ಶುಕ್ರವಾರ, ಆಗಸ್ಟ್ 6, 2021
21 °C
ಐಜಿಪಿ ಮನೀಷ್ ಮಾಹಿತಿ

ಆರ್‌ಟಿಐ ಕಾರ್ಯಕರ್ತ ಶ್ರೀಧರ್ ಹತ್ಯೆ ಪ್ರಕರಣ: ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ಪಟ್ಟಣದಲ್ಲಿ ಗುರುವಾರ ಸಂಜೆ ಹತ್ಯೆಗೀಡಾದ ಆರ್‌ಟಿಐ ಕಾರ್ಯಕರ್ತ ಟಿ. ಶ್ರೀಧರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಶುಕ್ರವಾರ ಬೆಳಿಗ್ಗೆ ಹಸ್ತಾಂತರಿಸಲಾಯಿತು.

ಬಳ್ಳಾರಿಯಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಗುರುವಾರ ರಾತ್ರಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಪಟ್ಟಣದಲ್ಲಿಯೇ ವಾಸ್ತವ್ಯ ಹೂಡಿದ್ದ ಬಳ್ಳಾರಿ ಉಪ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಎಸ್. ಲಾವಣ್ಯ ಅವರ ತಂಡ ಆರೋಪಿಗಳ ಪತ್ತೆಗೆ ವಿವಿಧ ತಂಡಗಳನ್ನು ರಚಿಸಿದೆ. ಕಾಲೇಜು ಕ್ಯಾಂಟೀನ್ ಮಾಲೀಕ ಚನ್ನವೀರನಗೌಡ ಅವರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಿತು.

ಕಾಲೇಜಿನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ, ವಿವಿಧ ರಸ್ತೆಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ವಿಡಿಯೊ ಫುಟೇಜ್‌ಗಳನ್ನು ಸಂಗ್ರಹಿಸಿದ್ದು, ಮೃತ ಶ್ರೀಧರ್ ಅವರ ಪತ್ನಿ ನೀಡಿದ ದೂರು ಆಧರಿಸಿ ಮೊಬೈಲ್ ಟ್ರೇಸಿಂಗ್ ಮೂಲಕ ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಬಳ್ಳಾರಿ ವಲಯದ ಐಜಿಪಿ ಮನೀಷ್ ಕರ್ವೀಕರ್ ಮಾತನಾಡಿ, ‘ಹತ್ಯೆ ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದರು.

ಬಳ್ಳಾರಿ ಗುಪ್ತಚರ ಇಲಾಖೆಯ ಡಿವೈಎಸ್‌ಪಿ ಬಿ.ಎಸ್. ತಳವಾರ್, ಹರಪನಹಳ್ಳಿ ಉಪವಿಭಾಗದ ಡಿವೈಎಸ್‌ಪಿ ವಿ.ಎಸ್. ಹಾಲಮೂರ್ತಿ ರಾವ್, ಸಿಪಿಐ ನಾಗೇಶ್ ಎಂ. ಕಮ್ಮಾರ್, ಪಿಎಸ್ಐ ಪ್ರಕಾಶ್, ಕಿರಣ್, ನಾಗರಾಜ್ ಇದ್ದರು.

ವಾಲ್ಮೀಕಿ ನಗರದ ರುದ್ರಭೂಮಿಯಲ್ಲಿ ಮೃತ ಶ್ರೀಧರ್ ಅಂತ್ಯಕ್ರಿಯೆ ನೆರವೇರಿತು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಪತ್ನಿಯಿಂದ ದೂರು ದಾಖಲು

ಶ್ರೀಧರ್ ಅವರ ಹತ್ಯೆ ಸಂಬಂಧ ಪತ್ನಿ ಪಿ.ಎಂ. ಶಿಲ್ಪ ಅವರು ಹರಪನಹಳ್ಳಿ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ನಾನು ಕರ್ತವ್ಯದ ನಿಮಿತ್ತ ಉಚ್ಚಂಗಿದುರ್ಗದಲ್ಲಿದ್ದಾಗ ನನ್ನ ಪತಿ ಜುಲೈ 13ರಂದು ಕರೆ ಮಾಡಿದ್ದರು. ಪಿ.ಟಿ. ಪರಮೇಶ್ವರನಾಯ್ಕ ಮತ್ತು ಅವರ ಮಗ ಪಿ.ಟಿ. ಭರತ್ ವಿರುದ್ಧ ಕೇಸು ದಾಖಲಿಸಿದ್ದೇನೆ. ಎಚ್.ಕೆ. ಹಾಲೇಶ್ ಮತ್ತು ಅವರ ಮಗನ ಮೇಲೆಯೂ ದೂರು ದಾಖಲಿಸಿದ್ದು, ಅವರಿಂದಲೂ ಜೀವ ಬೆದರಿಕೆ ಇರುವುದಾಗಿ ಹೇಳಿದ್ದರು’ ಎಂದು ಶಿಲ್ಪ ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಜುಲೈ 15ರಂದು ರಾತ್ರಿ ನನ್ನ ಪತಿಯನ್ನು ಎಡಿಬಿ ಕಾಲೇಜಿನ ಹೋಟೆಲ್‌ ಬಳಿ ಹತ್ಯೆ ಮಾಡಲಾಗಿದೆ ಎನ್ನುವ ವಿಷಯ ತಿಳಿದು ಸ್ಥಳಕ್ಕೆ ಹೋಗಿ ಹೋಟೆಲ್ ಮಾಲೀಕ ಚನ್ನವೀರನಗೌಡ ಅವರನ್ನು ವಿಚಾರಿಸಿದಾಗ, ಆರ್. ವಾಗೀಶ್ ಮತ್ತು ಆತನ ಜೊತೆಯಲ್ಲಿ ಬಂದಿದ್ದ 4 ಜನರು ಕಬ್ಬಿಣದ ರಾಡು, ಸಿಮೆಂಟ್ ಇಟ್ಟಿಗೆ ಹಿಡಿದುಕೊಂಡು ಚಹಾ ಕುಡಿಯುತ್ತಿದ್ದ ನನ್ನ ಪತಿಯನ್ನು ಮನಬಂದಂತೆ ಹೊಡೆದು ಸಾಯಿಸಿ ಪರಾರಿಯಾಗಿದ್ದಾಗಿ ತಿಳಿಸಿದರು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು