ಶನಿವಾರ, ಜನವರಿ 28, 2023
20 °C
ಸ್ವ–ಸಹಾಯಹಸ್ತ

ಸ್ವಾವಲಂಬನೆಗೆ ಪುಷ್ಟಿ ನೀಡಿದ ‘ಸ್ವ –ಸಹಾಯ’

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆರ್ಥಿಕ ಸ್ವಾವಲಂಬನೆಗೆ ಬಡತನ, ಅಂಗವೈಕಲ್ಯ ಅಡ್ಡಿಯಾಗದು ಎಂದು ತೋರಿಸಿಕೊಟ್ಟಿದ್ದಾರೆ ದಾವಣಗೆರೆ ತಾಲ್ಲೂಕಿನ ಚಿತ್ತನಹಳ್ಳಿಯ ಕೆ. ಹೇಮಲತಾ ಹಾಗೂ ಅವರ ಕುಟುಂಬ. ಅವರಿಗೆ ಇಂಥ ಆತ್ಮಸ್ಥೈರ್ಯ ಬರುವಂತೆ ಮಾಡಿದ್ದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘ.

ಚಿತ್ತನಹಳ್ಳಿಯಲ್ಲಿ ವಾಸವಿರುವ ಇವರ ಕುಟುಂಬದಲ್ಲಿ ಬರೊಬ್ಬರಿ 12 ಜನ ಇದ್ದಾರೆ. ಕರಿಬಸಪ್ಪ ಅವರ 7 ಮಕ್ಕಳಲ್ಲಿ ಮೂವರಿಗೆ ಅಂಗವೈಕಲ್ಯದ ಸಮಸ್ಯೆ ಇದೆ. ಅವರ ತಂಗಿ ಪೋಲಿಯೊ ಪೀಡಿತರು. ಅಂಗವೈಕಲ್ಯದ ನೋವನ್ನು ಈ ಕುಟುಂಬ ಒಟ್ಟಾಗಿ ಎದುರಿಸಿದೆ. ಪರಸ್ಪರ ಸಹಕಾರ ಮನೋಭಾವದಿಂದ ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಗಟ್ಟಿಯಾಗಿರುವ ಕಥೆಯೇ ಸ್ಫೂರ್ತಿದಾಯಕ. ಹೇಮಲತಾ, ಅವರ ಅಕ್ಕ ಹಾಗೂ ತಮ್ಮನಿಗೆ ಕೈಕಾಲುಗಳ ಅಂಗವೈಕಲ್ಯದಿಂದಾಗಿ ಓಡಾಡಲು ಕಷ್ಟ. ಆದರೆ, ತಂದೆ ಕರಿಬಸಪ್ಪ ಛಲ
ಬಿಡದೇ ಇವರನ್ನು ಎತ್ತಿಕೊಂಡು ಶಾಲೆಗೆ ಕರೆದೊಯ್ದು, ವಾಪಸ್‌ ಕರೆತಂದಿದ್ದರಿಂದ ಎಸ್ಸೆಸ್ಸೆಲ್ಸಿವರೆಗೆ ಕಲಿತಿದ್ದಾರೆ.

ಆರಂಭದಲ್ಲಿ ಮನೆಯಲ್ಲೇ ದಿನಕ್ಕೆ 50 ರೊಟ್ಟಿ ಮಾಡುತ್ತಿದ್ದ ಹೇಮಲತಾ ಅವರು 10 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಮೈಲಾರಲಿಂಗೇಶ್ವರ ಸ್ವ–ಸಹಾಯ ಸಂಘ’ದಲ್ಲಿ ಸದಸ್ಯರಾದರು. ಆರಂಭದಲ್ಲಿ ₹ 10,000 ಸಾಲ ಪಡೆದು ಹಸು ಖರೀದಿಸಿದರು. ಅದನ್ನು ಅವರ ಸಹೋದರರು ಸಾಕಣೆ ಮಾಡಿದರು. ನಂತರ ಕ್ರಮೇಣ ಮತ್ತಷ್ಟು ಹಸು ಹಾಗೂ ಎಮ್ಮೆ ಖರೀದಿ ಮಾಡಿದ್ದಾರೆ. 2 ವರ್ಷಗಳ ಹಿಂದೆ ಮಾಗನಹಳ್ಳಿಗೆ ಹೋಗಿ ರೊಟ್ಟಿ ಬಳಕೆ ನೋಡಿ ಬಂದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮತ್ತೆ ಸಾಲ ಪಡೆದು ₹ 64,000 ವೆಚ್ಚದ ಸೋಲಾರ್ ರೊಟ್ಟಿ ತಯಾರಿಕಾ ಯಂತ್ರ ಖರೀದಿಸಿದರು. ಅಂದಿನಿಂದ ದಿನವೂ ಕನಿಷ್ಠ 400–500ರಷ್ಟು ಜೋಳದ ರೊಟ್ಟಿ ಹಾಗೂ ಗೋಧಿ ಚಪಾತಿಗಳನ್ನು ತಯಾರಿಸುತ್ತಾರೆ. ಅವುಗಳನ್ನು ಇವರ ಸೋದರರು ದಾವಣಗೆರೆಯ ವಿದ್ಯಾರ್ಥಿ ನಿಲಯಗಳಿಗೆ ತೆಗೆದುಕೊಂಡು ಹೋಗಿ
ಮಾರಾಟ ಮಾಡುತ್ತಿದ್ದಾರೆ. ಹೇಮಲತಾ, ಅಕ್ಕ ಹೊನ್ನಮ್ಮ, ಅವರ ತಂದೆಯ ತಂಗಿ ಬಸಮ್ಮ (ಪೋಲಿಯೊ ಪೀಡಿತರು), ತಮ್ಮ ಗಂಗಾಧರ ಹಾಗೂ ಮನೆಯ ಸೊಸೆಯಂದಿರಾದ ನಾಗರತ್ನಾ, ಶ್ವೇತಾ ಸೇರಿ ರೊಟ್ಟಿ ತಯಾರಿಸುತ್ತಾರೆ. ಅಲ್ಲದೆ, ಇಬ್ಬರು ಸ್ಥಳೀಯರಿಗೂ ರೊಟ್ಟಿ ಮಾಡುವ ಉದ್ಯೋಗ ನೀಡಿದ್ದಾರೆ. ದಿನವೂ 15 ಕೆ.ಜಿ. ಹಿಟ್ಟಿನ ರೊಟ್ಟಿಗಳನ್ನು ಮಾಡುತ್ತಾರೆ. ಬೆಳಿಗ್ಗೆ 11ರಿಂದ ಸಂಜೆ 5ರವರೆಗೂ ಕಾಯಕ ನಡೆಯುತ್ತದೆ.

‘ದಾವಣಗೆರೆ ದುಗ್ಗಮ್ಮನ ಜಾತ್ರೆಯ ಸಮಯದಲ್ಲಿ ರೊಟ್ಟಿಗಳಿಗೆ ಬಹುಬೇಡಿಕೆ ಇರುತ್ತದೆ. ಆಗ ದಿನಕ್ಕೆ 5,000–6,000 ರೊಟ್ಟಿಗಳು ಮಾರಾಟವಾಗುತ್ತವೆ. ₹ 4ಕ್ಕೆ ಒಂದು ರೊಟ್ಟಿಯಂತೆ ಮಾರುತ್ತೇವೆ. ವಾರಕ್ಕೆ ₹ 7,000ದಷ್ಟು ಆದಾಯವಾಗುತ್ತದೆ. ₹ 3,000ದಷ್ಟು ಲಾಭವಾಗುತ್ತದೆ. ವಾರಕ್ಕೆ ಏನಿಲ್ಲವೆಂದರೂ ₹ 1,000 ಉಳಿತಾಯ ಸಾಧ್ಯ’ ಎನ್ನುತ್ತಾರೆ ಹೇಮಲತಾ.

‘ಇಲ್ಲಿಯವರೆಗೆ ಒಟ್ಟು ₹ 5.54 ಲಕ್ಷ ಸಾಲ ಪಡೆದಿರುವ ಹೇಮಲತಾ ಅವರು ಹಸು ಖರೀದಿ, ಕೊಟ್ಟಿಗೆ ನಿರ್ಮಾಣ ಹಾಗೂ ರೊಟ್ಟಿ ತಯಾರಿಕಾ ಘಟಕಗಳನ್ನು ಆರಂಭಿಸಿ ಸಾಲದ ಸದುಪಯೋಗ ಮಾಡಿಕೊಂಡು ಸ್ವಾವಲಂಬನೆ ಸಾಧಿಸಿದ್ದಾರೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಹಿರಿಯ ನಿರ್ದೇಶಕ ವಿ. ವಿಜಯಕುಮಾರ ನಾಗನಾಳ ತಿಳಿಸಿದರು.

ವಿವಾಹ ಮಾಡಲು ತಂದೆ ಕರಿಬಸಪ್ಪ ಅವರು ಇಚ್ಛಿಸಿದರೂ ಹೇಮಲತಾ ಅವರೇ ತಾವು ಸ್ವಾವಲಂಬಿ ಜೀವನ ನಡೆಸುವುದಾಗಿ ತಿಳಿಸಿ, ಹೇಳಿದಂತೆ ಮಾಡಿ ತೋರಿಸಿ ಸೈ ಎನಿಸಿದ್ದಾರೆ. ಬಾಗಿಲು ತೋರಣ ಸಿದ್ಧಪಡಿಸುವುದು, ಬ್ಯೂಟಿ ಪಾರ್ಲರ್‌, ಹೈನುಗಾರಿಕೆ, ಮದುವೆಗೆ ಒಡವೆ ಸೆಟ್‌ ಬಾಡಿಗೆ ನೀಡುವುದನ್ನೂ ಇವರು ಉಪ ಉದ್ಯೋಗಗನ್ನಾಗಿ ಮಾಡಿಕೊಂಡು ಸಮಯದ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಸಂಪರ್ಕ ಸಂಖ್ಯೆ: 6361036258.

 

ಹೈನುಗಾರಿಕೆಯೂ ಯಶಸ್ವಿ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಪಡೆದ ಸಾಲದಿಂದ ಇಲ್ಲಿಯವರೆಗೆ 4 ಹಸುಗಳನ್ನು ಹೇಮಲತಾ ಖರೀದಿಸಿದ್ದಾರೆ. ಇದನ್ನೂ ಸೇರಿ ಇವರ ಮನೆಯಲ್ಲೀಗ 20 ದನಕರು–ಎಮ್ಮೆಗಳು ಇವೆ. ಇವನ್ನೆಲ್ಲ ಅಣ್ಣ–ತಮ್ಮಂದಿರು ನೋಡಿಕೊಂಡು ಹೈನುಗಾರಿಕೆ ಮಾಡುತ್ತಿದ್ದಾರೆ. ಇದರಿಂದ ಕುಟುಂಬಕ್ಕೆ ತಿಂಗಳಿಗೆ ₹ 25,000ದಷ್ಟು ಆದಾಯ ಬರುತ್ತಿದೆ. ಗೊಬ್ಬರವನ್ನು ತಮ್ಮ ಹೊಲಕ್ಕೆ ಹಾಕುವುದಲ್ಲದೇ ಇತರರಿಗೂ ಮಾರಾಟ ಮಾಡುತ್ತಿದ್ದಾರೆ.

....

ಸಂಪೂರ್ಣ ಸೋಲಾರ್‌ ಆಧಾರದ ಮೇಲೆ ಕೆಲಸ ಮಾಡುವ ರೊಟ್ಟಿ ತಯಾರಿಕಾ ಯಂತ್ರ ನನಗೆ ಜೀವನವನ್ನೇ ಕಟ್ಟಿ ಕೊಟ್ಟಿದೆ.
ಕೆ. ಹೇಮಲತಾ, ಚಿತ್ತನಹಳ್ಳಿ

.....

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದಾವಣಗೆರೆ ಜಿಲ್ಲೆಯಲ್ಲಿ 30,116 ಪ್ರಗತಿ ಬಂಧು ಹಾಗೂ ಸ್ವ–ಸಹಾಯ ಸಂಘಗಳನ್ನು ರಚಿಸಲಾಗಿದೆ. ಇವುಗಳಲ್ಲಿ 2,92,660 ಸದಸ್ಯರು ಇದ್ದಾರೆ. ಈವರೆಗೆ ₹ 190 ಕೋಟಿ ಉಳಿತಾಯ ಮಾಡಿದ್ದಾರೆ.
-ವಿ. ವಿಜಯಕುಮಾರ್‌ ನಾಗನಾಳ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಹಿರಿಯ ನಿರ್ದೇಶಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು