ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ಪೀಠದಿಂದ ನಿವೃತ್ತಿ ಘೋಷಿಸಿ, ಉತ್ತರಾಧಿಕಾರಿ ನೇಮಿಸಿ'

ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಸಮುದಾಯದ ಮುಖಂಡರ ಆಗ್ರಹ
Published : 4 ಆಗಸ್ಟ್ 2024, 16:21 IST
Last Updated : 4 ಆಗಸ್ಟ್ 2024, 16:21 IST
ಫಾಲೋ ಮಾಡಿ
Comments

ದಾವಣಗೆರೆ: ‘ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠದ ಪೀಠ ತ್ಯಾಗ ಮಾಡುವ ಮೂಲಕ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ನಿವೃತ್ತಿ ಘೋಷಿಸಿ, ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸಬೇಕು’ ಎಂದು ಸಾದರ ಲಿಂಗಾಯತ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.

ನಗರದಲ್ಲಿ ಭಾನುವಾರ ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ‘ತರಳಬಾಳು ಮಠದ ಸದ್ಭಕ್ತರ ಸಭೆಯಲ್ಲಿ ಸಮುದಾಯದ ಶಾಸಕರು, ಮಾಜಿ ಸಚಿವರು, ಮುಖಂಡರು ಈ ಕುರಿತು ವಿಸ್ತೃತ ಚರ್ಚೆ ನಡೆಸಿದರಲ್ಲದೇ, ‘ಶ್ರೀಗಳು ತಾವೇ ಸಿದ್ಧಪಡಿಸಿರುವ ಏಕವ್ಯಕ್ತಿ ಡೀಡ್‌ ರದ್ದುಗೊಳಿಸಿ, ಈ ಹಿಂದಿನ ಪೀಠಾಧ್ಯಕ್ಷ ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ರಚಿಸಿದ್ದ ಬೈಲಾವನ್ನು ಯಥಾವತ್ತಾಗಿ ಜಾರಿಗೊಳಿಸಬೇಕು’ ಎಂಬ ನಿರ್ಣಯವನ್ನು ಒಮ್ಮತದಿಂದ ಅಂಗೀಕರಿಸಿದರು.

‘ಹೊಸದುರ್ಗ ತಾಲ್ಲೂಕಿನಲ್ಲಿರುವ ಸಾಣೇಹಳ್ಳಿಯಲ್ಲಿರುವ ಪೀಠದ ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರಿಗೂ ವಯಸ್ಸಾಗಿದ್ದು, ಅವರೂ ನಿವೃತ್ತಿ ಘೋಷಿಸಿ ಅಲ್ಲಿಗೂ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕು. ಸಾಧು ಸದ್ಧರ್ಮ ವೀರಶೈವ ಸಂಘವು ಸ್ಥಗಿತಗೊಂಡಿದ್ದು, ಹೊಸದಾಗಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು’ ಎಂದೂ ಕೋರಲಾಯಿತು.

‘ಹಿಂದಿನ ಪೀಠಾಧ್ಯಕ್ಷ ಜಗದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಕಾಲದಲ್ಲಿ ಸಿರಿಗೆರೆ ಮಠ  ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಛಾಪು ಮೂಡಿಸಿತ್ತು. ಈಗ ಅವೆಲ್ಲವೂ ಕಣ್ಮರೆಯಾಗಿದ್ದು ವಿಷಾದದ ಸಂಗತಿ. ಮಠವನ್ನು ಹಾಳು ಮಾಡಲು ಬಿಡುವುದಿಲ್ಲ’ ಎಂದು ಸಮುದಾಯದ ಮುಖಂಡರು ಸಭೆಯಲ್ಲಿ ಎಚ್ಚರಿಸಿದರು.

‘ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಠದ ಆಡಳಿತದಲ್ಲಿ ಬದಲಾವಣೆ ಮಾಡಲು ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನಿಸುವವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ. ಮಠದ ಸ್ವಾಮೀಜಿಯಾದವರು ಹೀಗೆ ಮಾಡಲು ಸಾಧ್ಯವೇ?’ ಎಂದು ಮುಖಂಡರು ಪ್ರಶ್ನಿಸಿದರು.

ಸಮುದಾಯದ ಮುಖಂಡರಾದ ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ, ಬಿ.ಸಿ. ಪಾಟೀಲ್, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಸುರೇಶ್ ಪಾಟೀಲ್, ಚಂದ್ರಶೇಖರಪ್ಪ, ಟಿ.ಗುರುಸಿದ್ದನಗೌಡ, ಶಿವಮೊಗ್ಗದ ರುದ್ರೇಗೌಡ, ಮುಖಂಡರಾದ ಬೆನಕಪ್ಪ, ಮಾಡಾಳ್ ಮಲ್ಲಿಕಾರ್ಜುನ್, ಆನಗೋಡು ನಂಜುಂಡಪ್ಪ, ಎಚ್.ಎಂ. ಓಂಕಾರಪ್ಪ, ಮಹೇಶ್ ಚಟ್ನಹಳ್ಳಿ, ಜೆ.ಆರ್. ಷಣ್ಮುಖಪ್ಪ, ನಿವೃತ್ತ ಕುಲಪತಿ ಕೆ.ಬಿ. ಸಿದ್ದಪ್ಪ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಡಿ.ಸಿ. ರಾಜಪ್ಪ, ಷಣ್ಮುಖಪ್ಪ, ಶ್ರೀನಿವಾಸ ಮೆಳ್ಳೇಕಟ್ಟೆ, ಸಂತೋಷ್ ಮೆಳ್ಳೇಕಟ್ಟೆ, ನಾಗರಾಜ ಬಣಕಾರ ಕುರುಡಿ, ವಿಶ್ವನಾಥ ಮಂಡಲೂರು, ಚೇತನ್ ಎಲೇಬೇತೂರು, ಬಸವಲಿಂಗಪ್ಪ ಕಲಪನಹಳ್ಳಿ, ನಾಗರಾಜ ಪಾಲಗಟ್ಟೆ, ಹಿರೇಮೇಗಳಗೇರಿ ಟಿ.ಎಂ. ಶಿವಮೂರ್ತಯ್ಯ ಇನ್ನಿತರರು ಉಪಸ್ಥಿತರಿದ್ದರು.

ದಾವಣಗೆರೆಯಲ್ಲಿ ಭಾನುವಾರ ನಡೆದ ಸಿರಿಗೆರೆ ತರಳಬಾಳು ಮಠದ ಭಕ್ತರ ಸಭೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದರು. ಸಮುದಾಯದ ಮುಖಂಡರಾದ ಅಣಬೇರು ರಾಜಣ್ಣ ಬಿ.ಸಿ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು– ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ಭಾನುವಾರ ನಡೆದ ಸಿರಿಗೆರೆ ತರಳಬಾಳು ಮಠದ ಭಕ್ತರ ಸಭೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದರು. ಸಮುದಾಯದ ಮುಖಂಡರಾದ ಅಣಬೇರು ರಾಜಣ್ಣ ಬಿ.ಸಿ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು– ಪ್ರಜಾವಾಣಿ ಚಿತ್ರ

ಶ್ರೀಗಳೊಂದಿಗೆ ‘ಸಮನ್ವಯ ಸಮಿತಿ’ ಸಭೆ 18ರಂದು ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಶ್ರೀಗಳೊಂದಿಗೆ ಚರ್ಚೆ ನಡೆಸಲು 25 ಸದಸ್ಯರನ್ನೊಳಗೊಂಡ ಸಮನ್ವಯ ಸಮಿತಿ ರಚಿಸಲಾಯಿತು.  ‘ಸಮಿತಿಯ ಸದಸ್ಯರು ಆಗಸ್ಟ್ 18ರಂದು ಬೆಂಗಳೂರಿನಲ್ಲಿ ಸ್ವಾಮೀಜಿ ಜೊತೆ ಸಭೆ ನಡೆಸಲಿದ್ದಾರೆ. ಚರ್ಚೆಯ ಬಳಿಕವೂ ಸ್ವಾಮೀಜಿ ಪೀಠ ತ್ಯಾಗ ಮಾಡದಿದ್ದರೆ ಪ್ರತಿಭಟನಾ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು’ ಎಂದು ಸಮುದಾಯದ ಮುಖಂಡರು ತಿಳಿಸಿದರು. ಸಮನ್ವಯ ಸಮಿತಿ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ ‘ಮಠವು ಸಮುದಾಯದ ಆಸ್ತಿ. ಪೀಠ ತ್ಯಾಗ ಮಾಡಿ ಉತ್ತರಾಧಿಕಾರಿ ನೇಮಿಸಬೇಕು ಎಂದು ನಿಯೋಗದಲ್ಲಿ ತೆರಳಿ ತಿಳಿಸುತ್ತೇವೆ. ಇದಕ್ಕೆ ಒಪ್ಪದೇ ಹಠ ಮಾಡಿ ನಾನೇ ಇರುತ್ತೇನೆ ಎಂದರೆ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ’ ಎಂದರು. ‘10 ವರ್ಷಗಳ ಹಿಂದೆಯೇ ಪದತ್ಯಾಗ ಮಾಡುವುದಾಗಿ ತರಳಬಾಳು ಶ್ರೀ ಹೇಳಿದ್ದರು. ಆಗ ಹಳ್ಳಿಯ ಮುಗ್ಧ ಜನ ಪೀಠತ್ಯಾಗ ಮಾಡುವುದು ಬೇಡ ಎಂದಿದ್ದರು. ನಂತರ ಶ್ರೀಗಳು ಎಂದೂ ಪೀಠತ್ಯಾಗದ ಬಗ್ಗೆ ಮಾತನಾಡಿಲ್ಲ. ಈಗ ಏಕವ್ಯಕ್ತಿ ಟ್ರಸ್ಟ್ ಡೀಡ್ ಬಗ್ಗೆ ಗೊತ್ತಾಗಿ ಸಮುದಾಯದ ಮುಖಂಡರು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತಿದ್ದಾರೆ’ ಎಂದು ಹೇಳಿದರು. ‘ವಿಲ್ ಬರೆಯುವ ಮೂಲಕ ಮಠದ ಉತ್ತರಾಧಿಕಾರಿ ನೇಮಿಸಲಾಗದು. ಮಠದ ಚಿಂತನೆ ಹಾಗೂ ಸದ್ಭಕ್ತರ ಬಗ್ಗೆ ಉತ್ತರಾಧಿಕಾರಿಗೆ ತಿಳಿದಿರಬೇಕು. ಇದನ್ನೆಲ್ಲ ತಿಳಿಯಲು ಉತ್ತರಾಧಿಕಾರಿಗೆ ಸಮಯ ಬೇಕು. ಹೀಗಾಗಿ ತಕ್ಷಣವೇ ಉತ್ತರಾಧಿಕಾರಿ ನೇಮಿಸಬೇಕು’ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT