ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಜಿ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯೋಣ: ಶಾಮನೂರು ಶಿವಶಂಕರಪ್ಪ

Published 20 ಫೆಬ್ರುವರಿ 2024, 5:15 IST
Last Updated 20 ಫೆಬ್ರುವರಿ 2024, 5:15 IST
ಅಕ್ಷರ ಗಾತ್ರ

ದಾವಣಗೆರೆ: ‘ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಒಂದು ಸಮಾಜದ ಉದ್ಧಾರಕ್ಕಾಗಿ ಹೋರಾಡದೇ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿಗಾಗಿ ಹೋರಾಟ ಮಾಡಿದ್ದರು. ಅವರ ಮಾರ್ಗದರ್ಶನದಲ್ಲಿ ನಡೆಯೋಣ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಅಭಿಪ್ರಾಯಪಟ್ಟರು.    

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.            

‘ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿತು. ಆದರೆ ಮಹಾರಾಷ್ಟ್ರ ಸರ್ಕಾರ ಶಿವಾಜಿಯನ್ನು ಈ ಹಿಂದೆಯೇ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿತ್ತು. ಬಸವಣ್ಣ ಹಾಗೂ ಶಿವಾಜಿ ಯಾವುದೇ ಒಂದು ಜಾತಿಗೆ ಸೀಮಿತರಾಗದೇ ಎಲ್ಲ ವರ್ಗದವರ ಪರವಾಗಿ ಹೋರಾಟ ಮಾಡಿದವರು. ಇವರು ಯಾರೊಬ್ಬರ ಸ್ವತ್ತೂ ಅಲ್ಲ. ಎಲ್ಲರಿಗೂ ಬೇಕಾದವರು. ಅವರ ಮಾರ್ಗದರ್ಶನದಲ್ಲಿ ನಡೆಯೋಣ’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ‘ವಿಯೆಟ್ನಾಂನಂತಹ ಸಣ್ಣ ದೇಶ ಅಮೆರಿಕಾವನ್ನು ಸೋಲಿಸಲು ಶಿವಾಜಿಯ ಗೆರಿಲ್ಲಾ ಯುದ್ದ ತಂತ್ರ ನೆರವಾಯಿತು. ಈ ಕಾರಣ ವಿಯೆಟ್ನಾಂ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದಾಗ ಶಿವಾಜಿ ಸಮಾಧಿಗೆ ಭೇಟಿ ನೀಡಿದ್ದರು. ಶಿವಾಜಿಗೆ ಜೈ ಎಂದರೆ ಅದನ್ನು ಕೋಮುವಾದ ಎಂದುಕೊಳ್ಳುತ್ತಾರೆ. ಆದರೆ ಶಿವಾಜಿ ಸೈನ್ಯದಲ್ಲಿ ಮುಸ್ಲಿಂಮರಿಗೂ ಅವಕಾಶ ಕಲ್ಪಿಸಿದ್ದರು’ ಎಂದು ಹೇಳಿದರು.

‘ಶಿವಾಜಿ ಗದಗ ಜಿಲ್ಲೆಯ ಸೊರಟೂರಿನಲ್ಲಿ ಜನಿಸಿದ್ದು, ಇದು ಬಹಳ ಜನರಿಗೆ ಗೊತ್ತಿಲ್ಲ. ಶಿವಾಜಿಯ ತಂದೆ ಷಹಾಜಿ ಸಮಾಧಿ ಚನ್ನಗಿರಿಯಲ್ಲಿದೆ. ಶಿವಾಜಿಯ ಅಣ್ಣ ಶಾಂಬಾಜಿ ಸಮಾಧಿ ಕೊಪ್ಪಳ ಜಿಲ್ಲೆಯಲ್ಲಿದೆ. ಕರ್ನಾಟಕಕ್ಕೂ ಶಿವಾಜಿಗೂ ಅನನ್ಯ ಸಂಬಂಧವಿದೆ’ ಎಂದು ಹೇಳಿದರು.

ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಶಿವಾಜಿ ಸದ್ಗುಣಗಳ ಸಾಕಾರ ರೂಪ, ಎಲ್ಲಾ ಮೌಲ್ಯಗಳ ಪ್ರತಿರೂಪ. ಅವರ ಆಳ್ವಿಕೆಯಲ್ಲಿ ಮಹಿಳೆಯರಿಗೆ ಪ್ರಥಮ ಆದ್ಯತೆ ನೀಡಿದ್ದರು. ಅದಕ್ಕಾಗಿಯೇ ಶಿವಾಜಿ ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ. ಶಿವಾಜಿ ಎಂದರೆ ಶಕ್ತಿವಂತ, ವಿಚಾರವಂತ, ಬುದ್ಧಿವಂತ, ಚಾಣಾಕ್ಷತನದ ವ್ಯಕ್ತಿ ಹಾಗೂ ಜವಾಬ್ದಾರಿಯುತ ನಾಯಕ. ಹಿಂದೂ ಸಾಮ್ರಾಜ್ಯ ಕಟ್ಟಿದ ಶಿವಾಜಿಯಂತಹ ಆದರ್ಶ ನಾಯಕ, ಸಾಂಸ್ಕೃತಿಕ ನಾಯಕ ಮಾನವ ಕುಲಕ್ಕೆ ಆದರ್ಶ’ ಎಂದು  ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣನಾಯ್ಕ ಮಾತನಾಡಿ, ‘ಶಿಕ್ಷಣ ಸಮಾಜದ ಅಸ್ತ್ರವಾಗಿದ್ದು, ಯಾರ ಸ್ವತ್ತು ಅಲ್ಲ. ಶಿಕ್ಷಣಕ್ಕೆ ಒತ್ತು ನೀಡಿದರೆ ಸಮಾಜ ಮುಂದೆ ಬರಬಹುದು. ಯಾವುದೇ ಒಂದು ಜಯಂತಿಗೆ ಇತರೆ ಸಮಾಜದವರನ್ನು ಆಹ್ವಾನಿಸಿದಾಗ ಜಾತೀಯತೆ ತೊಲಗುತ್ತದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರಿನ್ ಭಾನು ಎಸ್. ಬಳ್ಳಾರಿ, ಸಂಘದ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್, ಖಜಾಂಚಿ ಗೋಪಾಲರಾವ್ ಮಾನೆ, ಕಾರ್ಯದರ್ಶಿ ಯಲ್ಲಪ್ಪ ಢಮಾಳೆ, ಶಹಾಜಿ ಮಹಾರಾಜ ಭೋಸ್ಲೆ ಅಭಿವೃದ್ಧಿ ಸ್ಮಾರಕ ಸಮಿತಿಯ ಅಧ್ಯಕ್ಷ ವೈ.ಮಲ್ಲೇಶ್, ಜೀಜಾಮಾತಾ ಮಹಿಳಾ ಮಂಡಳಿ ಅಧ್ಯಕ್ಷೆ ಗೌರಬಾಯಿ ಮೋಹಿತೆ, ಮಾಜಿ ಉಪ ಮೇಯರ್ ಗಾಯಿತ್ರಿಬಾಯಿ ಖಂಡೋಜಿರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ರವಿಚಂದ್ರ, ಮುಖಂಡರಾದ ಬಾಬುರಾವ್ ಸಾಳಂಕಿ, ಅನಿತಾಬಾಯಿ ಮಾಲತೇಶ್ ಇದ್ದರು.

ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಬಳಿ ಇರುವ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತ್ಯುತ್ಸವದ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮೇಯರ್ ವಿನಾಯಕ್ ಪೈಲ್ವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಸಮಾಜದ ಮುಖಂಡರು ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಬಳಿ ಇರುವ ಛತ್ರಪತಿ ಶಿವಾಜಿ ಮಹಾರಾಜರ 397ನೇ ಜಯಂತ್ಯುತ್ಸವದ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮೇಯರ್ ವಿನಾಯಕ್ ಪೈಲ್ವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಉಪವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಸಮಾಜದ ಮುಖಂಡರು ಇದ್ದಾರೆ –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT