ಲಂಚದ ಹಣದಿಂದ ಪ್ರತ್ಯೇಕ ಧರ್ಮ ಹೋರಾಟ-ಶಾಮನೂರು ಶಿವಶಂಕರಪ್ಪ ಆರೋಪ

7
‘ವೀರಶೈವ ಧರ್ಮ ರತ್ನ’ ಬಿರುದು ಸ್ವೀಕರ

ಲಂಚದ ಹಣದಿಂದ ಪ್ರತ್ಯೇಕ ಧರ್ಮ ಹೋರಾಟ-ಶಾಮನೂರು ಶಿವಶಂಕರಪ್ಪ ಆರೋಪ

Published:
Updated:
Prajavani

ದಾವಣಗೆರೆ: ‘ಲಂಚದ ಹಣ ಅವರಿಂದ ಇಷ್ಟೆಲ್ಲ ಮಾಡಿಸುತ್ತಿದೆ. ಸ್ವಂತ ದುಡಿದ ಹಣವಾಗಿದ್ದರೆ ಹೀಗೆ ಹೋರಾಟ ಮಾಡುತ್ತಿರಲಿಲ್ಲ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ವೀರಶೈವ ಮಠಾದೀಶರ ಪರಿಷತ್ತು ನಗರದ ರೇಣುಕ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವೀರಶೈವ ಲಿಂಗಾಯತ ಧರ್ಮೋತ್ತೇಜನ ಸಮಾರಂಭದಲ್ಲಿ ‘ವೀರಶೈವ ಧರ್ಮ ರತ್ನ’ ಬಿರುದು ಸ್ವೀಕರಿಸಿ ಅವರು ಮಾತನಾಡಿದರು.

‘ನಮ್ಮವರೇ ಕೆಲವರು ಸಮಾಜವನ್ನು ಹಾಳು ಮತ್ತು ಹೋಳು ಮಾಡುವ ಕೆಲಸ ಮಾಡಿದರು. ಅದು ಇನ್ನೂ ರಿಪೇರಿ ಆಗಿಲ್ಲ. ಮೇಲಿಂದ ಮೇಲೆ ನಮ್ಮದು ಹೋರಾಟ ಮುಗಿದಿಲ್ಲ; ದೆಹಲಿಗೆ ಹೋಗಿ ಸಭೆ ನಡೆಸುತ್ತೇವೆ ಎನ್ನುತ್ತಿದ್ದಾರೆ. ಹಣದ ಸೊಕ್ಕು ಜಾಸ್ತಿಯಾಗಿ ಸಮಾಜವನ್ನು ಒಡೆಯುವಂತಹ ಕೆಲಸವನ್ನು ಮಾಡುತ್ತಿರುವ ಜನ ಬಹಳ ಇದ್ದಾರೆ. ಇಂಥವರು ನಮ್ಮ ಪಕ್ಕದಲ್ಲೇ ಇರುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವೀರಶೈವ ಮಹಾಸಭಾದಲ್ಲಿ ಮುದಿ ಎತ್ತುಗಳಿವೆ. ಎಷ್ಟು ದಿನವೂ ಇವರಿಂದ ಗಾಡಿ ಓಡಿಸಲು ಸಾಧ್ಯ ಎಂದು ಕೇಳುತ್ತಿದ್ದರು. ಆದರೆ, ಈ ಮುದಿ ಎತ್ತು ಗಾಡಿ ಓಡಿಸಿ ಗೆದ್ದೇ ಬಿಟ್ಟಿದೆ’ ಎಂದು ತಮ್ಮದೇ ಶೈಲಿಯಲ್ಲಿ ಎದುರಾಳಿಗಳ ಮೇಲೆ ಚಾಟಿ ಬೀಸಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ನಮ್ಮ ಸಮಾಜದವರೇ ಹಲವು ಚುನಾವಣೆಯಲ್ಲಿ ಸೋತಿದ್ದಾರೆ. ಎಂ.ಬಿ. ಪಾಟೀಲ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಗೆದ್ದಿದ್ದಾರೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲೂ ಇದರ ಪ್ರಭಾವದಿಂದ ಮಲ್ಲಿಕಾರ್ಜುನ ಸೋಲುವಂತಾಯಿತು. ದಕ್ಷಿಣ ಕ್ಷೇತ್ರದಲ್ಲಿ ಲಿಂಗಾಯತರು ಎನ್ನುವಂತಹ ಯಾವುದೇ ಗಂಡಸರು ಇರಲಿಲ್ಲ. ಹೀಗಾಗಿ ನನಗೆ ತೊಂದರೆ ಆಗಲಿಲ್ಲ’ ಎಂದು ಶಾಮನೂರು ಬೇಸರ ವ್ಯಕ್ತಪಡಿಸಿದರು.

‘ಸಮಾಜವನ್ನು ಒಂದು ಮಾಡಲು ಗಟ್ಟಿ ನಿಲುವು ತಳೆಯುವ ಮೂಲಕ ನನ್ನ ಕರ್ತವ್ಯ ಮಾಡಿದ್ದೇನೆ. ಈ ವಿಚಾರದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರೂ ಮಹಾಸಭಾದ ನಿರ್ಧಾರಕ್ಕೆ ಬದ್ಧ ಎಂದು ಹೇಳುವ ಮೂಲಕ ಬೆಂಬಲಕ್ಕೆ ನಿಂತರು’ ಎಂದು ಸ್ಮರಿಸಿದರು.

ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ, ‘ಪರಂಪರೆಯ ವಿರುದ್ಧವಾಗಿ ಮಾತನಾಡಿದರೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ಕೊಡುತ್ತವೆ; ಸಮಾಜದಲ್ಲಿ ತಾವು ಗುರುತಿಸಿಕೊಳ್ಳಬೇಕು ಎಂಬ ಹುಚ್ಚು ಕೆಲವರಿಗೆ ಇದೆ. ವೀರಶೈವ ಧರ್ಮದ ಅನ್ನವನ್ನು ತಿಂದವರೇ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾವವನ್ನು ತಿರಸ್ಕರಿಸಿದೆ. ಕಿಡಿ ಹೊತ್ತಿಸಿದ ಕಿಡಿಗೇಡಿಗಳು ಏನೇ ಮಾಡಿದರೂ, ಕಾನೂನು ಹೋರಾಟ ನಡೆಸಿದರೂ ಅವರಿಗೆ ಅಪಜಯ ಕಟ್ಟಿಟ್ಟ ಬುತ್ತಿ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಯಡಿಯೂರು ಸ್ವಾಮೀಜಿ, ವಿಮಲಮುಕ್ತಿ ರೇಣುಕ ಸ್ವಾಮೀಜಿ ಹಾಗೂ ಹಲವು ಮಠಗಳ ಸ್ವಾಮೀಜಿ ಹಾಜರಿದ್ದರು.

ವೀರಶೈವ ಮಹಾಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ, ವೀರಶೈವ ಸಮಾಜದ ಮುಖಂಡರಾದ ಅಣಬೇರು ರಾಜಣ್ಣ, ಬಿ.ಎಸ್‌. ನಟರಾಜ್‌, ವಕೀಲ ಗಂಗಾಧರ ಗುರುಮಠ, ಎಂ.ಎಸ್‌. ಪಾಟೀಲ ನರಿಬೋಳ, ದಿವ್ಯಾ ಹಾಗರಗಿ ಸೇರಿ ವೀರಶೈವ–ಲಿಂಗಾಯತ ಧರ್ಮ ಹೋರಾಟದಲ್ಲಿ ಪಾಲ್ಗೊಂಡಿದ್ದ ಹಲವರಿಗೆ ‘ವೀರಶೈವ ಧರ್ಮ ವಿಭೂಷಣ’ ಬಿರುದು ನೀಡಿ ಗೌರವಿಸಲಾಯಿತು.

ಶಾಮನೂರು ಮಹಾಸಭಾದ ಆಜೀವ ಅಧ್ಯಕ್ಷರಾಗಲಿ: ರಂಭಾಪುರಿ ಸ್ವಾಮೀಜಿ

‘ವೀರಶೈವ ಧರ್ಮದ ಎಲ್ಲಾ ಒಳ ಪಂಗಡಗಳನ್ನು ಒಂದುಗೂಡಿಸಿಕೊಂಡು ಹೋಗುವ ಎದೆಗಾರಿಕೆ ಶಾಮನೂರು ಶಿವಶಂಕರಪ್ಪ ಅವರಿಗೆ ಮಾತ್ರ ಇದೆ. ಹೀಗಾಗಿ ಅಖಿಲ ಭಾರತ ವೀರಶೈವ ಮಹಾಸಭಾಕ್ಕೆ ಅವರೇ ಆಜೀವ ಅಧ್ಯಕ್ಷರಾಗಿರಬೇಕು ಎಂದು ಪಂಚಪೀಠವೂ ಆಶಿಸುತ್ತಿದೆ’ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

‘ಮಾರ್ಚ್‌ನಲ್ಲಿ ಮಹಾಸಭಾಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಲಿದೆ. ಸಮಾಜದ ಹಿತದೃಷ್ಟಿಯಿಂದ ಶಾಮನೂರು ಅವರನ್ನೇ ಮತ್ತೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಬೇಕು. ವೀರಶೈವ ಧರ್ಮ ರಥವನ್ನು ಅವರೇ ಮತ್ತೆ ಎಳೆಯಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

‘ವೀರಶೈವ ಧರ್ಮದ ಎಲ್ಲಾ ಒಳ ಪಂಗಡಗಳ ಮುಖಂಡರನ್ನು ಮಹಾಸಭಾ ಒಂದು ಕಡೆ ಸಭೆ ಕರೆದು, ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ ಮಾತ್ರ ರಾಜಕೀಯ ಪ್ರಾತಿನಿಧ್ಯ ಸಿಗಲಿದೆ ಎಂದು ತಿಳಿವಳಿಕೆ ನೀಡಬೇಕು. ರಾಷ್ಟ್ರೀಯ ವೀರಶೈವ ಮಠಾದೀಶರ ಪರಿಷತ್ತು ಮಹಾಸಭಾಕ್ಕೆ ಪೂರಕವಾಗಿ ಶಕ್ತಿ ಕೊಡುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !