ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರತಿಮ ಸನ್ಯಾಸಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ

Published 20 ಸೆಪ್ಟೆಂಬರ್ 2023, 6:52 IST
Last Updated 20 ಸೆಪ್ಟೆಂಬರ್ 2023, 6:52 IST
ಅಕ್ಷರ ಗಾತ್ರ

ತರಳಬಾಳು ಜಗದ್ಗುರು ಬೃಹನ್ಮಠದ 20ನೇ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಶ್ರೀಗಳವರು (1914-1992) ದಂತಕತೆಯಾಗಿದ್ದವರು. ಅವರ ಕಾಯಕ ಶ್ರದ್ಧೆ, ಸಾಮಾಜಿಕ ಕಳಕಳಿ, ಕರ್ತವ್ಯನಿಷ್ಠೆ, ಅನ್ಯಾದೃಶವಾದವು. ಶತಮಾನಗಳಿಂದ ತುಳಿತಕ್ಕೊಳಗಾಗಿದ್ದ ಜನಸಮುದಾಯದ ಉದ್ಧಾರಕ್ಕೆ ಅಹರ್ನಿಶಿ ಶ್ರಮಿಸಿ, ಅವರ ಪಾಲಿನ ಭಾಗ್ಯವಿಧಾತನೆನಿಸಿ, ತಮ್ಮ ಜೀವಿತದ ಸಾರ್ಥಕ್ಯವನ್ನು ಕಂಡುಕೊಂಡವರು.

ಗ್ರಾಮೀಣ ಜನತೆಯ, ವಿಶೇಷವಾಗಿ ಹೆಣ್ಣು ಮಕ್ಕಳ, ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದನ್ನು ಮನಗಂಡಿದ್ದ ಸ್ವಾಮೀಜಿಯವರು 1946ರಲ್ಲಿ ಸಿರಿಗೆರೆಯಲ್ಲಿ ಪ್ರೌಢಶಾಲೆ ಆರಂಭಿಸಿದರು. 1962ರಲ್ಲಿ ಅವರೇ ಪ್ರಾರಂಭಿಸಿದ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯು ಇಂದು ನಾಡಿನ ಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಮಧ್ಯ ಕರ್ನಾಟಕದ ಹರಿಮೂರು ಜಿಲ್ಲೆಗಳಲ್ಲಿ 258 ವಿದ್ಯಾಸಂಸ್ಥೆಗಳು ಇದರ ಆಶ್ರಯದಲ್ಲಿ ನಡೆಯುತ್ತಿವೆ. ಸಂಸ್ಥೆಯ ಈ ಶಾಲೆ–ಕಾಲೇಜುಗಳಲ್ಲಿ ಶೇ 90ರಷ್ಟು ಹಳ್ಳಿಗಾಡಿನಲ್ಲಿ ಸ್ಥಾಪನೆಯಾಗಿವೆ. ಈ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಇಂದು 50,000  ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ.

ಜೀವನದಲ್ಲಿ ಯಶಸ್ಸು ಪಡೆಯಲು ಕಾಯಕ, ಕಾಲ ಹಾಗೂ ಕಾಸು– ಇವುಗಳ ಮಹತ್ವವನ್ನು ಅರಿತು ಆಚರಿಸುವುದು ಅತ್ಯವಶ್ಯಕ ಎಂಬುದನ್ನು ಅವರು ನಡೆದು ತೋರಿಸಿದರು. ‘ಸಿರಿಗೆರೆ ಗುರುಗಳನ್ನು ನೋಡಿ ನಮ್ಮ ಗಡಿಯಾರಗಳನ್ನು ಸರಿಮಾಡಿಕೊಳ್ಳಬೇಕು’ ಎಂಬುದು ಆಗ ಪ್ರಚಲಿತವಿದ್ದ ಮಾತು. ಲಿಂಗೈಕ್ಯ ಶ್ರೀಗಳು ತಮ್ಮ ಜೀವಿತದ ಅಂತಿಮ ಕ್ಷಣದವರೆಗೂ ಶರಣ ತತ್ವದಲ್ಲಿ ಅಚಲ ನಂಬಿಕೆಯಿಟ್ಟು ನಡೆದವರು.

ಜಾತೀಯತೆಯ ಪಿಡುಗು ಸರ್ವವ್ಯಾಪ್ತಿಯಾಗುತ್ತಿರುವ ಪ್ರಸ್ತುತ ಸಂದರ್ಭದ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ಜಾತ್ಯತೀತತೆಯ ನಿಲುವು ಪ್ರಶ್ನಾತೀತವಾಗಿದ್ದು ಅಚ್ಚರಿ ಮೂಡಿಸುತ್ತದೆ. ಅವರು ಮದುವೆಗಳ ಮೂಲಕ ಅಂತರ್ಜಾತೀಯ, ಅಂತರ್‌ ಧರ್ಮೀಯ, ಅಂತರರಾಷ್ಟ್ರೀಯ ಸಂಬಂಧಗಳನ್ನು ಪೊರೆದು ಫೋಷಿಸಿದರು. ಖ್ಯಾತ ಸಮಾಜಶಾಸ್ತ್ರಜ್ಞ ಡಾ. ಹಿರೇಮಲ್ಲೂರು ಈಶ್ವರನ್ ಹಾಗೂ ಹಾಲೆಂಡಿನ ಒಬಿನಾ ಡಿ.ಸಿಟರ್ ಇವರ ವಿವಾಹವನ್ನು ಶ್ರೀಮಠದಲ್ಲಿ ತಮ್ಮ ನೇತೃತ್ವದಲ್ಲಿ ನೆರವೇರಿಸಿದರು (1960). ಅವರ ಮುಂದಾಳತ್ವದಲ್ಲಿ ನಡೆದ ವಿಧವಾ ವಿವಾಹಗಳು ಅನೇಕ.

‘ಶಿಕ್ಷಣದಲ್ಲಿ ಪರಿವರ್ತನೆಯಾಗದೆ ಜಗತ್ತಿಗೆ ಸುಖವಿಲ್ಲ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ವ್ಯಾವಹಾರಿಕ, ಆಧ್ಯಾತ್ಮಿಕ ಶಿಕ್ಷಣ ಕೊಡಬೇಕು.’ ‘ಯಾವ ಸಮಾಜದಲ್ಲಿ ಉತ್ತಮ ತಾಯಂದಿರು ಇಲ್ಲವೋ ಆ ಸಮಾಜವು ಮುಂದುವರೆಯುವುದು ಸಾಧ್ಯವಿಲ್ಲ.’ ‘ಹೊಟ್ಟೆಯಿದ್ದವನು ಉಣ್ಣಬೇಕು, ರಟ್ಟೆ ಇದ್ದವನು ದುಡಿಯಬೇಕು, ನೆತ್ತಿ ಇದ್ದವನು ಓದಬೇಕು’ ಎಂಬುವು ಅವರ ಘೋಷವಾಕ್ಯಗಳಾಗಿದ್ದವು.

ಕನ್ನಡ ಮತ್ತು ಸಂಸ್ಕೃತಗಳಲ್ಲಿ ಘನ ವಿದ್ವಾಂಸರಾಗಿದ್ದ ಸ್ವಾಮೀಜಿಯವರು ‘ಶತಮಾನೋತ್ಸವ ಸಂದೇಶ’, ‘ಅಣ್ಣ ಬಸವಣ್ಣ’ ಕೃತಿಗಳನ್ನಲ್ಲದೆ ‘ಮರಣವೇ ಮಹಾನವಮಿ’, ‘ಶರಣಸತಿ ಲಿಂಗಪತಿ’, ‘ವಿಶ್ವಬಂಧು ಮರುಳಸಿದ್ಧ’ ನಾಟಕಗಳನ್ನು ರಚಿಸಿದ್ದಾರೆ. ಅವರು 1937-38 ರಲ್ಲಿ ಬರೆದ ದಿನಚರಿಯನ್ನು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಚ್ಚುಕಟ್ಟಾಗಿ ಸಂಪಾದಿಸಿ ‘ಆತ್ಮ ನಿವೇದನೆ’ ಹೆಸರಿನಲ್ಲಿ ಪ್ರಕಟಿಸಿದ್ದಾರೆ.

ತಮ್ಮ ಆಧ್ಯಾತ್ಮ ಪಿತರಾದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಮಂಡೆಗೆ ಹುಲ್ಲು ತಾರದೆ ಹೂವು ತರುವ ದೀಕ್ಷೆ ತೊಟ್ಟಿರುವ ಪ್ರಸ್ತುತ ಪೀಠಾಧಿಪತಿಗಳಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಇಂದು ಶಿಕ್ಷಣ, ಸಾಹಿತ್ಯ, ವಿಜ್ಞಾನ, ಧರ್ಮ, ಗ್ರಾಮೀಣಾಭಿವೃದ್ಧಿ ಹಾಗೂ ಸಮಾಜಸೇವಾ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆಯಲ್ಲಿ ತೊಡಗಿಕೊಂಡು ಸರ್ವರ ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಶ್ರೀಗಳವರು ಲಿಂಗೈಕ್ಯ ಗುರುಗಳ ಮಾರ್ಗದಲ್ಲಿ ಸಾಗುತ್ತಾ ಅವರ ಕನಸನ್ನು ನನಸು ಮಾಡುವಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ.

ಲಿಂಗೈಕ್ಯ ಗುರುಗಳು ಬೆಳಗಿಸಿರುವ ಸಾಧನೆಯ ಸಾಲುದೀಪಗಳು ಇಂದು ಇಡೀ ನಾಡಿಗೆ ಬೆಳಕು ನೀಡುತ್ತಿವೆ. ಈ ದೀಪಗಳಿಂದ ತಮ್ಮ ಜೀವನ ಬೆಳಗಿಸಿಕೊಂಡವರು ಇನ್ನೊಂದು ದೀಪ ಬೆಳಗಿಸಿ ತಮ್ಮ ವೈಚಾರಿಕತೆಯನ್ನು ಜೀವಂತ ಇರಿಸಿಕೊಳ್ಳಬೇಕೆಂಬುದು ಲಿಂಗೈಕ್ಯ ಗುರುಗಳ ಆಶಯವಾಗಿತ್ತು. ಅವರ ಆಶಯದಂತೆ ಈ ಕ್ರಿಯೆಯನ್ನು ನಿರಂತರಗೊಳಿಸುವ ವಾರಸುದಾರಿಕೆ ನಾಡಿನ ಎಲ್ಲಾ ವಿಚಾರವಂತರ ಮೇಲಿದೆ.

ಲೇಖಕರು: ನಿವೃತ್ತ ಪ್ರಾಂಶುಪಾಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT