ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಪರಂಪರೆ ಒಪ್ಪಿಕೊಳ್ಳುವವರು ವೈದಿಕ ಪರಂಪರೆಯಿಂದ ದೂರವಿರಿ:ಶಿವಾಚಾರ್ಯ ಸ್ವಾಮೀಜಿ

Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ದಾವಣಗೆರೆ: ‘ಬಸವ ಪರಂಪರೆಯನ್ನು ಒಪ್ಪಿಕೊಳ್ಳುವವರು ವೈದಿಕ ಪರಂಪರೆಯಿಂದ ದೂರವಿರಬೇಕು. ಎರಡೂ ಬೇಕೆನ್ನುವುದನ್ನು ಶರಣ ತತ್ವ ಒಪ್ಪುವುದಿಲ್ಲ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ದಾವಣಗೆರೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಹಾಗೂ ಶರಣ ಚಿಂತನ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

‘ಕೆಲ ವಚನಗಳಲ್ಲಿ ಅಡಕವಾಗಿರುವ ಸತ್ಯವನ್ನು ಬಿಡಿಸಿ ಹೇಳಿದರೆ ಬಹಳಷ್ಟು ಮಂದಿಯ ಕಣ್ಣು ಕೆಂಪಾಗುತ್ತದೆ. ಕಲ್ಲು ದೇವರು ದೇವರೇ ಅಲ್ಲ ಎಂಬುದು ಬಸವಣ್ಣನವರ ವಚನದ ಸಾರ. ಆದರೆ, ಬಹುಪಾಲು ಮಂದಿ ಕಲ್ಲು, ಮಣ್ಣು, ಮರದ ದೇವರನ್ನು ಪೂಜಿಸುತ್ತಾರೆ. ಶರಣ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಇಷ್ಟಲಿಂಗ ಪೂಜೆ ಮಾಡುವ ಭಾವನೆ ಬೆಳೆಸಿಕೊಳ್ಳಬೇಕು’ ಎಂದರು.

‘ಲಿಂಗಾಯತ ಒಂದು ಜಾತಿ ಅಲ್ಲ, ಅದೊಂದು ತತ್ವ, ಸಿದ್ಧಾಂತ. ಯಾರು ಆ ತತ್ವಕ್ಕೆ ಅನುಗುಣವಾಗಿ ಅಂಗದ ಮೇಲೆ ಲಿಂಗ ಧರಿಸಿ ಪೂಜೆ ಮಾಡುತ್ತಾರೋ ಅವರು ಮಾತ್ರ ಲಿಂಗಾಯತರು. ಹುಟ್ಟಿನಿಂದ ಲಿಂಗಾಯತತನ ಬರುವುದಿಲ್ಲ. ಅದು ಸಾಧನೆ ಹಾಗೂ ಅರಿವಿನ ಮೂಲಕ ಬರುತ್ತದೆ. ಹಾಗಾಗಿ ಆ ಅರಿವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಾನು ಗುಡಿ ಗೋಪುರಗಳಿಗೆ ಹೋಗುವುದು ಶಿಲ್ಪದ ಸೌಂದರ್ಯ ನೋಡುವುದಕ್ಕೆ. ದೇವರಿದ್ದಾನೆ ಎಂಬ ನಂಬಿಕೆಯಿಂದಲ್ಲ. ದೇವಸ್ಥಾನಗಳ ಶಂಕುಸ್ಥಾಪನೆ, ಭೂಮಿ ಪೂಜೆ, ಕಳಶಾರೋಹಣ ಕಾರ್ಯಕ್ರಮಗಳಲ್ಲಿ  ಭಾಗವಹಿಸುವುದಿಲ್ಲ. ಇದನ್ನು ಟೀಕಿಸುವವರು ಬಹಳಷ್ಟು ಮಂದಿ ಇದ್ದಾರೆ. ನಮಗೆ ಟೀಕೆ ಮುಖ್ಯವಲ್ಲ. ಬದ್ಧತೆ ಮುಖ್ಯ’ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT