ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡವೇ ಉಸಿರು ಎಂದ ‘ಸಂತೇಬೆನ್ನೂರು ಕನ್ನಡ ಪರಿಚಾರಕರು’

ನಡೆನುಡಿಗಳಲ್ಲಿ ಮೊಳಗಿದ ಕನ್ನಡದ ಡಿಂಡಿಮ
Last Updated 1 ನವೆಂಬರ್ 2021, 4:18 IST
ಅಕ್ಷರ ಗಾತ್ರ

ಸಂತೇಬೆನ್ನೂರು: ‘ಸಂತೇಬೆನ್ನೂರು ಕನ್ನಡ ಪರಿಚಾರಕರು’ ಕೃತಿಯ ನಲ್ನುಡಿಯಲ್ಲಿ ಸಾಹಿತಿ ಬಿ.ಎಲ್. ವೇಣು ‘ಬರಹಗಾರರು ಡಿ.ಎಸ್. ರಾಮಚಂದ್ರ ಅವರನ್ನು ‘ಅಪರಂಜಿ’, ಕೆ.ಸಿದ್ದಲಿಂಗಪ್ಪ ಅವರನ್ನು ‘ಸಂತೇಬೆನ್ನೂರಿನ ಷರೀಫ’, ಸುಮತೀಂದ್ರ ನಾಡಿಗರನ್ನು ‘ಸಂಶೋಧನಾ ಸಮರ್ಥ’ ಹಾಗೂ ಎಚ್.ನೀಲಪ್ಪ ಅವರನ್ನು ‘ಕನ್ನಡ ಭಗೀರಥ’ ಎಂದೆಲ್ಲ ಬಣ್ಣಿಸಿದ್ದಾರೆ. ಈ ನಾಲ್ವರನ್ನು ನಾನು ಹತ್ತಿರದಿಂದ ಕಂಡವನಾದ್ದರಿಂದ ಮೇಲಿನ ಮಾತುಗಳು ಢೋಂಗಿ ಎನಿಸುತ್ತಿಲ್ಲ’ ಎಂದು ಉಲ್ಲೇಖಿಸಿದ್ದಾರೆ. ಇದಕ್ಕಿಂತ ಕನ್ನಡಕ್ಕಾಗಿ ಅವರ ತ್ಯಾಗಮಯಿ ಜೀವನದ ನಿದರ್ಶನ ಇನ್ನೊಂದಿಲ್ಲ.

ಡಿ.ಎಸ್. ರಾಮಚಂದ್ರ ಹಾಗೂ ಎಚ್.ನೀಲಪ್ಪ ಇಹಲೋಕ ತ್ಯಜಿಸಿದ್ದಾರೆ. ಗ್ರಾಮದ ಈ ನಾಲ್ವರು ಸಾವಿರಾರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರು. ಕನ್ನಡ ಭಾಷೆಗಾಗಿ ತನು, ಮನ, ಧನದಿಂದ ದುಡಿದ ನಿಸ್ವಾರ್ಥಿಗಳು. ಇವರ ಸಾಧನೆಗಳ ಹಾದಿ ಮಾರ್ಗಸೂಚಿಯೇ ಸರಿ.

ನಿವೃತ್ತ ಪ್ರಾಂಶುಪಾಲ ಡಿ.ಎಸ್. ರಾಮಚಂದ್ರ ತಮ್ಮ ಪ್ರಖರ ವಿದ್ವತ್ ಮೂಲಕ ಅಧಿಕಾರಯುತ ವಾಗ್ಝರಿ ಮೂಲಕ ಕನ್ನಡ ಸಾಹಿತ್ಯದಲ್ಲಿ ಸಂಚಲನ ಮೂಡಿಸಿದ್ದರು. ವಿನೀತ ಭಾವದ ಇವರನ್ನು 1992ರಲ್ಲಿ ಚನ್ನಗಿರಿ ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮೂರು ವರ್ಷವೂ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದರು. ಶಾಲಾ–ಕಾಲೇಜುಗಳಲ್ಲಿ ಉಪನ್ಯಾಸ, ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿದ್ದರು. ಸುಧಾ ವಾರಪತ್ರಿಕೆಯ ಕವಿ ಚಿತ್ರಗಳಿಗೆ ಫ್ರೇಂ ಹಾಕಿಸಿ ವಿಜಯ ಪ್ರೌಢಶಾಲೆಗೆ ದಾನ ನೀಡಿದ್ದರು.

ದೇವರಹಳ್ಳಿಯಲ್ಲಿ ಹುಟ್ಟಿ ಸಂತೇಬೆನ್ನೂರಿನ ವಿಜಯ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದ ಎಚ್. ನೀಲಪ್ಪ ಅವಿರತ ಕನ್ನಡ ಭಾಷೆ ಸೇವೆಯಲ್ಲಿ ನಿರತರಾಗಿದ್ದರು. 7 ಕೃತಿಗಳು ಹಾಗೂ 6 ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಸತತ 12 ತಾಲ್ಲೂಕು ಸಾಹಿತ್ಯ ಸಮ್ಮೇಳನ ಆಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಇವರ ಸಾಹಿತ್ಯ ಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯಮಟ್ಟದ ಕವಿಗೋಷ್ಠಿ ಗೌರವ ಪ್ರಶಸ್ತಿ, ಶಿಕ್ಷಕ ರತ್ನ ಪ್ರಶಸ್ತಿ, ಕನ್ನಡ ಪರಿಚಾರಕ ಪ್ರಶಸ್ತಿ ಅರಸಿ ಬಂದಿವೆ.

ಕನ್ನಡ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕು ಎಂದು ಪ್ರತಿಪಾದಿಸುವ ಕೆ.ಸಿದ್ಧಲಿಂಗಪ್ಪ 1987ರಿಂದಲೇ ಕನ್ನಡ ಸಾಹಿತ್ಯ ಪರಿಷತ್ ಪರಿಚಾರಿಕೆಯಲ್ಲಿದ್ದಾರೆ. 83ರ ಇಳಿವಯಸ್ಸಿನಲ್ಲೂ ಕನ್ನಡ ಕಾರ್ಯಕ್ರಮಗಳಿಗೆ ಯುವೋತ್ಸಾಹ. 2003ರಲ್ಲಿ ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕಣಿವೆ ಬಿಳಚಿ, ದೇವರಹಳ್ಳಿ ಹಾಗೂ ಸಂಗಾಹಳ್ಳಿಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಸಿದ ರೂವಾರಿ. ಹತ್ತಾರು ಹಳ್ಳಿಗಳಲ್ಲಿ ಶಾಶ್ವತ ಕನ್ನಡ ಧ್ವಜಸ್ತಂಭ ಸ್ಥಾಪನೆ. ಹತ್ತು ದತ್ತಿ ನಿಧಿಗಳ ಸ್ಥಾಪನೆ. ಪರಿಷತ್ತಿನ ಅಮೃತ ನಿಧಿಗೆ ಸಾವಿರಾರು ರೂಪಾಯಿಗಳ ಸಂಗ್ರಹ. ಯುವಕರಿಗೆ ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ರೂಢಿಸಿದ ಅನುಕರಣೀಯರು.

ಪತ್ರಕರ್ತ, ಸಂಶೋಧಕ ಸುಮತೀಂದ್ರ ನಾಡಿಗ್ ಸದಾ ಚಲನಶೀಲ ಪರಿಚಾರಕ. ‘ಸೂಳೆಕರೆ ಸಾಂಗತ್ಯ’, ಸಂತೇಬೆನ್ನೂರು ನಾಯಕರು’, ‘ಸಂತೇಬೆನ್ನೂರು ನಾಯಕರ ಶಾಸನಗಳು’, ‘ದಾವಣಗೆರೆ ಜಿಲ್ಲೆ: ಇತಿಹಾಸದ ಕೆಲವು ಹೆಜ್ಜೆಗಳು’ ಎಂಬ ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳಿಗೆ ನಮ್ಮ ನೆಲೆಯ ಇತಿಹಾಸದ ಬೆಳಕು ಚೆಲ್ಲುವ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಒಟ್ಟಾರೆ ಸದಾ ಕನ್ನಡದ ಚಟುವಟಿಕೆಗೆ ಜೀವತುಂಬಲು ಇವರ ಕೊಡುಗೆ ಅಪಾರ. ಯುವ ಪೀಳಿಗೆ ಇವರ ಆಶಯಗಳನ್ನು ಮುನ್ನಡೆಸುವ ಕೈಂಕರ್ಯದಲ್ಲಿರುವುದು ಸಂತಸದ ವಿಷಯ.

ರಸ್ತೆ ಸಾರಿಗೆ ಸಂಸ್ಥೆಯ ‘ಕನ್ನಡ ಪಂಡಿತ’ರಿವರು

-ಸ್ಮಿತಾ ಶಿರೂರ

ದಾವಣಗೆರೆ: ‘ಚೀಟಿ ತೊಗೊಳಿ.., ಚೀಟಿ ತೊಗೊಳಿ...’ ಇಂಥ ನುಡಿಗಳನ್ನು ಎರಡು ವರ್ಷಗಳ ಹಿಂದೆ ದಾವಣಗೆರೆ–ಬೆಂಗಳೂರು ಬಸ್‌ ಹತ್ತಿದ ಹಲವರು ಕೇಳಿರಬಹುದು. ಟಿಕೆಟ್‌.. ಟಿಕೆಟ್‌... ಎಂಬ ಆಂಗ್ಲ ಪದಗಳ ಬದಲು, ಇಂಥ ಅಪ್ಪಟ ಕನ್ನಡ ನುಡಿಗಳನ್ನಾಡುತ್ತ ಕೆಎಸ್‌ಆರ್‌ಟಿಸಿ ನೌಕರರ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ ದಾವಣಗೆರೆಯ ಎಂ.ಶಾಂತಪ್ಪ.

ಬಸ್‌ ನಿರ್ವಾಹಕರಾಗಿದ್ದ ಎಂ.ಶಾಂತಪ್ಪ ಅವರ ನಿಜನಾಮವೇ ಅವರ ಸಹೋದ್ಯೋಗಿಗಳಾದ ಹಲವರಿಗೆ ಗೊತ್ತಿಲ್ಲ. ‘ಕನ್ನಡ ಪಂಡಿತ’ ಎಂಬ ಅಡ್ಡ ಹೆಸರು ಇವರಿಗೆ ಸ್ನೇಹಿತ ವಲಯದಲ್ಲಿ ಹುಟ್ಟಿಕೊಂಡಿರುವುದರಿಂದ, ಹಾಗೆ ಹೇಳಿದರಷ್ಟೇ ಅವರ ಪರಿಚಯ ಆಗುತ್ತದೆ.

ಜಗಳೂರು ತಾಲ್ಲೂಕಿನ ಉರುಲಕಟ್ಟೆಯವರಾದ ಶಾಂತಪ್ಪ ಅವರು ಮಾತಿನಲ್ಲಿ, ಬರಹದಲ್ಲಿ ಎಲ್ಲಿಯೂ ಅಪ್ಪಿತಪ್ಪಿ ಬೇರೆ ಭಾಷೆ ಬಳಸುವುದಿಲ್ಲ. ಪ್ರತಿ ಅಕ್ಷರ, ಅಂಕಿಗಳನ್ನೂ ಕನ್ನಡದಲ್ಲೇ ಬರೆಯುತ್ತಾರೆ. ಬಸ್‌ನಲ್ಲಿ ಬರುವ ಪ್ರಯಾಣಿಕರಿಗೆ ಚಿಲ್ಲರೆ ಮರಳಿಸುವುದಿದ್ದರೂ, ಚೀಟಿಯ ಹಿಂದೆ ಕನ್ನಡದ ಅಂಕಿಗಳಲ್ಲೇ ಬರೆಯುತ್ತಿದ್ದರು. ಚೀಟಿಗಳ ಒಟ್ಟು ಲೆಕ್ಕಾಚಾರವನ್ನು ಮೇಲಧಿಕಾರಿಗಳಿಗೆ ಬರೆದು ಕೊಡುವುದೂ ಕನ್ನಡದ ಅಂಕಿಗಳಲ್ಲೇ!

ಕನ್ನಡ ಪ್ರೇಮ ಹುಟ್ಟಿದ್ದು ಹೇಗೆ?: ‘8ನೇ ತರಗತಿ ಓದುವಾಗ ತಮಿಳುನಾಡಿನ ಮದುರೈಗೆ ಪ್ರವಾಸ ಹೋಗಿದ್ದೆವು. ಆಗ ರಜನಿಕಾಂತ್‌ ಅವರ ಚಿತ್ರವೊಂದು ಬಿಡುಗಡೆಯಾಗಿತ್ತು. ಕೆಲ ತಮಿಳರು ರಜನಿಕಾಂತ್‌ ಕನ್ನಡಿಗರು ಎಂಬ ಕಾರಣಕ್ಕೆ ಅವರ ಕಟೌಟ್‌ ಕಿತ್ತು ಹಾಕಿ ರಂಪಾಟ ಮಾಡಿದ್ದರು. ಅಂದಿನಿಂದ ಕನ್ನಡ ಭಾಷೆಯ ಬಗ್ಗೆ ಕನ್ನಡಿಗರೂ ಅಭಿಮಾನ ಹೊಂದಿರಬೇಕು ಅನ್ನಿಸಿತು. ಅದೇ ಮನಸ್ಸಿನಲ್ಲಿ ಉಳಿಯಿತು. 1986ರಲ್ಲಿ ಬೆಂಗಳೂರು ನಗರ ಸಾರಿಗೆ ಸಂಸ್ಥೆಯಲ್ಲಿ ನೇಮಕವಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಕನ್ನಡದ ಸಾಹಿತಿಗಳಿಂದ ಶಿಬಿರಗಳು, ಕಾರ್ಯಾಗಾರಗಳು ನಡೆಯುತ್ತಿದ್ದವು. ಹೀಗಾಗಿ ಕನ್ನಡಾಭಿಮಾನ ಇನ್ನಷ್ಟು ಬಲಗೊಂಡಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಶೇ 95ರಷ್ಟು ವ್ಯವಹಾರ ಕನ್ನಡದಲ್ಲೇ ನಡೆಯುತ್ತದೆ. ಉಳಿದ ಇಲಾಖೆಗಳಲ್ಲಿ ಇಷ್ಟು ಬಳಕೆ ಕಾಣುತ್ತಿಲ್ಲ. ಬೆಂಗಳೂರಿನಿಂದ ಬಳ್ಳಾರಿಗೆ ವರ್ಗಾವಣೆಯಾದಾಗ ಅಲ್ಲಿಯ ಗುಳ್ಳೆಂ ಎಂಬಲ್ಲಿ ಶಿಕ್ಷಕರಾಗಿದ್ದ ಸಾಹಿತಿ ಕುಂ. ವೀರಭದ್ರಪ್ಪ ಅವರ ಭೇಟಿಯಾಯಿತು. ನನ್ನ ಕನ್ನಡ ಬಳಕೆ ಕಂಡು ಪ್ರಭಾವಿತರಾದ ಅವರು ಗುಳ್ಳೆಂಗೆ ಕರೆಸಿ ಗಡಿನಾಡ ಕನ್ನಡಿಗರ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿದರು’ ಎಂದು ಸ್ಮರಿಸಿದರು.

ಈಗಲೂ ಶಾಂತಪ್ಪ ಅವರು ಕನ್ನಡವನ್ನು ಬಿಟ್ಟು ಬೇರೆ ಭಾಷೆಯ ಒಂದು ಶಬ್ದವನ್ನೂ ಬಳಸುವುದಿಲ್ಲ. ಅಂಕಿ–ಸಂಖ್ಯೆಗಳನ್ನೂ ಕನ್ನಡದಲ್ಲೇ ಬರೆದುಕೊಡುತ್ತಾರೆ. ಅಂಚೆ ಕಚೇರಿ, ಬ್ಯಾಂಕ್‌ಗಳಲ್ಲಿ ಮೊದಮೊದಲು ಆಕ್ಷೇಪಿಸುತ್ತಿದ್ದರು. ಈಗ ಇವರ ಪರಿಚಯವಾಗಿರುವುದರಿಂದ ಅವರೇ ಇವರಿಗೆ ಹೊಂದಿಕೊಂಡಿದ್ದಾರೆ.

‘ನನ್ನ ಜೊತೆ ಬಸ್‌ನಲ್ಲಿ ಚಾಲಕರಾಗಿದ್ದ ಬಸವರಾಜ ಹಾಗೂ ಮಹೇಶ್‌ ಕುರುಬರ ಅವರು ನನ್ನ ಕನ್ನಡ ಚಟುವಟಿಕೆಗೆ ಸಂಪೂರ್ಣ ಸಾಥ್‌ ನೀಡಿದ್ದಾರೆ. ನಾವೆಲ್ಲ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದೆವು. ಬಸ್‌ನ್ನು ಅಲಂಕರಿಸುತ್ತಿದ್ದೆವು. ಕನ್ನಡದ ಸಾಹಿತಿಗಳು, ದಾವಣಗೆರೆಯ ಐತಿಹಾಸಿಕ ಸ್ಥಳಗಳ ಚಿತ್ರಗಳು, ನುಡಿಗಟ್ಟುಗಳನ್ನು ಬಸ್‌ಗೆ ಅಂಟಿಸಿ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದೆವು. ರಾಜ್ಯೋತ್ಸವದ ನಿಮಿತ್ತ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸುತ್ತಿದ್ದೆವು. ಪ್ರತಿ ವರ್ಷ ದಾವಣಗೆರೆಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ ಕಟ್ಟಿಟ್ಟ ಬುತ್ತಿಯಂತಾಗಿತ್ತು’ ಎಂದು ಶಾಂತಪ್ಪ ನೆನಪಿಸಿಕೊಂಡರು.

ಇವರ ಕನ್ನಡ ಅಂಕಿಗಳ ಬರವಣಿಗೆಗೆ ಇಲಾಖೆಯ ಮೇಲಿನ ಅಧಿಕಾರಿಗಳು ಕೆಲವರು ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರೆ, ಮತ್ತೆ ಕೆಲವರು ಆಕ್ಷೇಪಿಸಿದ್ದೂ ಇದೆ. ಏನೇ ಅಡೆತಡೆ ಬಂದರೂ ಕನ್ನಡ ಬರಹ, ನಡೆ–ನುಡಿಗಳಲ್ಲಿ ಬದಲಾವಣೆ ಮಾಡಿಕೊಂಡಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ದಾವಣಗೆರೆಯ ವಿಭಾಗದ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿ 10 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಶಾಂತಪ್ಪ ಅವರು ‘ವರ್ಷದ ಕನ್ನಡಿಗ’ ಎಂಬ ಪ್ರಶಸ್ತಿ ನೀಡುವ ಪರಂಪರೆಯನ್ನು ಆರಂಭಿಸಿದರು. 2019ರಲ್ಲಿ ನಿವೃತ್ತರಾದ ನಂತರ ದಾವಣಗೆರೆಯ ಚಿಕ್ಕನಹಳ್ಳಿ ಹೊಸಬಡಾವಣೆಯಲ್ಲಿ ನೆಲೆಸಿರುವ ಶಾಂತಪ್ಪ ಅವರು ಈಗ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು ಅಲ್ಲಿಯೂ ಲೆಕ್ಕಾಚಾರವನ್ನು ಕನ್ನಡ ಅಂಕಿಗಳಲ್ಲೇ ಮುಂದುವರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರುವ ಇವರು ಬಹುತೇಕ ಎಲ್ಲ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ಪಾಲ್ಗೊಂಡಿರುವುದು

ಕನ್ನಡದ ಉಳಿವಿಗಾಗಿ ನಿರಂತರ ಕಾರ್ಯಕ್ರಮ

ಹರಪನಹಳ್ಳಿ: ಸ್ವಾತಂತ್ರ್ಯ ಪೂರ್ವ ಚಳವಳಿ ಮತ್ತು ಸ್ವಾತಂತ್ರ್ಯದ ನಂತರದ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಹರಪನಹಳ್ಳಿ ತಾಲ್ಲೂಕಿನಲ್ಲಿ ಕನ್ನಡಪರ ಕಾರ್ಯಕ್ರಮಗಳು, ಗಮನಾರ್ಹ ಹೋರಾಟಗಳು ಇತಿಹಾಸದಲ್ಲಿ ದಾಖಲಾಗಿವೆ.

1947ರಲ್ಲಿ ಸಿ.ಕೆ. ವೆಂಕಟರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರುವುದೇ ಈ ಪ್ರದೇಶದಲ್ಲಿ ಏಕೀಕರಣ ಹೋರಾಟದ ಕಿಚ್ಚು ಹೆಚ್ಚಿಸಿತ್ತು. ಗೋಕಾಕ ಚಳವಳಿಯಲ್ಲೂ ಇಲ್ಲಿಯ ಹೋರಾಟಗಾರರು ಭಾಗವಹಿಸಿರುವುದು ತಿಳಿದುಬರುತ್ತದೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಇಜಾರಿ ಶಿರಸಪ್ಪ, ಇಜಾರಿ ಕಮಲಮ್ಮ, ಎಚ್.ಎಂ. ವೀರಭದ್ರಯ್ಯ ಅವರೂ ಗಮನ ಸೆಳೆದಿರುವಂತೆ, ಕನ್ನಡ ಉಳಿಸುವ ಹೋರಾಟಗಳಲ್ಲಿ ಮುದೇನೂರು ಸಂಗಣ್ಣ, ಕುಂ.ಬಾ. ಸದಾಶಿವಪ್ಪ, ಪಾರಸಮಲ್ ಜೈನ್ ಹೋರಾಟ ಗಮನಾರ್ಹ. ಈಚೆಗೆ ಪ್ರತಿ ವರ್ಷ ಕನ್ನಡದ ವಿಷಯದಲ್ಲಿ ಹೆಚ್ಚು ಅಂಕಗಳಿಸುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುತ್ತಿರುವ ಸಪ್ನಾ ಮಲ್ಲಿಕಾರ್ಜುನ್ ಅಧ್ಯಕ್ಷರಾಗಿರುವ ನವಜ್ಯೋತಿ ಸಾಂಸ್ಕೃತಿಯ ಸೇವಾ ಸಂಸ್ಥೆಯನ್ನು ಗುರುತಿಸಬಹುದು.

ನಿವೃತ್ತ ಶಿಕ್ಷಕರಾಗಿರುವ ಸಾಹಿತಿ ಕುಂ.ಬಾ. ಸದಾಶಿವಪ್ಪ ಅವರು, ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ತಮ್ಮನ್ನು ಅರ್ಪಿಸಿಕೊಂಡಿದ್ದರು. ಗೋಕಾಕ ಚಳವಳಿಯಿಂದ ಪ್ರೇರೇಪಿತರಾಗಿ ವಿವಿಧ ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಸ್ವತಃ ಕನ್ನಡದ ಉಳಿವಿಗೆ ಕಾರ್ಯಕ್ರಮ ಸಂಘಟಿಸಿದ್ದಾರೆ.

ರಾಜಸ್ಥಾನದ ಜಾಲೊಡ್‍ ನಗರದಿಂದ 1944ರಲ್ಲಿ ಇಲ್ಲಿಗೆ ಬಂದು ನೆಲೆಸಿರುವ ಪಾರಸಮಲ್‍ ಅವರೂ ಕನ್ನಡದ ಮೇಲಿಟ್ಟಿರುವ ಅಭಿಮಾನ ವಿಶಿಷ್ಟವಾದದ್ದು. ರಾಜಸ್ಥಾನಿ ಮಾತೃ ಭಾಷೆಯಾದರೂ ಇಲ್ಲಿಯ ಸರ್ಕಾರಿ ಶಾಲೆಯಲ್ಲಿಯೇ ಎಸ್ಸೆಸ್ಸೆಲ್ಸಿಯವರೆಗೂ ಓದಿದ್ದಾರೆ. ಪಟ್ಟಣದ, ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಕನ್ನಡ ಶಾಲೆಗಳಲ್ಲಿ ಕನ್ನಡಪರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಕನ್ನಡ ಸಾಹಿತ್ಯ ಸಂಘ, ಮಕ್ಕಳ ಸಾಹಿತ್ಯಗಳಲ್ಲೂ ಸೇವೆ ಸಲ್ಲಿಸಿದ್ದಾರೆ. ಮಕ್ಕಳ ಸಾಹಿತ್ಯ, ಹರಪನಹಳ್ಳಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಏಕೀಕರಣ ಚಳವಳಿಗಳನ್ನು ಅವರೂ ಈಗಲೂ ಸ್ಮರಿಸುತ್ತಾರೆ. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ
₹ 25 ಸಾವಿರ ದತ್ತಿ, ಮೇಗಳಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹ 27 ಸಾವಿರ ದತ್ತಿ ನಿಧಿ ಸ್ಥಾಪಿಸಿ, ದತ್ತಿಯ ಬಡ್ಡಿ ಹಣದಿಂದ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.

10 ವರ್ಷಗಳ ಹಿಂದೆ ಆರಂಭವಾಗಿರುವ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯ ಅಧ್ಯಕ್ಷೆ ಸಪ್ನಾ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಪ್ರತಿ ವರ್ಷ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ‘ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಮಾಡಿ, ಕನ್ನಡವನ್ನು ಪ್ರೋತ್ಸಾಹಿಸಲಾಗುತ್ತಿದೆ.

ವಿಶೇಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT