ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐ ಕಾರ್ಯಕರ್ತ ಶ್ರೀಧರ ಹತ್ಯೆ ಪ್ರಕರಣ: ಆರು ಜನರ ಬಂಧನ

Last Updated 19 ಜುಲೈ 2021, 5:51 IST
ಅಕ್ಷರ ಗಾತ್ರ

ಹರಪನಹಳ್ಳಿ: ಆರ್‌ಟಿಐ ಕಾರ್ಯಕರ್ತ ಟಿ. ಶ್ರೀಧರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಮಾಜಿ ಅಧ್ಯಕ್ಷ ಒಳಗೊಂಡು ಆರು ಜನ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಭಾನುವಾರ ಸಂಜೆ ನ್ಯಾಯಾಧೀಶರ ಎದುರು ಹಾಜರುಪಡಿಸಿದರು.

ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಅವರ ಆಪ್ತ ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್, ರಾಯದುರ್ಗದ ವಾಗೀಶ್, ಹಳೆ ಬ್ಯಾಡರ ಹನುಮಂತ. ಯಲ್ಲಪ್ಪ, ಮ್ಯಾಕಿ ಹನುಮಂತ ಮತ್ತು ರಾಯದುರ್ಗದ ಹನುಮಂತ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಹೂವಿನ ಹಡಗಲಿ ಜೈಲಿಗೆ ಕಳುಹಿಸಲಾಗಿದೆ.

ಭೂ ಕಬಳಿಕೆ ಮತ್ತು ಅಕ್ರಮಗಳ ಬಗ್ಗೆ ಮೃತ ಶ್ರೀಧರ್ ಅವರು, ಆರೋಪಿ ಎಚ್.ಕೆ. ಹಾಲೇಶ್ ವಿರುದ್ಧ ಅನೇಕ ಪ್ರಕರಣಗಳನ್ನು ದಾಖಲಿಸಿದ್ದರು. ಇದೇ ದ್ವೇಷದೊಂದಿಗೆ ಆರೋಪಿ ಎಚ್‌.ಕೆ. ಹಾಲೇಶ್‌ ಅವರು ಶ್ರೀಧರ್‌ ಅವರ ವಿರುದ್ಧ ವೈಷಮ್ಯ ಹೊಂದಿರುವವರನ್ನು ಒಟ್ಟುಗೂಡಿಸಿ ಕೊಲೆಗೆ ಒಳಸಂಚು ರೂಪಿಸಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

‘ಶ್ರೀಧರ್ ಹತ್ಯೆ ಪ್ರಕರಣ ಬೇಧಿಸಲು ಮೂರು ತಂಡಗಳನ್ನು ರಚಿಸಲಾಗಿತ್ತು. ಕೃತ್ಯಕ್ಕೆ ಬಳಸಿದ್ದ ಆಯುಧ, ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಕರಣ ಭೇದಿಸಿರುವ ಮೂರೂ ತಂಡಗಳ ಸಿಬ್ಬಂದಿಗೆಸೈದುಲು ಅಡಾವತ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಐಜಿಪಿ ಮನೀಶ್ ಖರ್ಬೇಕರ್, ಬಳ್ಳಾರಿ ಎಸ್‌ಪಿ ಸೈದುಲು ಅಡಾವತ್, ಹೆಚ್ಚುವರಿ ಎಸ್‌ಪಿ ಟಿ.ಎಸ್. ಲಾವಣ್ಯ, ರಾಯಚೂರು ಹೆಚ್ಚುವರಿ ಎಸ್‌ಪಿ ಹರೀಶ್ ಬಾಬು ಅವರ ಮಾರ್ಗದರ್ಶನದಲ್ಲಿ ಹರಪನಹಳ್ಳಿ ಡಿವೈಎಸ್‌ಪಿ ವಿ.ಎಸ್. ಹಾಲಮೂರ್ತಿ ರಾವ್, ಸಿಪಿಐ ನಾಗರಾಜ್ ಎಂ. ಕಮ್ಮಾರ್, ಪಿಎಸ್ಐಗಳಾದ ಸಿ. ಪ್ರಕಾಶ್, ಕಿರಣ್ ಕುಮಾರ್, ಟಿ. ಗುರುರಾಜ್, ಟಿ.ಜಿ. ನಾಗರಾಜ್ ಅವರನ್ನು ಒಳಗೊಂಡು ಮೂರು ತಂಡ ರಚಿಸಲಾಗಿತ್ತು.

ಶ್ರೀಧರ್ ಹತ್ಯೆ ಪ್ರಕರಣದ ಕಾರಣ ಎಡಿಬಿ ಕಾಲೇಜು ಆವರಣದಲ್ಲಿನ ಪ್ರಾಥಮಿಕ, ಪ್ರೌಢ, ಪಿಯು ಕಾಲೇಜು ಮತ್ತು ಪದವಿ ಕಾಲೇಜುಗಳಲ್ಲಿ ನಡೆಯುತ್ತಿದ್ದ ಆನ್‌ಲೈನ್‌ ತರಗತಿಗಳಿಗೆ ರಜೆ ಘೋಷಿಸಲಾಗಿದೆ. ಕ್ಯಾಂಟೀನ್‌ಗೂ ಬೀಗ ಹಾಕಲಾಗಿದೆ.

ಎಡಿಬಿ ಕಾಲೇಜು ಆವರಣದ ಸೈಕಲ್ ಪಾರ್ಕಿಂಗ್ ಸ್ಥಳದಲ್ಲಿ ತಾತ್ಕಾಲಿಕವಾಗಿ ತೆರೆದಿದ್ದ ಕ್ಯಾಂಟೀನ್ ಹಿಂಭಾಗದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದಶ್ರೀಧರ್ ಅವರನ್ನು ಜುಲೈ 15ರ ಸಂಜೆ 6.20ರ ವೇಳೆಗೆ ಮಾರಕಾಸ್ತ್ರಗಳೊಂದಿಗೆ ಬಂದ ನಾಲ್ವರು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT