ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸಂಭ್ರಮ: ಉದ್ಯಾನಗಳಲ್ಲಿ ಸಹಭೋಜನ

ಎಳ್ಳು ಬೆಲ್ಲ ಬೀರಿ ಮಕ್ಕಳ ಸಡಗರ, ಗಾಜಿನಮನೆಯಲ್ಲಿ ಜನಸಾಗರ
Last Updated 14 ಜನವರಿ 2021, 16:34 IST
ಅಕ್ಷರ ಗಾತ್ರ

ದಾವಣಗೆರೆ: ನಗರ ಸೇರಿ ಜಿಲ್ಲೆಯಾದ್ಯಂತ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಉದ್ಯಾನ, ಕೆರೆಗಳ ಬಳಿ, ದೇವಾಲಯ ಸೇರಿ ಮನಸ್ಸಿಗೆ ಮುದ ನೀಡುವ ಪ್ರಕೃತಿಯ ಸೊಬಗಿನಲ್ಲಿ ಪರಿಸರದ ಸೌಂದರ್ಯ ಆಸ್ವಾದಿಸುತ್ತಾ, ಕುಟುಂಬಸ್ಥರು, ಬಂಧುಗಳು, ಸ್ನೇಹಿತರೊಂದಿಗೆ ಸೇರಿ ಹಬ್ಬ ಆಚರಿಸಿದರು.

ಸಾಮೂಹಿಕ ಭೋಜನದೊಂದಿಗೆ ಹಬ್ಬದೂಟದವನ್ನು ಸವಿದು ಸಂಭ್ರಮಿಸಿದರು. ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಚಿಣ್ಣರು, ಯುವತಿಯರು, ಮಹಿಳೆಯರು ಜೋಕಾಲಿ ಜೀಕಿ ಸಂತಸಪಟ್ಟರು. ನಗರದ ಗಾಜಿನಮನೆ, ವಿಶ್ವೇಶ್ವರಯ್ಯ ಪಾರ್ಕ್, ಕಾಸಲ್‌ ಶ್ರೀನಿವಾಸ ಶೆಟ್ಟಿ, ನಿಜಲಿಂಗಪ್ಪ ಬಡಾವಣೆಯ ಗಂಗೂಬಾಯಿ ಹಾನಗಲ್‌ ಹಾಗೂ ಮಾತೃಛಾಯಾ ಮಕ್ಕಳ ಉದ್ಯಾನದಲ್ಲಿ ಜನಜಂಗುಳಿ ಇತ್ತು.

ಉದ್ಯಾನಗಳಲ್ಲಿ ಕಳೆ:ದಾವಣಗೆರೆ ತಾಲ್ಲೂಕಿನ ಕೆಲ ಗ್ರಾಮಗಳ ಜನರು ಸೇರಿ ನಗರವಾಸಿಗಳು ಬೆಳಿಗ್ಗೆಯಿಂದಲೇ ಉದ್ಯಾನಗಳಿಗೆ ಧಾವಿಸಿದರು. ಮಕ್ಕಳೊಂದಿಗೆ ಆಟವಾಡುತ್ತಾ ಸಂಭ್ರಮಿಸಿದರು. ಉದ್ಯಾನಗಳ ಹುಲ್ಲುಹಾಸಿನ ಮೇಲೆ ಕುಳಿತು ಜೊತೆಯಲ್ಲಿ ತಂದಿದ್ದ ಹೋಳಿಗೆ, ಕರಿಕಡುಬು, ಜೋಳದ ರೊಟ್ಟಿ, ಪಲ್ಯ, ಬುತ್ತಿ ಸೇರಿ ಬಗೆ ಬಗೆ ತಿನಿಸುಗಳನ್ನು ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ಸೇರಿ ಸವಿದರು. ಕೆಲವರು ಅಕ್ಕಪಕ್ಕದಲ್ಲಿದ್ದವರಿಗೂ ನೀಡಿ ಖುಷಿ ಪಟ್ಟರೆ, ಇನ್ನು ಕೆಲವರು ಹತ್ತಿರದಲ್ಲಿದ್ದವರನ್ನು ಕರೆದು ಬನ್ನಿ ಊಟ ಮಾಡಿ ಎಂದು ಕರೆದು ಸಂಸ್ಕಾರ ತೋರಿದರು.

ಆನಗೋಡು, ಆನಕೊಂಡ, ಮಾಗಾನಹಳ್ಳಿ, ನಾಗನೂರು, ಹೊಸಕುಂದವಾಡ, ಇಂಡಸ್ಟ್ರಿಯಲ್‌ ಏರಿಯಾ, ಬೇತೂರು ಸೇರಿ ಸಮೀಪದ ಊರುಗಳಿಂದ ಬಂದು ಗಾಜಿನಮನೆ, ನಗರದ ವಿವಿಧ ಪಾರ್ಕ್‌ಗಳಲ್ಲಿ ಹಬ್ಬವನ್ನು ಆಚರಿಸಿದರು.

ಮಕ್ಕಳ ಸಂಭ್ರಮ ಮುಗಿಲುಮುಟ್ಟಿ‌ತ್ತು. ಜೋಕಾಲಿ, ಜಾರುಬಂಡಿ, ಪ್ರಾಣಿಗಳ ಪ್ರತಿಮೆ ಸೇರಿ ಜಿಮ್‌ ಸಲಕರಣೆಗಳಲ್ಲಿ ಕುಳಿತು ಆಟ ಸಂಭ್ರಮಪಟ್ಟರೆ, ಪೋಷಕರೂ ಜೋಕಾಲಿ ಆಡಿ ಸಂತಸಪಟ್ಟರು.

ಕೆರೆಗಳಲ್ಲಿ ಹಬ್ಬದಾಚರಣೆಗೆ ನಿಷೇಧ: ನಗರದ ಟಿವಿ ಸ್ಟೇಷನ್ ಕೆರೆ ಹಾಗೂ ಕುಂದವಾಡ ಕೆರೆಯಲ್ಲಿ ಅಭಿವೃದ್ಧಿ ಕಾಮಗಾರಿ ಕಾರಣ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದನ್ನು ತಿಳಿಯದೇ ಬಂದ ಕೆಲವರು ಅಸಮಾಧಾನಗೊಂಡು ಸಿಬ್ಬಂದಿಯನ್ನು ಬೈಯುತ್ತಾ ವಾಪಸಾದರು.

ದೇವಾಲಯಗಳಲ್ಲಿ ವಿಶೇಷ ಪೂಜೆ: ಸಂಕ್ರಾಂತಿ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ದೇವರಿಗೆ ವಿಶೇಷವಾಗಿ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ನಗರ ದೇವತೆ ದುರ್ಗಾಂಬಿಕಾ ದೇವಾಲಯ, ನಿಟುವಳ್ಳಿ ದುರ್ಗಾಂಬಿಕಾ ದೇವಾಲಯ ಹಾಗೂ ಅಲ್ಲಿನ ಶಿವ, ಗಣಪತಿ ದೇವಾಲಯಗಳಲ್ಲಿ,ಹೊಂಡದ ಸರ್ಕಲ್‌ ಬಳಿಯ ಪಾತಾಳ ಲಿಂಗೇಶ್ವರ, ನಿಜಲಿಂಗಪ್ಪ ಬಡಾವಣೆಯ ಗಣಪತಿ, ಶಾರದಾಂಬಾ ಚಂದ್ರಮೌಳೀಶ್ವರ ದೇವಸ್ಥಾನ, ಕೆ.ಟಿ.ಜೆ. ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ಸೇರಿ ಹಲವು ದೇವಾಲಯಗಳಲ್ಲಿ ಅಲಂಕಾರ ಪೂಜೆ ನಡೆಯಿತು.

ಗಾಜಿನ ಮನೆಯಲ್ಲಿ ಜನಸಾಗರ
ಸಂಕ್ರಾಂತಿ ಅಂಗವಾಗಿ ಗಾಜಿನಮನೆಗೆ ಜನಸಾಗರವೇ ಹರಿದುಬಂದಿತ್ತು. ದಾವಣಗೆರೆ ತಾಲ್ಲೂಕಿನ ಹಲವೆಡೆ ಜನರುಕುಟುಂಬದವರು, ಸ್ನೇಹಿತರೊಂದಿಗೆ ಬಂದು ಭೋಜನ ಸವಿದರು. ಮಕ್ಕಳು ಆಟವಾಡಿ ಸಂಭ್ರಮಿಸಿದರು. ಅಲ್ಲಿನ ಹುಲ್ಲುಹಾಸಿನ ಮೇಲೆ ಊಟ ಮಾಡುವುದು ನಿಷೇಧಿಸಿದ್ದ ಕಾರಣ ಕಾರ್‌ ಪಾರ್ಕಿಂಗ್‌ ಸ್ಥಳ ಹಾಗೂ ಗಾಜಿನಮನೆಯ ಹೊರವಲಯದಲ್ಲಿ ಹಬ್ಬದೂಟ ಸವಿದರು.

ಸೆಲ್ಫಿ ಸಂಭ್ರಮ: ಗಾಜಿನ ಮನೆಯ ಆವರಣದಲ್ಲೆಲ್ಲಾ ಯುವಕರು, ಯುವತಿಯರು, ಮಕ್ಕಳು, ಮಹಿಳೆಯರು ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು. ಕುಟುಂಬದ ಸದಸ್ಯರೊಂದಿಗೆ ಗ್ರೂಪ್‌ ಫೋಟೊ ತೆಗೆದು ಸಂತಸಪಟ್ಟರು. ಮಧ್ಯಾಹ್ನದ ಹೊತ್ತಿಗಾಗಲೇ 1,500 ಜನರು ಭೇಟಿ ನೀಡಿದ್ದರು ಎಂದು ಸಿಬ್ಬಂದಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT