ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ಕೆ.ಜಿ ಶ್ರೀಗಂಧ ಜಪ್ತಿ; ಆರೋಪಿ ಬಂಧನ

Published 1 ಜುಲೈ 2023, 7:30 IST
Last Updated 1 ಜುಲೈ 2023, 7:30 IST
ಅಕ್ಷರ ಗಾತ್ರ

ದಾವಣಗೆರೆ: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರ ಕಡಿಯುತ್ತಿದ್ದ ಆರೋಪಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್ ಜಗನ್ನಾಥ ಹಾಗೂ ತಂಡದವರು ಬಂಧಿಸಿದ್ದಾರೆ.

ಪ್ರಾದೇಶಿಕ ಅರಣ್ಯ ವ್ಯಾಪ್ತಿಯ ದಾವಣಗೆರೆ ವಲಯದ ಹೆಬ್ಬಾಳು ಶಾಖೆಯ ಆನಗೋಡು ಗಸ್ತಿನಲ್ಲಿ ಜೂನ್ 26 ರಂದು ಹೆಬ್ಬಾಳು ಶಾಖೆಯ ಸಿಬ್ಬಂದಿಯು ರಾತ್ರಿ ಗಸ್ತು ತಿರುಗುತ್ತಿದ್ದಾಗ ಆರೋಪಿಯನ್ನು ಬಂಧಿಸಿದ್ದಾರೆ.

ಒಬ್ಬ ಆರೋಪಿಯನ್ನು ಬಂಧಿಸಿ ಅಂದಾಜು ₹1 ಲಕ್ಷ ಮೌಲ್ಯದ 15 ಕೆ.ಜಿ ಶ್ರೀಗಂಧವನ್ನು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

ನಿಮ್ಮ ಹತ್ತಿರದ ಅರಣ್ಯ ಪ್ರದೇಶಗಳ ಸುತ್ತಮುತ್ತ ವನ್ಯಜೀವಿ, ಅರಣ್ಯ ಸಂಪತ್ತಿಗೆ ಮಾರಕವಾಗುವಂತಹ ಕಾರ್ಯಚಟುವಟಿಕೆ ಕಂಡುಬಂದರೆ ಇಲಾಖೆಯ ಉಚಿತ ಸಹಾಯವಾಣಿ 1926ಗೆ ಕರೆ ಮಾಡಲು ಅರಣ್ಯ ಇಲಾಖೆ ಕೋರಿದೆ.

ಬಸ್‌ ಚಾಲಕನ ಮೇಲೆ ಹಲ್ಲೆ; ದೂರು

ದಾವಣಗೆರೆ: ನಗರದ ಅರುಣಾ ಟಾಕೀಸ್ ಬಳಿ ಖಾಸಗಿ ಬಸ್‌ಗಳ ಸಿಬ್ಬಂದಿ ಹೊಡೆದಾಡಿಕೊಂಡಿದ್ದು, ಹಲ್ಲೆಗೊಳಗಾದ ಚಾಲಕರೊಬ್ಬರು ದಾವಣಗೆರೆ ಬಡಾವಣೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಹಲ್ಲೆಗೊಳಗಾದ ರಾಘವೇಂದ್ರ ಟ್ರಾವೆಲ್ಸ್‌ನ ಚಾಲಕ ನಿಂಗಪ್ಪ ಅವರು ಎಸ್‌ಆರ್‌ಇ ಬಸ್‌ನ ಚಾಲಕ ಹಾಗೂ ಮಾಲೀಕ ಯೂನೂಸ್, ಸಂತೋಷ ಹಾಗೂ ಇತರರ ವಿರುದ್ಧ ದೂರು ಸಲ್ಲಿಸಿದ್ದಾರೆ.

‘ಜೂನ್‌ 28ರಂದು ಬಸ್‌ನೊಳಗೆ ಬಂದು ಗಲಾಟೆ ಮಾಡಿದ್ದಕ್ಕೆ ಸಂತೋಷ್‌ಗೆ ಒಮ್ಮೆ ಹೊಡೆದಿದ್ದೆ, ಅದಕ್ಕೆ ಸಂತೋಷ; ಅವರ ಬಸ್ ಮಾಲೀಕ ಯೂನೂಸ್‌ಗೆ ಕರೆ ಮಾಡಿ 8 ಜನರನ್ನು ಕರೆಸಿ ಹಲ್ಲೆ ಮಾಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದ ಚಾಕು ಇರಿಯಲು ಯತ್ನಿಸಿದ್ದಾರೆ’ ಎಂದು ದೂರಿದ್ದಾರೆ.

ದಾವಣಗೆರೆ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ; ಬಂಧನ

ದಾವಣಗೆರೆ: ತಾಲ್ಲೂಕಿನ ಮಾಗನಹಳ್ಳಿ ಬಸ್‌ ನಿಲ್ದಾಣದ ಮುಂಭಾಗ ಪರವಾನಗಿ ಇಲ್ಲದೆ, ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಸಿಂಗ್ರಿಹಳ್ಳಿ ಗ್ರಾಮದ ಮಂಜುನಾಥ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಜೂನ್‌ 29ರಂದು ಸಂಜೆ ಪೊಲೀಸರು ಗಸ್ತಿನಲ್ಲಿದ್ದಾಗ ಆರೋಪಿಯನ್ನು ಬಂಧಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಮೀನು ವಿವಾದ; ಸಹೋದರನ ಮೇಲೆ ಹಲ್ಲೆ

ನ್ಯಾಮತಿ: ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದ ಸಹೋದರರು ಜಮೀನು ವಿಚಾರದಲ್ಲಿ ಪರಸ್ಪರ ಹಲ್ಲೆ ಮಾಡಿಕೊಂಡಿರುವ ಘಟನೆ ಗುರುವಾರ ನಡೆದಿದೆ.

ಗ್ರಾಮದ ತೀರ್ಥಲಿಂಗಪ್ಪ ಎಂಬುವರು ಈ ಬಗ್ಗೆ ನ್ಯಾಮತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ನಮ್ಮ ತಂದೆ ಸ್ವಯಾರ್ಜಿತ ಆಸ್ತಿಯನ್ನು ನನ್ನ ಪತ್ನಿ ಮತ್ತು ಮಗನಿಗೆ ವಿಲ್ ಮಾಡಿದ್ದು, ಆ ಪ್ರಕಾರ ನಾವು ಜಮೀನು ಉಳುಮೆ ಮಾಡುತ್ತಿರುವ ವೇಳೆ, ನನ್ನ ತಮ್ಮ ಮಲ್ಲಿಕಾರ್ಜುನ ಅವರ ಮಗ ಹೇಮರಾಜ ಅವರು ತಕಾರಾರು ಮಾಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT