ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಮದಾರ ವಿರುದ್ಧದ ಶಾಮನೂರು ಹೇಳಿಕೆ ಖಂಡನೀಯ’

Last Updated 6 ಸೆಪ್ಟೆಂಬರ್ 2021, 13:09 IST
ಅಕ್ಷರ ಗಾತ್ರ

ದಾವಣಗೆರೆ: ‘ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಎಂ. ಜಾಮದಾರ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ನೀಡಿರುವ ಹೇಳಿಕೆ ಖಂಡನೀಯ. ಹಿರಿಯರಾದ ಶಾಮನೂರು ರಾಜಕೀಯ ಉದ್ದೇಶಕ್ಕೆ ಇಂತಹ ಹೇಳಿಕೆ ನೀಡಬಾರದು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅಗಡಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾಮದಾರ ಅಧಿಕಾರದಲ್ಲಿ ಇದ್ದಾಗ ಯಾರಿಗೂ ಸಹಾಯ ಮಾಡಲಿಲ್ಲ ಎಂದು ಶಾಮನೂರು ಹೇಳಿದ್ದಾರೆ. ಜಾಮದಾರ ಮಾಡಿರುವ ಕೆಲಸ ಏನು ಎಂಬುದು ಸಮುದಾಯದವರಿಗೆ ಗೊತ್ತಿದೆ. ಲಿಂಗಾಯತ ಧರ್ಮದ ಬಗ್ಗೆ ಹಲವು ಮೌಲಿಕ ಅಧ್ಯಯನ ನಡೆಸಿದ್ದಾರೆ. ಅವರು ಪುರಾವೆ ಇಟ್ಟುಕೊಂಡೇ ಮಾತನಾಡುತ್ತಾರೆ. ಅವರು ಈಚೆಗೆ ‘ಅಖಿಲ ಭಾರತ ವೀರಶೈವ ಮಹಾಸಭಾ ಈ ಸತ್ಯಗಳನ್ನು ಅರ್ಥಮಾಡಿಕೊಳ್ಳುವುದೇ’ ಎಂಬ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಇದನ್ನು ಸಹಿಸದೇ ಶಾಮನೂರು ಶಿವಶಂಕರಪ್ಪ ಅವರು ಹೇಳಿಕೆ ನೀಡಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಶಾಮನೂರು ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

ಹಿರಿಯರಾದ ಶಾಮನೂರು ಇಲ್ಲಸಲ್ಲದ ಹೇಳಿಕೆ ನೀಡಿ ಪರಸ್ಪರ ಗೌರವ ಕಳೆದುಕೊಳ್ಳಬಾರದು. ಯಾವ ಅಪೇಕ್ಷೆಯೂ ಇಲ್ಲದೇ ನಿವೃತ್ತಿಯ ನಂತರವೂ ಲಿಂಗಾಯತ ಸಮಾಜಕ್ಕೆ ದುಡಿಯುತ್ತಿರುವ ಜಾಮದಾರ ಬಗ್ಗೆ ಇನ್ನು ಮುಂದೆ ಹೇಳಿಕೆ ನೀಡಬಾರದು ಎಂದು ಅವರು ಎಚ್ಚರಿಸಿದರು.

‘ಸಂಸತ್‌ ಭವನದ ಸೆಂಟ್ರಲ್‌ ವಿಸ್ತಾಕ್ಕೆ ಅನುಭವ ಮಂಟಪ ಹೆಸರಿಡಿ’:

ಸಂಸತ್‌ ಭವನದ ಸೆಂಟ್ರಲ್‌ ವಿಸ್ತಾದ ಸೆಂಟ್ರಲ್‌ ಹಾಲ್‌ಗೆ ಅನುಭವ ಮಂಟಪ ಹೆಸರಿಡಬೇಕು ಎಂದು ಒತ್ತಾಯಿಸಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಮರುಳಸಿದ್ದಯ್ಯ ಬಸವನಾಳು, ಹುಚ್ಚಪ್ಪ ಮಾಸ್ತರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT