್ತು ಕ್ಷೇಮಾಭಿವೃದ್ಧಿ ಸಂಘದಲ್ಲಿ ಅವಿರತವಾಗಿ ದುಡಿದವರು. 35 ವರ್ಷಗಳ ಸೇವೆಯನ್ನು ಗುರುತಿಸಿ ಶಿವಮೊಗ್ಗ ಬಂಜಾರ ಸಮಾಜವು ಇವರಿಗೆ ಬಂಜಾರ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.