ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಯುವ ಕಲಾವಿದರನ್ನು ಪರಿಹಾರ ವಂಚಿತರನ್ನಾಗಿಸಿದ ನಿಯಮ

ಒಟ್ಟು ಕಲಾವಿದರಲ್ಲಿ ಅರ್ಧದಷ್ಟು ಯುವಜನರೇ ಇದ್ದಾರೆ * ವಯಸ್ಸಿನ ಮಿತಿ ತೆಗೆಯಲು ಆಗ್ರಹ
Last Updated 3 ಜೂನ್ 2021, 5:22 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಈಡಾದವರ ಖಾತೆಗೆ ₹ 3 ಸಾವಿರ ಹಾಕಲು ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಅದರಲ್ಲಿ ಕಲಾವಿದರೂ ಒಳಗೊಂಡಿದ್ದಾರೆ. ಆದರೆ ಕಲಾವಿದರಿಗೆ 35 ವರ್ಷ ದಾಟಿರಬೇಕು ಎಂಬ ಷರತ್ತು ವಿಧಿಸಿರುವುದರಿಂದ ವೃತ್ತಿ ರಂಗಭೂಮಿಯಲ್ಲಿರುವ ಅರ್ಧದಷ್ಟು ಕಲಾವಿದರು ಪರಿಹಾರ ವಂಚಿತರಾಗಿದ್ದಾರೆ.

ರಾಜ್ಯದಲ್ಲಿ 25 ನಾಟಕ ಕಂಪನಿಗಳು ಇವೆ. 700ರಷ್ಟು ಮಂದಿ ನಿತ್ಯ ಪಾತ್ರ ಮಾಡುವ ಕಲಾವಿದರು ಇದ್ದಾರೆ. ಅದರಲ್ಲಿ ಅರ್ಧದಷ್ಟು ನಟ, ನಟಿಯರಿಗೆ 35 ವರ್ಷ ದಾಟಿಲ್ಲ. ಇವರಲ್ಲದೇ ತಂತ್ರಜ್ಞರು, ಸಂಗೀತಗಾರರು, ರಂಗ ಶಾಲೆಗಳ ಶಿಕ್ಷಕರಲ್ಲಿ ಹೆಚ್ಚಿನವರು ಯುವಜನರೇ ಆಗಿದ್ದಾರೆ.

‘ವೃತ್ತಿ ರಂಗಭೂಮಿ ಅಂದರೆ ಹವ್ಯಾಸಿ ರಂಗಭೂಮಿಗಳಂತಲ್ಲ. ಕಲಾವಿದರ ಮಕ್ಕಳೇ, ಮಾಲೀಕರ ಮಕ್ಕಳೇ ಕಲಾವಿದರಾಗುತ್ತಾರೆ. 10–12ನೇ ವಯಸ್ಸಿಗೆ ಬಣ್ಣ ಹಚ್ಚಲು ಆರಂಭಿಸಿರುತ್ತಾರೆ. 20 ವರ್ಷ ದಾಟುವ ಹೊತ್ತಿಗೆ ಪ್ರಬುದ್ಧ ಕಲಾವಿದರಾಗಿರುತ್ತಾರೆ. ಆದರೂ ವಯಸ್ಸಿನ ಮಿತಿ ಯಾಕೆ ಮಾಡಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಸಂಚಾರಿ ಕೆ.ಬಿ.ಆರ್‌. ಡ್ರಾಮ ಕಂಪನಿ ಮಾಲೀಕ ಚಿಂದೋಡಿ ಶಂಭುಲಿಂಗಪ್ಪ ‘ಪ್ರಜಾವಾಣಿ’ ಜತೆ ಸಮಸ್ಯೆ ಹೇಳಿಕೊಂಡರು.

‘ಯುವಕಲಾವಿದರೇ ವೃತ್ತಿ ರಂಗಭೂಮಿಯ ಆಧಾರ ಸ್ತಂಭಗಳಾಗಿದ್ದಾರೆ. ಕೊರೊನಾದಿಂದಾಗಿ ಕಳೆದ ವರ್ಷ ಎಂಟು ತಿಂಗಳು ನಾಟಕ ಇಲ್ಲದಂತಾಗಿತ್ತು. ಅಂಥ ಸಂಕಷ್ಟದ ಕಾಲದಲ್ಲಿ ₹ 10 ನೀಡುವಲ್ಲಿ ₹ 1 ನೀಡಿ ಹೇಗೋ ಕಂಪನಿಗಳನ್ನು, ಕಲಾವಿದರನ್ನು ಉಳಿಸಿಕೊಂಡಿದ್ದೆವು. ಮತ್ತೆ ಚೇತರಿಸಿಕೊಳ್ಳುವ ಹೊತ್ತಿಗೆ ಎರಡನೇ ಅಲೆ ಬಂದಿದೆ. ಯುವ ಕಲಾವಿದರೂ ಸೇರಿ ಎಲ್ಲರೂ ಬೀದಿಗೆ ಬಿದ್ದಿದ್ದಾರೆ. ಇಂಥ ಸಮಯದಲ್ಲಿ ವಯಸ್ಸಿನ ತಾರತಮ್ಯ ಮಾಡಬಾರದು’ ಎಂಬುದು ನಾಟಕ ಕಂಪನಿ ಮಾಲೀಕರ ಸಂಘದ ಕಾರ್ಯದರ್ಶಿಯೂ ಆಗಿರುವ ಶಂಭುಲಿಂಗಪ್ಪ ಅವರ ಒತ್ತಾಯ.

ವೃತ್ತಿ ರಂಗಭೂಮಿಯ ಜತೆಗೆ ಸುಗಮ ಸಂಗೀತ, ಜನಪದ ಸಂಗೀತ, ಭರತನಾಟ್ಯ, ಆರ್ಕೆಸ್ಟ್ರಾ ಕಲಾವಿದರಿಗೂ ತೊಂದರೆಯಾಗಿದೆ. ಅಧಿಕಾರಿಗಳು, ಅಕಾಡೆಮಿ ಅಧ್ಯಕ್ಷರು, ನಿರ್ದೇಶಕರು ಎಲ್ಲರೂ ಇಂಥ ನಿಯಮ ಮಾಡುವ ಮೊದಲು ಯೋಚಿಸಬೇಕಿತ್ತು. ಕೂಡಲೇ ಈ ನಿಯಮವನ್ನು ತೆಗೆಯಬೇಕು. ರಂಗಭೂಮಿಯಲ್ಲಿ ಕೆಲಸ ಮಾಡುವ 18 ವರ್ಷ ದಾಟಿರುವ ಎಲ್ಲರಿಗೂ ₹ 3 ಸಾವಿರ ನೀಡಬೇಕು. ಆದರೂ ಷರತ್ತು ವಿಧಿಸಲೇಬೇಕು ಎಂದಿದ್ದರೆ 25 ವರ್ಷಕ್ಕೆ ನಿಗದಿ ಮಾಡಿ ಎಂದು ಶಂಭುಲಿಂಗಪ್ಪ ಮನವಿ ಮಾಡಿದ್ದಾರೆ.

ಅರ್ಜಿ ಭರ್ತಿ ಮಾಡಲು ಜೂನ್‌ 5 ಕೊನೇ ದಿನ ಎಂದು ನಿಗದಿಪಡಿಸಲಾಗಿದೆ. ಲಾಕ್‌ಡೌನ್‌ ಇರುವುದರಿಂದ ಸೇವಾ ಸಿಂಧು ಅಂಗಡಿಗಳು ಮುಚ್ಚಿವೆ. ಎಲ್ಲ ಗಣಕೀಕೃತ ಅಂಗಡಿಗಳು ಕೂಡ ತೆರೆದಿಲ್ಲ. ಹಾಗಾಗಿ ಈ ಅವಧಿಯನ್ನು ಕೂಡ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT